ರವಿಕುಮಾರ ಜೆ.ಓ. ತಾಳಿಕೆರೆ
ಜಗಳೂರು: ಪಟ್ಟಣದ ಸಾರ್ವಜನಿಕ ಗ್ರಂಥಾಲಯಕ್ಕೆ ಸ್ಥಳಾವಕಾಶದ ಕೊರತೆಯಿಂದ ಡಿಜಿಟಲ್ ಗ್ರಂಥಾಲಯದ ಭಾಗ್ಯ ಕೈ ತಪ್ಪುವ ಸಾಧ್ಯತೆಗಳು ದಟ್ಟವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗ್ರಂಥಾಲಯಕ್ಕೆ ಕಟ್ಟಡ ಭಾಗ್ಯ ಕಲ್ಪಿಸಬೇಕೆಂಬುದು ಜನರ ಒತ್ತಾಯವಾಗಿದೆ.
ಪಟ್ಟಣದ ಜೆಸಿಆರ್ ಬಡಾವಣೆಯ ಮನೆಯೊಂದರಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗ್ರಂಥಾಲಯ 1973 ರಲ್ಲಿ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾಗಿದ್ದು, ಇಂದಿಗೂ ಸಹ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ.
ಗ್ರಂಥಾಲಯಕ್ಕೆ ಪಿಯೂಸಿ, ಪದವಿ ವಿದ್ಯಾರ್ಥಿಗಳು ಸೇರಿದಂತೆ ಯುವಕರು, ವೃದ್ಧರು, ಸರಕಾರಿ ನೌಕರರು, ನಿವೃತ್ತರು ಸೇರಿದಂತೆ ಪ್ರತಿ ನಿತ್ಯ 600 ಕ್ಕೂ ಅಧಿಕ ಓದುಗರು ಭೇಟಿ ನೀಡುತ್ತಾರೆ. 1550 ಸದಸ್ಯರನ್ನು ಗ್ರಂಥಾಲಯ ಹೊಂದಿದೆ.
ಸ್ಥಳಾವಕಾಶದ ಕೊರತೆ : ಕಥೆ, ಕವನ, ಜೀವನ ಚರಿತ್ರೆ, ನಾಟಕ, ಇತಿಹಾಸ, ರಾಜಕೀಯ, ಆರ್ಥಿಕ, ಸಾಮಾಜಿಕ , ವೈದ್ಯಕೀಯ, ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 30 ಸಾವಿರ ಪುಸ್ತಕಗಳು ಇವೆ. ಇವುಗಳನ್ನು ಇಡಲು ಸ್ಥಳಾವಕಾಶದ ಕೊರತೆ ಇರುವುದರಿಂದ ಕೆಲವು ಪುಸ್ತಕಗಳನ್ನು ಕಟ್ಟಿ ಇಡಲಾಗಿದೆ.
ಡಿಜಿಟಲ್ ಗ್ರಂಥಾಲಯ ಭಾಗ್ಯ ಕೈತಪ್ಪುವ ಆತಂಕ: ಸರಕಾರ ರಾಜ್ಯದಲ್ಲಿನ ಗ್ರಂಥಾಲಯಗಳಿಗೆ ಆಧುನಿಕ ಸ್ಪರ್ಷ ನೀಡುವ ಸಲುವಾಗಿ ಡಿಜಿಟಲ್ ಗ್ರಂಥಾಲಯಗಳನ್ನು ಮಾಡಲು ಆದೇಶಿಸಿದ್ದು ಈ ಗ್ರಂಥಾಲಯದಲ್ಲಿ ಸ್ಥಳಾವಕಾಶ ಇಲ್ಲದೇ ಇರುವುದರಿಂದ ಕೈ ತಪ್ಪುವ ಲಕ್ಷಣಗಳಿವೆ.