ಜಗಳೂರು: ಗೌರಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ, ಯುಥ್ ಫಾರ್ ಸೇವಾ ಸಂಸ್ಥೆ ಸಹಯೋಗದಲ್ಲಿ ಪಟ್ಟಣದಲ್ಲಿ ಮಣ್ಣಿನ ಗಣಪತಿ ಮಾಡುವ ಕಾರ್ಯಗಾರವನ್ನು ಭಾನುವಾರ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿತ್ತು.
ಭಾನುವಾರ ಪಟ್ಟಣದ ಗುರುಭವನದಲ್ಲಿ ಮಕ್ಕಳೇ ಜೇಡಿ ಮಣ್ಣಿನ ಗಣೇಶ ಮೂರ್ತಿಯನ್ನು ತಯಾರಿಸಿ ತಮ್ಮ ಮನೆಗೆ ತೆಗೆದುಕೊಂಡು ಹೋದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು, ಇದರ ಉಳಿವಿಗಾಗಿ ಎಲ್ಲ್ಲರೂ ಕೈಜೊಡಿಸಬೇಕಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಮತ್ತು ಕೆಮಿಕಲ್ ಬಣ್ಣಗಳಿಂದ ಅಲಂಕೃತ ಗಣೇಶ ಮೂರ್ತಿಗಳು ಕೆರೆಯಲ್ಲಿ ವಿಸರ್ಜನೆಗೊಂಡಾಗ ಸಂಪೂರ್ಣವಾಗಿ ಕರಗದೇ ಜಲಚರ ಪ್ರಾಣಿಗಳ ಸಾವಿಗೆ ಕಾರಣವಾಗುವುದಲ್ಲದೇ ಪರಿಸರಕ್ಕೂ ಸಹ ಹಾನಿ ಮಾಡುತ್ತವೆ.
ಆದ್ದರಿಂದ ಮಣ್ಣಿನಿಂದ ಮೂರ್ತಿ ತಯಾರಿಕೆ ಶಿಬಿರವನ್ನು ಯೂಥ್ ಫಾರ್ ಸೇವಾ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದು, ಈ ಬಣ್ಣ ರಹಿತ ಮಣ್ಣಿನ ಮೂರ್ತಿಗಳನ್ನು ಮಕ್ಕಳು ತಮ್ಮ ಮನೆಯಲ್ಲಿ ಕೂರಿಸಬಹುದಾಗಿದೆ ಎನ್ನುತ್ತಾರೆ ಯೂಥ್ ಫಾರ್ ಸೇವಾ ಸಂಸ್ಥೆಯ ಪ್ರಶಾಂತ್.
ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳನ್ನು ಮಾರಾಟ ಮಾಡಬಾರದು. ಕೆಮಿಕಲ್ ಬಣ್ಣ ಬಳಸಬಾರದು ಎಂದು ಮೂರ್ತಿ ಮಾರಾಟಗಾರರಿಗೆ ಈಗಾಗಲೇ ಸ್ಥಳೀಯ ಆಡಳಿತ ಸೂಚನೆ ನೀಡಿದ್ದು, ಇಂದು ಮಕ್ಕಳು ತಯಾರಿಸಿದ ಮೂರ್ತಿಯನ್ನು ತಮ್ಮ ತಮ್ಮ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಲಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ಕಿಫಾಯತ್ ನುಡಿದರು.
ನಾವೇ ಜೇಡಿ ಮಣ್ಣಿನಿಂದ ಗಣೇಶ ಮೂರ್ತಿ ತಯಾರಿಸಿದ್ದೇವೆ ಎಂಬ ಸಂತಸ ಇದೆ. ಜತೆಗೆ ಈ ಮೂರ್ತಿಯನ್ನು ಹಬ್ಬದ ದಿನದಂದು ನಮ್ಮ ಮನೆಯಲ್ಲಿ ಪ್ರತಿಷ್ಠಾಪನೆ ಮಾಡುತ್ತಿರುವುದು ಹೆಚ್ಚಿನ ಸಂತಸಕ್ಕೆ ಕಾರಣವಾಗಿದೆ ಎಂದು ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳಾದ ಸುಮ, ರಾಕೇಶ್ ಹೇಳಿದರು.