Advertisement

ಜಗಳೂರು ಪಪಂ: ಉಳಿತಾಯ ಬಜೆಟ್‌ ಮಂಡನೆ

12:30 PM Mar 15, 2022 | Team Udayavani |

ಜಗಳೂರು: ಪಟ್ಟಣ ಪಂಚಾಯತ್ ಅಧ್ಯಕ್ಷ ಸಿದ್ದಪ್ಪರವರು 2022-23 ಸಾಲಿನಲ್ಲಿ 18,11,760 ರೂ.ಗಳ ಉಳಿತಾಯ ಬಜೆಟ್‌ ಮಂಡಿಸಿದರು. 2022-23ನೇ ಸಾಲಿಗೆ ನಿರೀಕ್ಷಿಸಿದ ಆದಾಯ 64 ಕೋಟಿ 33 ಲಕ್ಷದ 18 ಸಾವಿರದ 660 ರೂ ಆಗಿದೆ. ಖರ್ಚು 64 ಕೋಟಿ 15 ಲಕ್ಷದ 5 ಸಾವಿರದ 900 ರೂ. ಅಂದಾಜಿಸಲಾಗಿದೆ. ಒಟ್ಟು 18 ಲಕ್ಷದ 11 ಸಾವಿರದ 760 ರೂ. ಉಳಿತಾಯ ಬಜೆಟ್‌ ಆಗಿದೆ. ಆಸ್ತಿ ತೆರಿಗೆಯಿಂದ 64 ಲಕ್ಷ ರೂ. ಕ್ರೋಢೀಕರಣವಾಗಿದ್ದು ಇದರಲ್ಲಿ 16.64 ಲಕ್ಷ ರೂ. ಸರಕಾರಕ್ಕೆ ಪಾವತಿಸಬೇಕಾದ ಮೊತ್ತವಾಗಿದೆ.

Advertisement

ಪಟ್ಟಣ ಪಂಚಾಯಿತಿ ಆಸ್ತಿ ಮತ್ತು ಅಧಿಕಾರವನ್ನು ಬಳಸಿ ಸಂಗ್ರಹಿಸಿದ ಇತರೆ ಒಟ್ಟು ಅಂದಾಜು ಆದಾಯ (ಗುತ್ತಿಗೆ ಹೊರಗುತ್ತಿಗೆ ನೌಕರರ ವೇತನ, ತೆರಿಗೆ, ಕಚೇರಿಯ ಸ್ಟೇಷನರಿ ಹಾಗೂ ರಿಜಿಸ್ಟರ್‌ ಮತ್ತು ಇತರೆ ವೆಚ್ಚಗಳನ್ನು ಹೊರತುಪಡಿಸಿ). ಶೇ. 24.10ರ ಯೋಜನೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ 14, 06,476 ರೂ. ಕಾಯ್ದಿರಿಸಲಾಗಿದೆ. ಶೇ. 7.25 ಯೋಜನೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಕ್ಕೆ 4,23,110 ರೂ., ಶೇ. 5ರ ಯೋಜನೆಯಲ್ಲಿ ವಿಕಲಚೇತನರ ಅಭಿವೃದ್ಧಿಗಾಗಿ 2,91,800 ರೂ., ಕ್ರೀಡಾ ಯೋಜನೆಗಾಗಿ ಶೇ.1ರ ಮೊತ್ತ 58,360 ರೂ. ಕಾಯ್ದಿರಿಸಲಾಗಿದೆ ಎಂದರು.

ಪಟ್ಟಣದ ವಿವಿಧೆಡೆ ಹಾಗೂ ಅವಶ್ಯಕತೆ ಇರುವ ಕಡೆಗಳಲ್ಲಿ ಸಾರ್ವಜನಿಕ ಹೈಟೆಕ್‌ ಶೌಚಾಲಯ ನಿರ್ಮಾಣ, ವಿವಿಧ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ನಿರ್ಮಾಣ, ಬಾಕ್ಸ್‌ ಚರಂಡಿಗಳನ್ನು ನಿರ್ಮಿಸುವುದು, ಕೊಟ್ಟೂರು ರಸ್ತೆ, ಚಿತ್ರದುರ್ಗ ರಸ್ತೆ, ಮರೇನಹಳ್ಳಿ ರಸ್ತೆಯಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಜೆಟ್‌ನಲ್ಲಿ ಮುಕ್ತಿವಾಹನಕ್ಕೆ ಅನುದಾನ ನಿಗದಿಪಡಿಸಿರುವುದು ಶ್ಲಾಘನೀಯ ಎಂದು ಸದಸ್ಯ ಪಾಪಲಿಂಗ ಹೇಳಿದರು. ಬರೀ ಬಜೆಟ್‌ನಲ್ಲಿ ಸೇರಿಸುವುದು ಮುಖ್ಯವಲ್ಲ, ಸಾಮಾನ್ಯ ಸಭೆಯಲ್ಲೂ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಮೊನ್ನೆ ನಡೆದ ಹರಾಜಿನಿಂದ ಬಂದ ಹಣದಲ್ಲಿ ಈ ಬಾರಿಯಾದರೂ ಮುಕ್ತಿ ವಾಹನ ಖರೀದಿ ಮಾಡಬೇಕೆಂದರು. ಇದಕ್ಕೆ ಬಹುತೇಕ ಸದಸ್ಯರು ಸಹಮತ ವ್ಯಕ್ತಪಡಿಸಿದರು. ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚಿತ ವಿಷಯಗಳು, ಕೈಗೊಂಡ ನಿರ್ಣಯಗಳ ಬಗ್ಗೆ ಸಿಬ್ಬಂದಿಗಳು ಮಾಹಿತಿ ನೀಡುವುದಿಲ್ಲ ಎಂದು ಉಪಾಧ್ಯಕ್ಷೆ ಮಂಜಮ್ಮ ಅಸಮಾಧಾನ ವ್ಯಕ್ತಪಡಿಸಿದರು

ನಗರೋತ್ತರ ಯೋಜನೆಯಡಿ 5 ಕೋಟಿ ರೂ. ಅನುದಾನ ಬಂದಿದೆ. ಬಿಜೆಪಿ ಸದಸ್ಯರಿಗೆ ಸಿಂಹಪಾಲು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರಿಗೆ ಕಡಿಮೆ ಅನುದಾನ ನೀಡಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಸದಸ್ಯ ಶಕೀಲ್‌ ಆರೋಪಿಸಿದರು. ಸದಸ್ಯರಾದ ರವಿ, ತಿಪ್ಪೇಸ್ವಾಮಿ, ಶಕೀಲ್‌, ಮಹಮ್ಮದ್‌ ಅಲಿ, ಲೋಕಮ್ಮ, ಲಲಿತಮ್ಮ, ನಿರ್ಮಲಾಕುಮಾರಿ, ಆರೋಗ್ಯ ನಿರೀಕ್ಷಕ ಕಿಫಾಯತ್‌, ಸಿಬ್ಬಂದಿಗಳಾದ ನೂರುಲ್ಲಾ, ನಾಯಕ್‌, ಮೋದಿನ್‌, ಪುನೀತ್‌, ಮಂಜಮ್ಮ ಮತ್ತಿತರರು ಇದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next