ಬೆಂಗಳೂರು: ಮಹಾದಾಯಿ ವಿಚಾರದಲ್ಲಿ ಕರ್ನಾಟದ ಸಮಗ್ರ ಯೋಜನ ವರದಿಗೆ ತಡೆ ಕೊಡಿ ಎಂದು ಗೋವಾ ಸರಕಾರ ಕೋರ್ಟ್ ಮೆಟ್ಟಿಲೇರಿತ್ತು. ಈಗ ಗೋವಾ ಆಕ್ಷೇಪಣೆಯನ್ನು ಕೋರ್ಟ್ ತಳ್ಳಿ ಹಾಕಿದೆ. ಡಿಪಿಆರ್ ಮಂಜೂರಾಗಿದೆ ಎಂದು ನಾವು ಈಗ ಕೈಕಟ್ಟಿ ಕುಳಿತರೆ ವಿನಾಕಾರಣ ಯೋಜನೆ ತಡವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸರಕಾರಕ್ಕೆ ಕಿವಿಮಾತು ಹೇಳಿದ್ದಾರೆ.
ವಂದನ ನಿರ್ಣಯ ಚರ್ಚೆಯಲ್ಲಿ ಮಾತನಾಡಿದ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಕ್ರಮಗಳ ಬಗ್ಗೆ ಪ್ರಸ್ತಾವಿಸುತ್ತಲೇ ಹಾಲಿ ಸರಕಾರದ ಮಂದಗತಿಯ ಆಡಳಿತ ವೈಖರಿಯನ್ನು ಪರೋಕ್ಷವಾಗಿ ಚುಚ್ಚಿದರು.
ಮಹಾದಾಯಿ, ತುಪ್ರಿಹಳ್ಳ ನೀರಾವರಿ ಯೋಜನೆ, ಅಂಕೋಲಾ- ಹುಬ್ಬಳ್ಳಿ ರೈಲ್ವೆ ಮಾರ್ಗ, ಸಾರಿಗೆ ನಿಗಮಗಳ ಪುನರುಜ್ಜೀವನ, ಆರೋಗ್ಯ ಇಲಾಖೆಯ ನೇಮಕ ಪ್ರಕ್ರಿಯೆ, ಗುತ್ತಿಗೆ ನೌಕರರ ನೇಮಕ ಸೇರಿ ಹಲವು ವಿಚಾರಗಳನ್ನು ಸದನದ ಮುಂದಿಟ್ಟ ಅವರು, ಮಹದಾಯಿ ವಿಚಾರದಲ್ಲಿ ಆದಷ್ಟು ಬೇಗ ಪರಿಸರ, ಅರಣ್ಯ ಇಲಾಖೆಯಿಂದ ಒಪ್ಪಿಗೆ ಪಡೆದು ಯೋಜನೆ ಆರಂಭಿಸಬೇಕು. ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಿಸಬೇಕೆಂದು ಮನವಿ ಮಾಡಿದರು.
ಸಾರಿಗೆ ಸಂಸ್ಥೆ ನಷ್ಟದಲ್ಲಿದೆ
ವಾಯುವ್ಯ ಸಾರಿಗೆ ಸಂಸ್ಥೆ, ಈಶಾನ್ಯ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ವಾಯುವ್ಯ ಸಾರಿಗೆ ನಿಗಮದಲ್ಲಿ 9 ಲಕ್ಷ ಕಿಲೋ ಮೀಟರ್ ಓಡಿದ 2,621 ಬಸ್‌ಗಳಿವೆ. 12 ಲಕ್ಷ ಕಿ.ಮೀ. ಓಡಿರುವ 1,400 ಬಸ್‌ಗಳಿವೆ. ಇಂತಹ ಬಸ್‌ಗಳು ಹಳ್ಳಿಗಳಲ್ಲಿ ನಿಲ್ಲುತ್ತವೆ. ಬ್ರೇಕ್ ಫೇಲ್ ಆಗುತ್ತವೆ. ಪ್ರತಿನಿತ್ಯ ವಾಯುವ್ಯ ಸಾರಿಗೆ 1.67 ಲಕ್ಷ ರೂ. ನಷ್ಟದಲ್ಲಿದ್ದು, ಮಾಸಿಕ 5.01 ಕೋಟಿ ಮಾಸಿಕ ನಷ್ಟವಾಗುತ್ತಿದೆ. ನಾನು ಸಿಎಂ ಆಗಿದ್ದಾಗ ವಾಯುವ್ಯ ಸಾರಿಗೆ ಬಸ್ಸುಗಳ ರಸ್ತೆ ತೆರಿಗೆ ವಿನಾಯಿತಿ ನೀಡಿದ್ದೆ. ಇಂತಹ ಕ್ರಮಗಳಾದಾಗ ಆಸರೆ ಸಿಕ್ಕಂತಾಗುತ್ತದೆ ಎಂದರು.