Advertisement

Hubli: ಬಂಡತನ ಇದ್ದರೆ ಏನು ಮಾಡುವುದಕ್ಕಾಗುತ್ತದೆ…; ಸಿಎಂ ಕುರಿತು ಶೆಟ್ಟರ್‌ ಮಾತು

04:02 PM Sep 30, 2024 | Team Udayavani |

ಹುಬ್ಬಳ್ಳಿ: ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರೆ ಅವರ ವ್ಯಕ್ತಿತ್ವಕ್ಕೆ ಒಳ್ಳೆಯದು.‌‌ ಬಂಡತನ ಇದ್ದರೆ ಏನು ಮಾಡುವುದಕ್ಕಾಗುತ್ತದೆ ಎಂದು ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.

Advertisement

ಸಿಎಂ ದಸರಾ ಉದ್ಘಾಟನೆ ವಿಚಾರವಾಗಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದೇನೆ ಎನ್ನುವ, ನೈತಿಕತೆ ಬಗ್ಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯನವರು ಇನ್ನು ಮೇಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಕುಟುಕಿದರು.

ಯಡಿಯೂರಪ್ಪನವರ ಮೇಲೆ ಎಫ್ಐಆರ್ ಆದಾಗ ಏನು ಮಾತನಾಡಿದ್ದರು. ಪ್ರಕರಣದ ವಿಚಾರಣೆ ನಡೆಯುವಾಗ ಅವರ ಕೆಳಗಿನ ಎಲ್ಲಾ ಅಧಿಕಾರಿಗಳು ಪ್ರಾಮಾಣಿಕವಾಗಿ ಹೇಗೆ ತನಿಖೆ ಮಾಡುವುದಕ್ಕೆ ಆಗುತ್ತದೆ. ಅದಕ್ಕೆ ರಾಜೀನಾಮೆ ಕೊಡಬೇಕು ಎಂದಿದ್ದ ಸಿದ್ದರಾಮಯ್ಯ ಈಗೇಕೆ ರಾಜೀನಾಮೆ ಕೊಡುತ್ತಿಲ್ಲ. ತಮ್ಮ ಆಗಿನ ಹೇಳಿಕೆ ಬಗ್ಗೆ ನೋಡಿಕೊಳ್ಳಲಿ. ಅವರು ಪ್ರವಾಸ ಮಾಡಿದಲ್ಲಿ ಬೆಲೆಯೇ ಇಲ್ಲಾ ಎಂದರು.

ಕೇಂದ್ರ‌ ಸಚಿವ ಎಚ್.ಡಿ. ಕುಮಾರಸ್ವಾಮಿ ಕುರಿತು ಎಡಿಜಿಪಿ ಚಂದ್ರಶೇಖರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳು ರಾಜಕಾರಣಿಗಳಂತೆ ವರ್ತಿಸಬಾರದು. ಕುಮಾರಸ್ವಾಮಿ ಕೇಂದ್ರದ ಸಚಿವರು.‌ ಪ್ರಧಾನಿ ಮೋದಿ ಕ್ಯಾಬಿನೆಟ್‌ ನಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾರೆ. ಹಿಂದಿನ ಯಾವುದೋ ಕೇಸ್‌ನ ಎಫ್ಐಆರ್ ಇಟ್ಟುಕೊಂಡು ಆಟವಾಡುತ್ತಿದ್ದಾರೆ. ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ.‌ ಎಲ್ಲರ ಮೇಲೂ ಎಫ್ಐಆರ್ ಮಾಡಿಸಿ ತೊಂದರೆ ಕೊಡುವುದು ಆರಂಭವಾಗಿದೆ. ಆ ಮೂಲಕ ಮುಡಾ ಹಗರಣದಲ್ಲಿ ಜನರ ಮನಸ್ಸು ಬೇರೆಡೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಕೇಂದ್ರ ಸಚಿವರ ಮೇಲೆ ಎಫ್ಐಆರ್ ಇದ್ದರೆ ಪ್ರಾಮಾಣಿಕವಾಗಿ ತನಿಖೆ ಮಾಡಲಿ. ಕೇಂದ್ರ ಮಂತ್ರಿಗಳ ವಿರುದ್ಧ ಅಧಿಕಾರಿ ತಮ್ಮ ಮಿತಿದಾಟಿ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮಾರ್ಗದರ್ಶನದಲ್ಲಿ ಇದೆಲ್ಲ ನಡಿಯುತ್ತಿದೆ. ಇದು ಸರಿಯಾದ ನಡೆಯಲ್ಲ ಎಂದರು.

