Advertisement

ವಿದ್ಯುತ್‌ ಸರಬರಾಜಿಗೆ ಜಗದೀಶ ಶೆಟ್ಟರ ಸೂಚನೆ

02:43 PM May 16, 2017 | Team Udayavani |

ಹುಬ್ಬಳ್ಳಿ: ವಿದ್ಯುತ್‌ ಸರಬರಾಜಿನಲ್ಲಿ ಆಗುತ್ತಿರುವ ಸಮಸ್ಯೆಯಿಂದಾಗಿ ಅವಳಿ ನಗರದ ಜನರಿಗೆ ನೀರು ಪೂರೈಕೆ ವಿಳಂಬವಾಗುತ್ತಿದ್ದು, ನೀರು ಸರಬರಾಜಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು. 

Advertisement

ಸರ್ಕಿಟ್‌ ಹೌಸ್‌ನಲ್ಲಿ ಸೋಮವಾರ ಆಯೋಜಿಸಿದ್ದ ಕೆಪಿಟಿಸಿಲ್‌, ಹೆಸ್ಕಾಂ ಹಾಗೂ ಜಲಮಂಡಳಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೇ ತಿಂಗಳಿನ 15 ದಿನಗಳಲ್ಲಿ 21 ಬಾರಿ ವಿದ್ಯುತ್‌ ಪೂರೈಕೆಯಲ್ಲಿ ಸಮಸ್ಯೆಯಾಗಿದ್ದು ಒಟ್ಟು 13 ಗಂಟೆ 25 ನಿಮಿಷ ವಿದ್ಯುತ್‌ ಸ್ಥಗಿತಗೊಂಡಿದೆ. 

ಇದರಿಂದ 7-8 ದಿನಗಳಿಗೊಮ್ಮೆ ಕೂಡ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಸಮರ್ಪಕ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು. ಎಕ್ಸ್‌ಪ್ರೆಸ್‌ μàಡರ್‌ ಇದ್ದರೂ ವಿದ್ಯುತ್‌ ಸರಬರಾಜಿನಲ್ಲಿ ತೊಂದರೆಯಾಗುತ್ತಿರುವುದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು  ಎಂದು ಸೂಚಿಸಿದರು. 

ನಿಗದಿತ ಲೋಡ್‌ ಶೆಡ್ಡಿಂಗ್‌ ಮಾಡದಿದ್ದರಿಂದ ಕೈಗಾರಿಕಾ ಘಟಕಗಳು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಅವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಉದ್ಯಮಿಗಳು ಇಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿಲ್ಲ.

ಸರ್ಕಾರ ವಿದ್ಯುತ್‌ ಪೂರೈಕೆಗಾಗಿ ಸಾಕಷ್ಟು ಅನುದಾನ ನೀಡುತ್ತಿದ್ದು, ಸರಿಯಾಗಿ ವಿದ್ಯುತ್‌ ನೀಡಲು ಕ್ರಮ ತೆಗೆದುಕೊಳ್ಳಬೇಕೆಂದರು. ಜಲಮಂಡಳಿ ಸುಪರಿಂಟೆಂಡೆಂಟ್‌ ಎಂಜಿನೀಯರ್‌ ಸಿದ್ದನಾಯಕ ಮಾತನಾಡಿ, ಅವಳಿ ನಗರಕ್ಕೆ ಪ್ರತಿದಿನ 155 ಮಿಲಿಯನ್‌ ಲೀಟರ್‌ (ಎಂಎಲ್‌ಡಿ) ನೀರು ಪೂರೈಸಬೇಕು. 

Advertisement

ಆದರೆ, ಈಗ ವಿದ್ಯುತ್‌ ಸಮಸ್ಯೆಯಿಂದಾಗಿ ಪ್ರತಿದಿನ 145 ಎಂಎಲ್‌ಡಿ ನೀರು ಪೂರೈಸಲಾಗುತ್ತಿದೆ. ಅದರಲ್ಲಿ ಹುಬ್ಬಳ್ಳಿಗೆ 86 ಎಂಎಲ್‌ಡಿ ಹಾಗೂ 62 ಎಂಎಲ್‌ಡಿ ಧಾರವಾಡಕ್ಕೆ ಸರಬರಾಜು ಮಾಡಲಾಗುತ್ತದೆ. ದುಮ್ಮವಾಡದಿಂದ ನೀರು ಪಡೆಯಲಾಗುತ್ತಿಲ್ಲ. 

ಏಪ್ರಿಲ್‌ನಲ್ಲಿ 4-5 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿತ್ತು. ಆದರೆ ಮೇ ತಿಂಗಳಿನಲ್ಲಿ ಸಮಸ್ಯೆಯಾಗಿದೆ. 10 ನಿಮಿಷ ಕರೆಂಟ್‌ ಹೋದರೂ ಮತ್ತೆ ನೀರು ಪೂರೈಸಲು 2 ಗಂಟೆ ಬೇಕಾಗುತ್ತದೆ. ಆದ್ದರಿಂದ ಸಮರ್ಪಕವಾಗಿ ವಿದ್ಯುತ್‌ ಪೂರೈಸಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು. 

ಮತ್ತೂಂದು ಸಬ್‌ ಡಿವಿಜನ್‌: ಹೆಸ್ಕಾಂ ತಾಂತ್ರಿಕ ನಿರ್ದೇಶಕ ರಾಜಪ್ಪ ಮಾತನಾಡಿ, ಹುಬ್ಬಳ್ಳಿಯಲ್ಲಿ ವಿದ್ಯುತ್‌ ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ ಮತ್ತೂಂದು ಸಬ್‌ ಡಿವಿಜನ್‌ ಮಾಡಲಾಗುವುದು. ಅಕ್ಷಯ ಕಾಲೋನಿಯಲ್ಲಿ 110 ಕೆವಿ ವಿದ್ಯುತ್‌ ಕೇಬಲ್‌ ಜೋಡಿಸಲು ಚೆನ್ನೈನಿಂದ ತಜ್ಞರನ್ನು ಕರೆಸಲಾಗಿದೆ.

ಇನ್ನು 3 ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು. ಇನ್ಸುಲೇಟರ್‌ಗಳು ಒಡೆಯುತ್ತಿರುವುದರಿಂದ ಸಮಸ್ಯೆಯಾಗುತ್ತಿದ್ದು, ಮುಂದೆ ಅನ್‌ಬ್ರೇಕೆಬಲ್‌ ಇನ್ಸುಲೇಟರ್‌ಗಳನ್ನು ಅಳವಡಿಸಲಾಗುವುದು. ಈಗಾಗಲೇ ಇನ್ಸುಲೇಟರ್‌ಗಳನ್ನು ತರಿಸಲಾಗಿದೆ.

ಗ್ಲಾಸ್‌ಹೌಸ್‌ನಲ್ಲಿ 33 ಕೆವಿ ಸಬ್‌ ಸ್ಟೇಶನ್‌ ಮಾಡಲು ಯೋಜಿಸಲಾಗಿದೆ ಎಂದು ತಿಳಿಸಿದರು. ಉಪಮಹಾಪೌರ ಲಕ್ಷ್ಮಿ ಬಿಜವಾಡ, ಪಾಲಿಕೆ ಸದಸ್ಯ ಮಹೇಶ ಬುರ್ಲಿ, ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಹೆಸ್ಕಾಂ, ಕೆಪಿಟಿಸಿಎಲ್‌, ಜಲಮಂಡಳಿ ಅಧಿಕಾರಿಗಳು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next