ಜಗಳೂರು: ಬಿತ್ತನೆ ಶೇಂಗಾ ಬೀಜಕ್ಕಾಗಿ ರಾತ್ರಿಯಿಡೀ ಜಾಗರಣೆ ಮಾಡಿದ ನೂರಾರು ರೈತರು ಬಿತ್ತನೆ ಬೀಜ ದೊರೆಯದೆ ಆಕ್ರೋಶಗೊಂಡು ಕೃಷಿ ಇಲಾಖೆಗೆ ಮುತ್ತಿಗೆ ಹಾಕಿ ಸಹಾಯಕ ಕೃಷಿ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಇಂದಿಲ್ಲಿ ಗುರುವಾರ ಜರುಗಿದೆ.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆ ಮತ್ತು ಕೆಒಎಫ್‌ನಿಂದ ಶೇಂಗಾ ಬಿತ್ತನೆ ಬೀಜವನ್ನು ಕಳೆದ ಕೆಲವು ದಿನಗಳಿಂದ ವಿತರಿಸಲಾಗುತ್ತಿದೆ.
ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಮೆಕ್ಕೆಜೋಳ ಬಿತ್ತನೆ ಅವಧಿ ಮುಗಿದು ಹೋಗಿದ್ದು, ರೈತರೆಲ್ಲ ಶೇಂಗಾ ಬಿತ್ತನೆಗೆ ಮುಂದಾಗಿದ್ದಾರೆ.
ಬೀಜ ಪಡೆಯಲು ರೈತರು ಬುಧವಾರ ರಾತ್ರಿ ಗೋದಾಮಿನ ಹತ್ತಿರ ಮಲಗಿದ್ದು, ಸಾರತಿ ಸಾಲಿನಲ್ಲಿ ಸಾವಿರಾರು ರೈತರು ನಿಂತು ಕಾಯುತ್ತಿದ್ದರು. ಬೆರಳೆಣಿಕೆಯಷ್ಟು ರೈತರಿಗೆ ಬೀಜ ವಿತರಿಸಿ ಶೇಂಗಾ ಬೀಜ ಖಾಲಿಯಾಗಿವೆ ಎಂದು ಅಧಿಕಾರಿಗಳು ಗೋದಾಮಿಗೆ ಬೀಗ ಜಡಿದು ತೆರಳಿದ್ದಾರೆ.
ಇದರಿಂದ ಆಕ್ರೋಶಗೊಂಡ ರೈತರು ಕೃಷಿ ಇಲಾಖೆ ಕಚೇರಿಗೆ ತೆರಳಿ ಸಹಾಯಕ ಕೃಷಿ ಅಧಿಕಾರಿಗೆ ಮುತ್ತಿಗೆ ಹಾಕಿದರು. ಸಾರತಿ ಸಾಲಿನಲ್ಲಿ ನಿಂತ ಸಾವಿರಾರು ರೈತರಿಗೆ ಬೀಜ ದೊರೆಯುತ್ತಿಲ್ಲ. ಅಲ್ಲದೇ ಇಂದು ಒಂದು ಪಾಕೇಟ್‌ಗೆ 300 ರೂ. ಹೆಚ್ಚಿನ ದರ ಪಡೆದಿದ್ದಾರೆ. ಅಧಿಕಾರಿಗಳು ಪಕ್ಕದ ತಾಲೂಕಿನ ರೈತರು, ತಮ್ಮ ಸಂಬಂಧಿಕರಿಗೆ ಬೀಜ ವಿತರಣೆ ಮಾಡುತ್ತಿದ್ದಾರೆ ಎಂದು ದೂರಿದರು.
ಇದಲ್ಲದೇ ಪ್ರತಿನಿತ್ಯ 150 ಪಾಕೇಟ್ ಶೇಂಗಾ ಕಾಯಿ ಎಣ್ಣೆ ಮಿಲ್ಗೆ ಹೋಗುತ್ತಿವೆ. ಇದೊಂದು ದಂಧೆಯಾಗಿದೆ. ರೈತರಿಗೆ ಇಲಾಖೆಯವರು ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲಿಂದ ಅಧಿಕಾರಿಗಳು ಮತ್ತು ರೈತರು ತಹಶೀಲ್ದಾರ್ ಕಚೇರಿಗೆ ತೆರಳಿದರು. ತಹಶೀಲ್ದಾರ್‌ರು ಕೆಒಎಫ್ ಸಿಬ್ಬಂದಿ ಹನುಮಂತಪ್ಪನನ್ನು ಕಚೇರಿಗೆ ಕರೆಸಿ ಮಾಹಿತಿ ಪಡೆದಾಗ, ಇಲಾಖೆಯವರು ಬೆಳಗ್ಗೆ ಹೇಳಿದಂತೆ ದರ ಹೆಚ್ಚಿಸಲಾಗಿದೆ. ಈಗ ಗೋದಾಮಿನಲ್ಲಿ 1000 ಪಾಕೇಟ್ ದಾಸ್ತಾನು ಇದೆ ಎಂದರು. ಕೂಡಲೇ ಉಳಿದ ಬೀಜ ವಿತರಣೆಗೆ ತಹಶೀಲ್ದಾರ್ ಸೂಚಿಸಿದರು. ರೈತರ ಮೇಲೆ ಕೆಒಎಫ್ ಸಿಬ್ಬಂದಿ ಹನುಮಂತಪ್ಪ ಮಗ ಹಲ್ಲೆಗೆ ಮುಂದಾದಾಗ ರೈತರನ್ನು ತಹಶೀಲ್ದಾರ್ ಸಮಾಧಾನ ಪಡಿಸಿದ ಘಟನೆಯೂ ನಡೆಯಿತು.