Advertisement

ಮೌಡ್ಯತೆಯ ಬೇಲಿಯೊಳಗಿಂದ ಹೊರಬನ್ನಿ

06:30 PM Feb 26, 2020 | Naveen |

ಜಗಳೂರು: ಗ್ರಾಮದ ಸುತ್ತಮುತ್ತ ಹಾಕಿಕೊಂಡಿರುವ ಮುಳ್ಳಿನ ಬೇಲಿಯನ್ನು ತೆಗೆದರೆ ಸಾಲದು, ತಮ್ಮ ಮನಸ್ಸಿನೊಳಗಿರುವ ಮೌಡ್ಯತೆಯ ಬೇಲಿಯನ್ನು ಕಿತ್ತೆಸೆದು ಅನಿಷ್ಠ ಪದ್ಧತಿಯಿಂದ ಹೊರ ಬರಬೇಕೆಂದು ಜಿಲ್ಲಾ ಧಿಕಾರಿ ಮಹಾಂತೇಶ ಬೀಳಗಿ ಗ್ರಾಮಸ್ಥರಿಗೆ ಸಲಹೆ ನೀಡಿದರು.

Advertisement

ಪಟ್ಟಣದ ಅಣಬೂರು ಗೊಲ್ಲರಹಟ್ಟಿ ಗ್ರಾಮದ ಸರಕಾರಿ ಶಾಲೆ ಆವರಣದಲ್ಲಿ ಮಂಗಳವಾರ ಜನ ಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸುಮಾರು ಒಂದು ವರ್ಷದ ಹಿಂದೆ ಒಬ್ಬ ಮೂಕ ಮಹಿಳೆಯ ಮೇಲೆ ದೌರ್ಜನ್ಯ ನಡೆದು, ಈಗ ಆಕೆ ಒಂದು ಮಗುವಿನ ತಾಯಿಯಾಗಿದ್ದಾಳೆ. ಗ್ರಾಮದ ಜನರು ತಾಯಿ ಮತ್ತು ಮಗುವನ್ನು ಗ್ರಾಮದ ಹೊರವಲಯದಲ್ಲಿ ಇಟ್ಟಿರುವುದು ಸರಿಯಲ್ಲ. ಬಿಸಿಲು, ಚಳಿ, ಗಾಳಿ, ಮಳೆ ಎನ್ನದೇ ಕಣವೊಂದರಲ್ಲಿ ವಾಸ ಮಾಡುವ ತಾಯಿ ಮತ್ತು ಮಗುವನ್ನು ಗ್ರಾಮದೊಳಗೆ ಸೇರಿಸಿಕೊಳ್ಳಿ. ಇಲ್ಲವಾದರೆ ದಾವಣಗೆರೆಗೆ ಕರೆದೊಯ್ದು ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಕಲ್ಪಿಸಿ ಮಗುವಿಗೆ ನಾಮಕರಣ ಮಾಡಲಾಗುವುದು. ಯಾವುದೇ ಸಮಯದಲ್ಲಿ ತಾಯಿ ಮತ್ತು ಮಗು ಗ್ರಾಮಕ್ಕೆ ಮರಳಿ ಬಂದರೆ ಅವರನ್ನು ಹೊರಕಳಿಸದೇ ಪೋಷಕರು ಮನೆಯಲ್ಲಿ ಪೋಷಣೆ ಮಾಡುವಂತಾಗಬೇಕು ಎಂದರು.

ಆ ಮಹಿಳೆಯನ್ನು ಹೊರಗಿಟ್ಟಿರುವುದು ಸರಿಯಲ್ಲ. ನಾವೆಲ್ಲರೂ ಮಾನವರು. ಮನುಷ್ಯತ್ವದಿಂದ ಬದುಕುವುದದನ್ನು ಕಲಿಯಬೇಕು. ಮೂಢನಂಬಿಕೆಯನ್ನು ತಲೆಯಿಂದ ತೆಗೆದು ಹಾಕಬೇಕು. ಮೂಕ ಅಮ್ಮನಿಗೆ ಹುಟ್ಟಿದ ಕೂಸು ಏನು ಪಾಪ ಮಾಡಿದೆ ಎಂದು ಪ್ರಶ್ನಿಸಿದರು. ನಂತರ ತಾಯಿ ಮತ್ತು ಮಗುವನ್ನು ದಾವಣಗೆರೆಯ ನಿರಾಶ್ರಿತರ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಜಿಲ್ಲಾ ವರಿಷ್ಠಾಧಿಕಾರಿ ಹನುಮಂತರಾಯಪ್ಪ ಮಾತನಾಡಿ, ಮಹಿಳೆಯ ಮೇಲೆ ದೌರ್ಜನ್ಯವೆಸಗಿದ ವ್ಯಕ್ತಿಯನ್ನು ಈಗಾಗಲೇ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡು ನ್ಯಾಯಾಂಗದ ವಶಕ್ಕೆ
ಒಪ್ಪಿಸಲಾಗಿದೆ. ಮಗುವಿಗೆ ಜನ್ಮ ನೀಡಿದ ಮಹಿಳೆಯನ್ನು ಸುಮಾರು ಒಂದು ವರ್ಷದಿಂದ ಊರ ಹೊರಗಡೆ ಇಟ್ಟಿರುವುದು ಕಾನೂನಿಗೆ ವಿರುದ್ಧವಾದ ಸಂಗತಿಯಾಗಿದ್ದು ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಇನ್ನೂ ಮೌಡ್ಯತೆ ಜೀವಂತವಾಗಿದ್ದು, ಪುರಾತನ ಕಾಲದ ಗೊಡ್ಡು ಸಂಪ್ರದಾಯಗಳಿಂದ ಗ್ರಾಮದ ಜನರು ಹೊರ ಬರಬೇಕು. ತಾಯಿ ಮತ್ತು ಮಗುವನ್ನು ಗ್ರಾಮದೊಳಗೆ ಸೇರಿಸಿಕೊಂಡು ಪ್ರೀತಿ ವಿಶ್ವಾಸದಿಂದ ಕಾಣಬೇಕಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಮೇಲು ಕೀಳೆಂಬ ಭೇದಭಾವವನ್ನು ತೊಡೆದು ಹಾಕಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ ವಿಜಯ್‌ ಕುಮಾರ್‌ , ಸಿಪಿಐ ದುರುಗಪ್ಪ, ಪಿಎಸೆ„ ಉಮೇಶ್‌ ಬಾಬು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ್‌, ಪ.ವರ್ಗಗಳ ಕಲ್ಯಾಣಾಧಿಕಾರಿ ಮಹೇಶ್ವರಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next