Advertisement

ಹೈನುಗಾರಿಕೆಯಿಂದ ಹಸನಾಯ್ತು ಜಗಳೂರು ರೈತನ ಬದುಕು

10:41 AM Aug 05, 2019 | Naveen |

ರವಿಕುಮಾರ ಜೆ ಓ ತಾಳಿಕೆರೆ
ಜಗಳೂರು:
ತಾಲೂಕಿನ ದೊಣ್ಣೆಹಳ್ಳಿ ಗ್ರಾಮದ ಪ್ರಗತಿಪರ ರೈತ ಬಸವರಾಜಪ್ಪ ಎಂಬುವರು ಕೃಷಿ ಜತೆಗೆ ಸುಮಾರು 6 ವರ್ಷಗಳಿಂದ ದೇಸಿ ಹಸುಗಳ ಸಾಕಾಣಿಕೆ ಮಾಡಿ ಹೈನುಗಾರಿಕೆಯಿಂದ ತಮ್ಮ ಬದುಕನ್ನು ಹಸನು ಮಾಡಿಕೊಂಡಿದ್ದಾರೆ.

Advertisement

ತಾಲೂಕಿನ ದೊಣ್ಣೆಹಳ್ಳಿ ಗ್ರಾಮದ ಸಮೀಪ ತಮ್ಮ 15 ಎಕರೆ ಜಮೀನಿನಲ್ಲಿ ಅಡಿಕೆ, ತೆಂಗು, ಈರುಳ್ಳಿ, ಶೇಂಗಾ ಸೇರಿ ಮಿಶ್ರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದರ ಜೊತೆಗೆ ತೋಟದಲ್ಲಿ ಫಾರಂ ತೆರೆದು ಗುಜರಾತ್‌ ಗೀರ್‌ ತಳಿಯ 28 ಹಸುಗಳು, 4 ದೇವಣೆಕಾರ್‌ ತಳಿ ಸೇರಿದಂತೆ ಒಟ್ಟು 30 ಹಸು ಸಾಕಾಣಿಕೆ ಮಾಡುತ್ತಿದ್ದಾರೆ. ಈ ಹಸುಗಳಿಂದ ಹಾಲು, ಮೊಸರು, ತುಪ್ಪ ಹಾಗೂ ಆರ್ಕ ತಯಾರಿಸುವ ಘಟಕವನ್ನು ಮನೆಯಲ್ಲಿ ಮಾಡಿಕೊಂಡು ಆದಾಯ ಗಳಿಸುತ್ತಿದ್ದಾರೆ.

ತಾಲೂಕಿನಲ್ಲಿಯೇ ಪ್ರಥಮ ಬಾರಿಗೆ ಹೈನುಗಾರಿಕೆಯಲ್ಲಿ ಯಶಸ್ಸು ಸಾಧಿಸಿದ ರೈತ ಬಸವರಾಜಪ್ಪಗೆೆ ಇಡೀ ಕುಟುಂಬವೇ ಸಾಥ್‌ ನೀಡುತ್ತಿದೆ.

ಹಸುಗಳನ್ನು ಮೇಯಿಸಲು 1 ಎಕರೆ ಜಮೀನಿನಲ್ಲಿ ನೇಪಿಯರ್‌ ಮೇವು ಬೆಳೆ ಇದೆ. ಇದರ ಜೊತೆಗೆ ಶೇಂಗಾ ಹೊಟ್ಟು, ರಾಗಿ ಹುಲ್ಲು, ಹಸಿ ಮೇವಿನ ಮಿಶ್ರಣದ ಜೊತೆಗೆ ಮೆಕ್ಕೆಜೋಳ, ಹುರುಳಿ ಕಾಳು, ತೊಗರಿಬೆಳೆ, ಅಲಸಂ, ಹೆಸರು ಕಾಳಿನೊದಿಂಗೆ ಮೇವು ಗಳನ್ನು ಪ್ರತಿನಿತ್ಯ ನೀಡುತ್ತಿದ್ದಾರೆ .

