ಷರತ್ತುಬದ್ಧ ಮಧ್ಯಾಂತರ ಜಾಮೀನು ಪಡೆದು ಬಿಡುಗಡೆಗೊಂಡಿದ್ದ ಹಿಂಜಾವೇ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ ಅವರಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಸಂಘಟನೆಗಳ ಕಾರ್ಯಕರ್ತರು ಸಂಭ್ರಮಾಚರಿಸಿದರು.
Advertisement
ಪೂರ್ಣಾವಧಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ಕಾರಂತರ ಪರ ವಕೀಲರ ವಾದವನ್ನು ಮನ್ನಿಸಿದ ಪುತ್ತೂರು ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯದ ಹೊರ ಭಾಗದಲ್ಲಿ ಸಂಘಟನೆಗಳ ಮುಖಂಡರು ಕಾರಂತರಿಗೆ ಹಾರ ಹಾಕಿ ಸಂಭ್ರಮಾಚರಣೆ ನಡೆಸಿದರು.
ಮಾತನಾಡಿದ ಜಗದೀಶ್ ಕಾರಂತ ಅವರು, ಇದು ಸತ್ಯಕ್ಕೆ ಸಂದ ಜಯವಾಗಿದ್ದು, ಸರಕಾರ ಪೊಲೀಸ್ ಇಲಾಖೆಯ ಮೂಲಕ ದುರುದ್ದೇಶದಿಂದ ಮಾಡಿದಂತಹ ಪ್ರಕರಣವಾಗಿದೆ. ಹಿಂದೂ ಸಂಘಟನೆಗಳನ್ನು ಮಟ್ಟ ಹಾಕುವ ಪ್ರಯತ್ನವನ್ನು ಪೊಲೀಸ್ ಇಲಾಖೆಯ ಮೂಲಕ ಸರಕಾರ ನಡೆಸುತ್ತಿದೆ. ಮತೀಯ ನೆಲೆಯಲ್ಲಿ ಗುರುತಿಸಿಕೊಂಡಿರುವ ಪುತ್ತೂರು ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಇಲಾಖೆಯ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ಮುರಳೀಕೃಷ್ಣ ಹಸಂತಡ್ಕ, ರವಿರಾಜ್ ಶೆಟ್ಟಿ ಕಡಬ, ಅಜಿತ್ ರೈ ಉಪಸ್ಥಿತರಿದ್ದರು.