Advertisement

ಕುಮಾರಸ್ವಾಮಿಯವರು ಕೇಂದ್ರಕ್ಕೆ ಈ ಬಗ್ಗೆ ದೂರು ನೀಡಿದ್ದಾರೆ. ಆಗ ಪೊಲೀಸ್ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಲೋಕಾಯುಕ್ತದವರು ಕುಮಾರಸ್ವಾಮಿ, ಯಡಿಯೂರಪ್ಪ ಅವರನ್ನು ಕರೆಯಿಸಿದ್ದಾಗ ವಿಚಾರಣೆಗೆ ಹಾಜರಾಗಿ ಬಂದರಲ್ಲ. ಅದನ್ನು ಬಿಟ್ಟು ಬೇಕಾಬಿಟ್ಟಿ ಮಾತನಾಡಿ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಹರಿಹಾಯ್ದರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮೇಲೆ ನ್ಯಾಯಾಧೀಶರ ಸೂಚನೆ ಮೇಲೆ ಎಫ್ಐಆರ್ ಮಾಡಿದ್ದಾರೆ. ಆ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ. ಆದರೆ ಪೊಲೀಸರು ಸತ್ಯ ಪರಿಶೀಲನೆ ಮಾಡದೆ ಎಫ್ಐಆರ್ ದಾಖಲು ಮಾಡಿದ್ದಾರೆ. ಕೇಂದ್ರ ಮಂತ್ರಿ ಮೇಲೆ ಕ್ರಮ ಕೈಗೊಳ್ಳಬೇಕಾದರೆ ಪ್ರಾಸಿಕ್ಯೂಷನ್ ಅಗತ್ಯವಲ್ಲವೇ? ಎಲೆಕ್ಟೋರಲ್ ಬಾಂಡ್ ದುಡ್ಡು ಕೊಟ್ಟವರು ಯಾರು ದೂರು ಕೊಟ್ಟಿಲ್ಲ. ಅವರೇನಾದರೂ ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿದೆ ಎಂದು ದೂರು ನೀಡಿದ್ದಾರೆಯೇ? ಆ ಮೂಲಕ ಸಿದ್ದರಾಮಯ್ಯ ಗುರಿಯಾಗಿಸುತ್ತಿದ್ದಾರೆ ಅನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಸರ್ಕಾರ ಹೇಳಿದರು ಅಂತ ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ. ನಿರ್ಮಲಾ ಸೀತಾರಾಮನ್ ಇದರಿಂದ ಬೆನಿಫಿಟ್ ಮಾಡಿಕೊಂಡಿದ್ದಾರಾ? ಎಲೆಕ್ಟೋರಲ್ ಬಾಂಡ್ ಮೂಲಕ ಕಾಂಗ್ರೆಸ್ ಹಾಗೂ ಬೇರೆ ಬೇರೆ ಪಕ್ಷಗಳಿಗೂ ಹಣ ಹೋಗಿದೆ ಎಂದರು.

ಇಡಿ ಬಳಸಿ ಬ್ಲಾಕ್ ಮೇಲ್ ಮಾಡಿ ಹಣ ಪಡೆದಿದ್ದಾರೆ ಅನ್ನುವ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಯಾರು ಇಡಿಯಿಂದ ದಾಳಿ ಮಾಡಿಸಿಕೊಂಡವರು ಈ ಬಗ್ಗೆ ಹೇಳಬೇಕಲ್ಲ. ರಾಹುಲ್ ಗಾಂಧಿ ನಿರ್ದೇಶನ ಇಲ್ಲದೇ ಇದೆಲ್ಲ ನಡೆಯಲು ಸಾಧ್ಯವಿಲ್ಲ ಎಂದರು.

ಯತ್ನಾಳರದ್ದು ವೈಯಕ್ತಿಕ ಹೇಳಿಕೆ: ಸಿಎಂ ಆಗಲು ಮಹಾನ್ ನಾಯಕ ಸಾವಿರ ಕೋಟಿ ರೂ. ತೆಗೆದಿಟ್ಟಿದ್ದಾರೆ ಅನ್ನುವುದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ವೈಯಕ್ತಿಕ ಹೇಳಿಕೆಯಾಗಿದ್ದು, ಆ ಬಗ್ಗೆ ಮತ್ತು ಅವರು ಪ್ರತ್ಯೇಕ ಸಭೆ ಮಾಡಿದ್ದರ ಬಗ್ಗೆಯೂ ಪ್ರತಿಕ್ರಿಯಿಸಲ್ಲ. ಈ ನಿಟ್ಟಿನಲ್ಲಿ ಪಕ್ಷ ಅಗತ್ಯ ಕ್ರಮ ಕೈಗೊಳ್ಳುತ್ತದೆ. ಅವರ ಹೇಳಿಕೆ ಅವರಿಗೆ ಸೀಮಿತ ಎಂದರು.

ಬೆಳಗಾವಿ ಜಿಲ್ಲೆಯ ವರ್ಗೀಕರಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಜಿಲ್ಲೆ ವಿಭಾಗಿಸುವುದು ಒಳ್ಳೆಯದು. ಆದರೆ ಅದನ್ನು ವೈಜ್ಞಾನಿಕವಾಗಿ ವಿಭಾಗಿಸಬೇಕು. ಆಡಳಿತಯಂತ್ರ ಸರಿಯಾಗಿ ಇರಬೇಕೆಂದರೆ ಜಿಲ್ಲೆಗಳು, ತಾಲೂಕು ಚಿಕ್ಕ ಚಿಕ್ಕದಾಗಿರಬೇಕು. ಬೆಳಗಾವಿ ಜಿಲ್ಲೆಯು ಇಬ್ಭಾಗವಾಗಿ ಪ್ರತ್ಯೇಕ ಜಿಲ್ಲೆಗಳಾಗಬೇಕು. ಇದಕ್ಕೆ ನಮ್ಮದೇನು ಅಭ್ಯಂತರವಿಲ್ಲ ಎಂದು ಶೆಟ್ಟರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next