ಜಗಳೂರು: ರಾಜ್ಯ ದೇವದಾಸಿ ವಿಮೋಚನಾ ಸಂಘ ಹಾಗೂ ಕರ್ನಾಟಕ ದೇವದಾಸಿ ಮಕ್ಕಳ ಹೋರಾಟ ಸಮಿತಿ ಜಂಟಿಯಾಗಿ ಅನೇಕ ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದರೂ ನಮ್ಮ ಬೇಡಿಕೆಗಳನ್ನು ಪರಿಗಣಿಸದೆ ವಿಳಂಬ ಮಾಡುತ್ತಿರುವ ಧೋರಣೆ ದೇವದಾಸಿಯರಿಗೆ ಮಾಡುತ್ತಿರುವ ಘೋರ ಅನ್ಯಾಯವೆಂದು ರಾಜ್ಯ ದೇವದಾಸಿ ವಿಮೋಚನಾ ಸಂಘಟನೆಯ ರಾಜ್ಯಾಧ್ಯಕ್ಷೆ ರೇಣುಕಮ್ಮ ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ದೇವದಾಸಿ ವಿಮೋಚನಾ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಮಾತನಾಡಿದರು.
ಪಜಾ ಹಾಗೂ ಪಂಗಡಗಳ ಜನಸಂಖ್ಯೆ ಅನುಗುಣವಾದ ಅನುದಾನವು ಪ್ರತಿವರ್ಷ 20,000 ಕೋಟಿಗಳಿಷ್ಟಿದ್ದರೂ ದೇವದಾಸಿಯರ ಮಾಸಿಕ ಸಹಾಯಧನ ಹೆಚ್ಚಳ ಮಾಡುತ್ತಿಲ್ಲ. ಗಣತಿ ಪಟ್ಟಿಯಲ್ಲಿ ಬಿಟ್ಟುಹೋದ ದೇವದಾಸಿ ಮಹಿಳೆಯರನ್ನು ಸೇರ್ಪಡೆ ಮಾಡುತ್ತಿಲ್ಲ. ಈ ಕೂಡಲೇ ರಾಜ್ಯ ಸರ್ಕಾರ ದೇವದಾಸಿ ಮಹಿಳೆಯರಿಗೆ ಮಾಸಿಕ 5000 ರೂ. ಮಾಸಾಶನ ಕೊಡಬೇಕು, ವಸತಿ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ದೇವದಾಸಿಯರ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ, ನೇರ ಪ್ರವೇಶ ಒದಗಿಸಬೇಕು. ಉದ್ಯೋಗ ದೊರಕುವವರೆಗೆ 5000 ರೂ. ನಿರುದ್ಯೋಗ ಭತ್ತೆ ನೀಡಬೇಕು. ಮಕ್ಕಳ ಮದುವೆಗೆ 5 ಲಕ್ಷ ರೂ. ಪ್ರೋತ್ಸಾಹಧನ ಯಾವುದೇ ಷರತ್ತುಗಳಿಲ್ಲದೆ ನೀಡಬೇಕೆಂದು ಒತ್ತಾಯಿಸಿದರು.
ಪ್ರಗತಿಪರ ಹೋರಾಟಗಾರ ಆರ್ ಓಬಳೇಶ್ ಮಾತನಾಡಿ, ಬರಗಾಲ ಹಾಗೂ ಪ್ರವಾಹದ ಹಿನ್ನೆಲೆಯಲ್ಲಿ ದೇವದಾಸಿಯರು ಹಾಗೂ ಅವರ ಮಕ್ಕಳ ಸ್ತೀ ಶಕ್ತಿ ಹಾಗೂ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಡಿಎಸ್‌ಎಸ್ ತಾಲೂಕು ಅಧ್ಯಕ್ಷ ಮಲೆಮಾಚಿಕೆರೆ ಸತೀಶ್, ದಲಿತ ಒಕ್ಕೂಟದ ಅಧ್ಯಕ್ಷ ವ್ಯಾಸಗೊಂಡನಹಳ್ಳಿ ರಾಜಪ್ಪ, ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಗೌರಿಪುರ ಮೈಲೇಶ್, ಕಾರ್ಯದರ್ಶಿ ಅನಂತರಾಜು ಬಿ ಎಂ, ದೇವದಾಸಿ ಸಂಘಟನೆಯ ತಾಲೂಕು ಅಧ್ಯಕ್ಷೆ ಕರಿಬಸಮ್ಮ, ಇತರರು ಇದ್ದರು.