ರವಿಕುಮಾರ ಜೆ.ಓ.
ಜಗಳೂರು: ಪಟ್ಟಣದ ಮುಖ್ಯ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಡಾಂಬರ್ ಕಿತ್ತು ಹೋಗಿ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದ್ದರು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಇರುವುದೊಂದೇ ಮುಖ್ಯ ರಸ್ತೆ ಅದು ಕೂಡ ರಾಜ್ಯ ಹೆದ್ದಾರಿಯಾಗಿ ಪರಿವರ್ತನೆಯಾಗಿದ್ದು, ಪ್ರತಿನಿತ್ಯ ನೂರಾರು ವಾಹನಗಳ ಸಂಚಾರ ನಡೆಸುತ್ತಿವೆ. ಜತೆಗೆ ಬೃಹದಾಕಾರದ ಲಾರಿಗಳು ಸಹ ಓಡಾಟ ನಡೆಸುವುದರಿಂದ ರಸ್ತೆ ಹದಗೆಡಲು ಪ್ರಮುಖ ಕಾರಣ ಎನ್ನಲಾಗಿದೆ.
ರಸ್ತೆಗೆ ಡಾಂಬರೀಕರಣ ಮಾಡಿ ಹಲವಾರು ವರ್ಷಗಳೇ ಕಳೆದಿವೆ. ಇಲಾಖೆಯುವರು ಮರು ಡಾಂಬರೀಕರಣ ಮಾಡಿಲ್ಲ. ಪಟ್ಟಣಕ್ಕೆ ಮುಖ್ಯಮಂತ್ರಿ, ಸಚಿವರು ಬರುತ್ತಾರೆಂದರೆ ಮಾತ್ರ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುತ್ತಾರೆ ವಿನಃ ಶಾಶ್ವತ ಪರಿಹಾರ ಇದುವರೆಗೂ ಮಾಡಿಲ್ಲ. ಇದರಿಂದಾಗಿ ಗುಂಡಿ ಬಿದ್ದ ರಸ್ತೆಗಳಲ್ಲಿ ವಾಹನ ಸವಾರರು ಸಂಚಾರ ಮಾಡುವಂತಾಗಿದೆ ಎನ್ನುತ್ತಾರೆ ವ್ಯಾಪಾರಿ ನಿಂಗಪ್ಪ.
ಪಟ್ಟಣದ ಮಹಾತ್ಮಾ ಗಾಂಧಿಧೀಜಿ (ಹಳೆ ಬಸ್ ನಿಲ್ದಾಣ) ದಿಂದ ಅಂಬೇಡ್ಕರ್ ವೃತ್ತ, ಬಿದರಕೆರೆ ರಸ್ತೆ, ದಾವಣಗೆರೆ ರಸ್ತೆ ಸೇರಿದಂತೆ ಬಹುತೇಕ ರಸೆಗಳಲ್ಲಿ ಡಾಂಬರ್ ಕಿತ್ತು ಹೋಗಿರುವುದರಿಂದ ರಸ್ತೆಯ ತುಂಬ ಹದಗೆಟ್ಟಿದೆ. ಹಳೆ ಬಸ್ ನಿಲ್ದಾಣವು ಚಳ್ಳಕೆರೆ, ಚಿತ್ರದುರ್ಗ, ಕೊಟ್ಟೂರಿಗೆ ಪ್ರತಿನಿತ್ಯ ನೂರಾರು ಬಸ್‌ಗಳು ಮತ್ತು ಬೃಹತ್ ಲಾರಿಗಳು ಸಂಚರಿಸುತ್ತಿವೆ. ವಾಹನಗಳಿಂದಲೇ ಬೃಹದಾಕಾರದ ಗುಂಡಿಗಳು ಬಿದ್ದಿವೆ. ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ರಸ್ತೆಗಳು ಇನ್ನಷ್ಟು ಹದಗೆಟ್ಟಿದ್ದು, ಅರ್ಧ ಅಡಿಗೂ ಹೆಚ್ಚು ಹಳದವರೆಗೆ ಗುಂಡಿಗಳು ನಿರ್ಮಾಣವಾಗಿವೆ. ಈ ರಸೆಯಲ್ಲಿ ಚಿಕ್ಕಪುಟ್ಟ ವಾಹನಗಳು ಸಂಚರಿಸಲು ಹರಸಾಹಸ ಪಡುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.