ಪುತ್ತೂರು: ಶೃಂಗೇರಿ ಮಹಾ ಸಂಸ್ಥಾನದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಶುಕ್ರವಾರ ನಗರಕ್ಕೆ ಪದಾರ್ಪಣೆ ಮಾಡಿ, ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದಲ್ಲಿ ಪದವಿ ಕಾಲೇಜು, ಕಟ್ಟಡ ಉದ್ಘಾಟಿಸಿ, ಸಾರ್ವಜನಿಕ ಗುರುವಂದನೆ ಸ್ವೀಕರಿಸಿದರು. ಬೆಳಗ್ಗೆ ಸ್ವಾಮೀಜಿಯವರನ್ನು ಬಪ್ಪಳಿಗೆ ಬೈಪಾಸ್ ಜಂಕ್ಷನ್‌ನಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಅಂಬಿಕಾ ವಿದ್ಯಾಸಂಸ್ಥೆಯವರೆಗೆ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ಕಾಲೇಜು ಕಟ್ಟಡ ಉದ್ಘಾಟಿಸಿದ ಶ್ರೀಗಳು ಬಳಿಕ ಸಾರ್ವಜನಿಕ ಗುರುವಂದನೆ ಸ್ವೀಕರಿಸಿದರು.
ಜಗದ್ಗುರು ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಗೆ ಗುರುವಂದನಾ ಸಮಿತಿಯ ಪರವಾಗಿ ಅಧ್ಯಕ್ಷರಾದ ಶಾಸಕ ಸಂಜೀವ ಮಠಂದೂರು, ಕಾರ್ಯಾಧ್ಯಕ್ಷ ಎನ್.ಕೆ. ಜಗನ್ನಿವಾಸ್ ರಾವ್ ಗುರುವಂದನೆ ನೆರವೇರಿಸಿದರು. ನಟ್ಟೋಜ ಶಿವಾನಂದ ರಾವ್ ಹಾಗೂ ಸುಬ್ರಹ್ಮಣ್ಯ ನಟ್ಟೋಜ, ವಿವಿಧ ಸಂಘ ಸಂಸ್ಥೆಗಳು, ವಿವಿಧ ಸಮಾಜಗಳ ವತಿಯಿಂದ, ವೈಯಕ್ತಿಕ ನೆಲೆಯಲ್ಲಿ ಗುರುವಂದನೆ ಸಲ್ಲಿಸಲಾಯಿತು.
ವಿಶ್ರಾಂತ ಪ್ರಾಂಶುಪಾಲ ಪ್ರೊ| ವಿಷ್ಣು ಭಟ್ ಅಭಿನಂದನಾ ಪತ್ರ ವಾಚಿಸಿದರು. ವಿವಿಧ ಸಂಘ ಸಂಸ್ಥೆಗಳ ಪರವಾಗಿ ಶ್ರೀ ಮಹಾಲಿಂಗೇಶ್ವರನ ರಜತ ವಿಗ್ರಹ ಹಾಗೂ ಅಂಬಿಕಾ ವಿದ್ಯಾಲಯದ ಪರವಾಗಿ ಶ್ರೀ ಶಾರದೆಯ ವಿಗ್ರಹವನ್ನು ಸ್ವಾಮೀಜಿ ಅವರಿಗೆ ಸಮರ್ಪಿಸಲಾಯಿತು. ಸಿಇಟಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಅಂಬಿಕಾ ವಿದ್ಯಾಲಯದ 507ನೇ ರ್‍ಯಾಂಕ್ ಪಡೆದ ಕೆ.ಎಸ್. ಅಭಿಷೇಕ್ ಅವರನ್ನು ಸ್ವಾಮೀಜಿ ಗೌರವಿಸಿದರು.
ದೇಶದಲ್ಲೇ ಪ್ರಥಮ ಬಾರಿಗೆ ಮಂಗಳೂರು ವಿವಿ ಮೂಲಕ ಆರಂಭಿಸಲಾಗಿರುವ ಬಿಎಸ್ಸಿ ವಿಭಾಗದಲ್ಲಿ ತತ್ತÌಶಾಸ್ತ್ರ ಕಲಿಕೆಗೆ ಅಂಬಿಕಾ ವಿದ್ಯಾಲಯದಲ್ಲಿ ಚಾಲನೆ ನೀಡಲಾಯಿತು. ತತ್ವಶಾಸ್ತ್ರ ಪಠ್ಯಪುಸ್ತಕ ರಚನೆಯಲ್ಲಿ ಸಹಕರಿಸಿದವರಿಗೆ, ವಿವಿ ಪಠ್ಯ ಪುಸ್ತಕ ರಚನೆ ಸಮಿತಿಯವರನ್ನು ಸ್ವಾಮೀಜಿಯವರು ಗೌರವಿಸಿದರು.
ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್, ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಕೋಟೆಕಾರ್ ಶಾಖಾ ಮಠದ ಧರ್ಮಾಧ್ಯಕ್ಷ ಸತ್ಯಶಂಕರ್ ಬೊಳ್ಳಾವು, ಗುರುವಂದನಾ ಸಮಿತಿ ಕಾರ್ಯಾಧ್ಯಕ್ಷ ಎನ್.ಕೆ. ಜಗನ್ನಿವಾಸ್ ರಾವ್, ಕಾರ್ಯದರ್ಶಿ ಚಿದಾನಂದ ಬೈಲಾಡಿ, ಉಪಾಧ್ಯಕ್ಷರಾದ ಶಕುಂತಳಾ ಟಿ. ಶೆಟ್ಟಿ, ಅರುಣ್ ಕುಮಾರ್ ಪುತ್ತಿಲ, ಕೋಶಾಧಿಕಾರಿ ಪಿ. ಸತೀಶ್ ರಾವ್, ಸಂಚಾಲಕ ಕೆ. ಸುರೇಶ್ ಶೆಟ್ಟಿ, ಪ್ರಮುಖರಾದ ಎ. ಹೇಮನಾಥ ಶೆಟ್ಟಿ, ಸಾಜ ರಾಧಾಕೃಷ್ಣ ಆಳ್ವ, ಹರಿಣಿ ಪುತ್ತೂರಾಯ, ಯು. ಲೋಕೇಶ್ ಹೆಗ್ಡೆ ಉಪಸ್ಥಿತರಿದ್ದರು.
ಅಪರಾಹ್ನ ವಿದ್ವಾನ್ ಪ್ರಕಾಶ್ ಪಾವಗಡ ಅವರಿಂದ ಧಾರ್ಮಿಕ ಪ್ರವಚನ ನಡೆಯಿತು.