ಹುಬ್ಬಳ್ಳಿ: ಮಾಜಿ ಮುಖ್ಯಂಮತ್ರಿ ಜಗದೀಶ ಶೆಟ್ಟರ ಅವರ ಅನುಭವ ಹಾಗೂ ಸೇವೆಗೆ ಪೂರಕವಾಗಿ ಉನ್ನತ ಸ್ಥಾನದ ಅವಕಾಶ ನೀಡುವುದಾಗಿ ವರಿಷ್ಠರು ತಿಳಿಸಿದ್ದರು. ಆದರೆ ಅವರು ತೆಗೆದುಕೊಂಡಿರುವ ನಿರ್ಧಾರ ಮನಸ್ಸಿಗೆ ಕಸಿವಿಸಿ ಹಾಗೂ ನೋವು ತಂದಿದೆ. ರಾಜ್ಯಮಟ್ಟದ ಕೋರ್ ಕಮಿಟಿಯಲ್ಲಿ ಅವರ ಹೆಸರಿತ್ತು, ಆದರೆ ಕೇಂದ್ರದಲ್ಲಿ ನಿರ್ಧಾರ ಬದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಒಂದಿಷ್ಟು ಬದಲಾವಣೆ, ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ನಿರ್ಧಾರ ಕೈಗೊಂಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದರು. ಅವರು ಸೂಚಿಸಿದಂತೆ ಅವರ ಪುತ್ರರಿಗೆ ಟಿಕೆಟ್ ನೀಡಲಾಯಿತು. ಅದರಂತೆ ಈಶ್ವರಪ್ಪ ಅವರು ನಿವೃತ್ತಿ ಘೋಷಿಸಿದರು. ಇದೇರೀತಿ ಶೆಟ್ಟರ ಅವರಿಗೆ ಮೂರು ತಿಂಗಳ ಹಿಂದೆಯೆ ಪಕ್ಷ ಸೂಚಿಸಿತ್ತು. ಅವರು ತಿಳಿಸಿದವರಿಗೆ ಟಿಕೆಟ್, ಉನ್ನತ ಸ್ಥಾನಮಾನ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು ಅವರು ತೆಗದುಕೊಂಡಿರುವ ನಿರ್ಧಾರ ನೋವು ತಂದಿದೆ ಎಂದರು.
ಇದನ್ನೂ ಓದಿ:ಆರಿಫ್ ಖಾನ್ ಬಳಿಕ ಮತ್ತೊಂದು ಸಾರಸ್ ಕ್ರೇನ್ – ವ್ಯಕ್ತಿಯ ನಡುವಿನ ಸ್ನೇಹದ ವಿಡಿಯೋ ವೈರಲ್
ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಮೂವರು ಹೋಗಿ ವ್ಯತಿರಿಕ್ತ ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡಿದೆವು. ನಾನೇ ಅಮಿತ ಶಾ ಅವರಿಗೆ ಕರೆ ಮಾಡಿ ಶೆಟ್ಟರ ಅವರಿಗೆ ಮಾತನಾಡಿಸಿದೆ. ಅವರು ಕೂಡ ದೆಹಲಿ ಮಟ್ಟದ ಉನ್ನತ ಸ್ಥಾನಮಾನ ನೀಡುವ ಭರವಸೆ ವ್ಯಕ್ತಪಡಿಸಿದರು. ಇದುವರೆಗೆ ನಮಗೆ ಪಕ್ಷದ ಆದರ್ಶ, ಮಾರ್ಗದರ್ಶನ ಮಾಡಿದ ಅವರು ರಾಜೀನಾಮೆ ಸಲ್ಲಿಸುತ್ತಿದ್ದಾರೆ ಎಂದರು.
ಇದು ಲಿಂಗಾಯತ ವಿರೋಧಿಯಲ್ಲ. ಹಲವು ಭಾಗದಲ್ಲಿ ಸಮಾಜದ ಸಾಕಷ್ಟು ನಾಯಕರಿಗೆ ಅವಕಾಶ ನೀಡಲಾಗಿದೆ. ಜಗದೀಶ ಶೆಟ್ಟರ ಅವರು ಈ ಭಾಗದ ಪ್ರಮುಖ ಲಿಂಗಾಯತ ಹಾಗೂ ಪಕ್ಷದ ಹಿರಿಯ ನಾಯಕರು. ಅವರ ಸೇವೆ, ಅನುಭವ ಪಕ್ಷಕ್ಕೆ ಉಳಿಸಿಕೊಳ್ಳಬೇಕು ಎಂದು ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ ಎಂದು ತಿಳಿಸಿದರು.