ಉತ್ತಮ ಬೇಡಿಕೆ: ಹಸುಗಳ ಅರ್ಧ ಹಾಲನ್ನು ಕರುಗಳಿಗೆ ನೀಡಿ ಉಳಿದ ಅರ್ಧ ಹಾಲು ಮಾರಾಟ ಮಾಡುತ್ತಾರೆ. ಪ್ರತಿ ಲೀಟರ್‌ ಹಾಲು 80 ರೂ ಗೆ ಮಾರಾಟವಾಗುತ್ತದೆ. ಗೀರ್‌ ಹಸುಗಳ ಹಾಲಿನಲ್ಲಿ ಔಷಧೀಯ ಗುಣಗಳಿರುವುದರಿಂದ ತುಪ್ಪಕ್ಕೆ ಭಾರಿ ಬೇಡಿಕೆ ಇದೆ. ಬೆಣ್ಣೆ ಮತ್ತು ತುಪ್ಪವನ್ನು ಮನೆಯಲ್ಲಿಯೇ ತಯಾರಿಸುತ್ತಾರೆ, ಪ್ರತಿ ಕೆ.ಜಿ. ತುಪ್ಪ 1800 ರೂ., ಬೆಣ್ಣೆ 1200 ರೂ. ವರೆಗೆ ಮಾರಾಟವಾಗುತ್ತದೆ. ಸುತ್ತಮುತ್ತಲ ಜಿಲ್ಲೆಯಲ್ಲದೇ ನರೆಯ ರಾಜ್ಯಗಳು, ದೇಶ ವಿದೇಶಗಳಿಗೆ ಬೆಣ್ಣೆ ಮತ್ತು ತುಪ್ಪ ರಫ್ತು ಆಗುತ್ತದೆ.

Advertisement

ಆರ್ಕ ತಯಾರಿಕೆ: ಗೋಮೂತ್ರದಿಂದ ಆರ್ಕವನ್ನು ತಯಾರಿಸಲಾಗುತ್ತದೆ. ಪ್ರತಿದಿನ ಬೆಳಗ್ಗೆ ಗೋವುಗಳು ವಿಸರ್ಜಿಸುವ ಮೂತ್ರ ನೆಲಕ್ಕೆ ಬೀಳುವ ಮುನ್ನವೇ ಮಣ್ಣೆನ ಮಡಿಕೆಯಲ್ಲಿ ಸಂಗ್ರಹಿಸಿ ನಂತರ ಮೂರು ಮಡಿಕೆಯನ್ನು ಒಲೆಯ ಮೇಲಿಟ್ಟು ಭಟ್ಟಿ ಇಳಿಸಿ, ಫಿಲ್ಟರ್‌ ಮಾಡಲಾಗುತ್ತದೆ. ನಂತರ ಬಾಟಲಿಯಲ್ಲಿ ಸಂಗ್ರಹಿಸಿ ಪ್ರತಿ ಲೀಟರ್‌ಗೆ 150 ರೂ. ಗೆ ಮಾರಾಟ ಮಾಡಲಾಗುತ್ತದೆ. ಕ್ಯಾನ್ಸರ್‌, ಕೆಮ್ಮು, ಶೀತ, ಗ್ಯಾಸ್ಟ್ರಿಕ್‌ ಸಮಸ್ಯೆಗಳಿಗಾಗಿ ಆರ್ಕ ಬಳಕೆ ಮಾಡಲಾಗುತ್ತದೆ.

ಜೀವಮೃತ ತಯಾರಿಕೆ: ಬಸಣ್ಣ ತಮ್ಮ ಜಮೀನಿಗೆ ರಾಸಾಯನಿಕ ಗೊಬ್ಬರ ಬಳಸದೇ ಜೀವಮೃತವನ್ನು ಬಳಕೆ ಮಾಡಿಕೊಂಡು ಬಂದಿದ್ದಾರೆ. ಇದರಿಂದ ಉತ್ತಮ ಫಸಲು ಪಡೆಯುತ್ತಿರುವುದಲ್ಲದೇ ಭೂಮಿ ಫಲವತ್ತತೆ ಕೂಡ ಹೆಚ್ಚಾಗುತ್ತದೆ.

ಆರು ವರ್ಷಗಳ ಹಿಂದೆ ನಾವು ನಾಲ್ಕು ಗೀರ್‌ ತಳಿಯ ಹಸುಗಳನ್ನು ತಂದು ಸಾಕಾಣಿಕೆ ಆರಂಭಿಸಿದೆವು. ಈಗ ಹಸುಗಳ ಸಂಖ್ಯೆ 30 ಕ್ಕೂ ಹೆಚ್ಚು ಆಗಿದೆ. ಇವುಗಳ ಜೊತೆಗೆ ನಮ್ಮ ಕುಟುಂಬಕ್ಕೆ ಭಾವನಾತ್ಮಕ ಸಮಬಂಧ ಬೆಳೆದಿದೆ. ಕುಟುಂಬದವರೆಲ್ಲ ದುಡಿಯುವುದರಿಂದ ಖರ್ಚು ವೆಚ್ಚ ಕಳೆದು ಹೈನುಗಾರಿಕೆಯಿಂದ ವರ್ಷಕ್ಕೆ ಸುಮಾರು 3 ಲಕ್ಷ ರೂ. ಆದಾಯ ಬರುತ್ತದೆ.
ಕೆ. ಬಸವರಾಜ, ರೈತ

Advertisement

Udayavani is now on Telegram. Click here to join our channel and stay updated with the latest news.

Next