ಕೊಪ್ಪಳ: ಎಚ್ ವಿಶ್ವನಾಥ್ ಅವರಿಗೆ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷ ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಕೊಟ್ಟು ಗೌರವಿಸಲಿದೆ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಅವರು ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯ ಕೋರ್ ಕಮಿಟಿಯಿಂದ ಇವರ ಹೆಸರೂ ಸೇರಿದಂತೆ ಹಲವರ ಹೆಸರು ಚರ್ಚೆಗೆ ಬಂದಿದ್ದವು. ಪಕ್ಷದ ಹೈಕಮಾಂಡ್ ಒಂದು ನಿರ್ಧಾರ ಮಾಡಿ ಈಗ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದೆ. ಆ ಅಭ್ಯರ್ಥಿಗಳನ್ನ ನಾವು ಒಪ್ಪಲಿದ್ದೇವೆ. ವಿಶ್ವನಾಥ್ ಅವರು ನಮ್ಮನ್ನ ಬೆಂಬಲಿಸಿ ಬಂದಿದ್ದಾರೆ. ಪಕ್ಷ ಅವರನ್ನ ಎಂದೂ ಕೈ ಬಿಡಲ್ಲ. ಅವರಿಗೆ ಸೂಕ್ತವಾಗಿ ಗೌರವಿಸಲಿದೆ ಎಂದರು.
ಹೈಕಮಾಂಡ್ ಮಟ್ಟದಲ್ಲಿ ಏನು ನಡೆದಿದೆ ಎನ್ನುವ ವಿಚಾರವನ್ನ ನಾನು ಬಹಿರಂಗವಾಗಿ ಹೇಳಲು ಇಚ್ಛೆಪಡಲ್ಲ. ಪಕ್ಷ ಒಂದು ನಿರ್ಧಾರ ಕೈಗೊಂಡಿದೆ ಎಂದರೆ ನಾವು ಅದನ್ನ ಒಪ್ಪಲಿದ್ದೇವೆ. ಇದಕ್ಕಿಂತ ಹೆಚ್ಚೇನು ಮಾತಾಡಲ್ಲ ಎಂದರು.
ಇನ್ನೂ ಬಳ್ಳಾರಿ ಜಿಂದಾಲ್ ಕಾರ್ಖಾನೆಯಲ್ಲಿ ಕೋವಿಡ್ ಸೋಂಕು ಹೆಚ್ಚಳ ವಿಚಾರವಾಗಿ ಈಗಾಗಲೆ ಜಿಂದಾಲ್ ನಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಒಳಗೇ ಇರುವಂತೆ ಸೂಚನೆ ನೀಡಿದೆ. ಅಲ್ಲಿ ಒಳಗೆ ಯಾರೂ ಹೋಗುವಂತಿಲ್ಲ. ಅಲ್ಲಿನ ಕಾರ್ಮಿಕರು ಹೊರಗೆ ಯಾರೂ ಬರುವಂತಿಲ್ಲ ಎನ್ನುವ ಸೂಚನೆ ನೀಡಿದೆ. ಡಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಇನ್ನೂ ಜಿಂದಾಲ್ ಸೇರಿದಂತೆ ಹಲವು ಸ್ಟೀಲ್ ಕಾರ್ಖಾನೆ ಬಂದ್ ಮಾಡಲು ಕಷ್ಟಸಾಧ್ಯ ಏಕೆಂದರೆ ಬಂದ್ ಮಾಡಲು ಆರು ತಿಂಗಳು ಬೇಕು. ಬಂದ್ ಆದ ಬಳಿಕ ಆರಂಭ ಮಾಡಲು ನಾಲ್ಕಾರು ತಿಂಗಳು ಬೇಕು. ಏಕಾಏಕಿ ಬಂದ್ ಮಾಡುವುದು ಕಷ್ಟ. ಆದರೆ ಕೈಗಾರಿಕೆಯೊಳಗೆ ಸೋಂಕು ನಿಯಂತ್ರಣಕ್ಕೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಅದನ್ನು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈ ವೇಳೆ ಸಂಸದ ಸಂಗಣ್ಣ ಕರಡಿ, ಮುಖಂಡ ಅಮರೇಶ ಕರಡಿ ಸೇರಿ ಇತರರು ಉಪಸ್ಥಿತರಿದ್ದರು.