Advertisement

ಸಾಲಗಾರರಿಗೆ ಸ್ವಸಹಾಯ ಸಂಘಗಳು, ಬ್ಯಾಂಕಿನವರು ಸಾಲ ಕಟ್ಟುವಂತೆ ಪೀಡಿಸುವಂತಿಲ್ಲ

04:13 PM May 27, 2020 | sudhir |

ಧಾರವಾಡ: ಕೋವಿಡ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ವಸಹಾಯ ಸಂಘ, ಮೈಕ್ರೋ ಫೈನಾನ್ಸ್ ಹಾಗೂ ಬ್ಯಾಂಕ್ ನವರು ಸಾಲಗಾರರಿಗೆ ಸಾಲ ಅಥವಾ ಬಡ್ಡಿ ಕಟ್ಟುವಂತೆ ಪೀಡಿಸುವಂತಿಲ್ಲ. ಒಂದು ವೇಳೆ ಈ ರೀತಿ ಪೀಡಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

Advertisement

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇನ್ನೂ ಎರಡ್ಮೂರು ತಿಂಗಳು ಸಾಲಗಾರರಿಂದ ಸಾಲ ಅಥವಾ ಬಡ್ಡಿ ಕಟ್ಟಿಸಿಕೊಳ್ಳುವಂತಿಲ್ಲ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗಳು ಬ್ಯಾಂಕರ್ಸ್ ಗಳ ಸಭೆ ಕರೆದು ಅವರಿಗೆ ಸೂಚನೆ ನೀಡಲು ನಿರ್ದೇಶನ ನೀಡಲಾಗುತ್ತದೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ ಪತ್ತೆಯಾಗಿರುವ 43 ಕೋವಿಡ್ ಪಾಸಿಟಿವ್ ಪ್ರಕರಣಗಳ ಪೈಕಿ 10 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಾಕಿ ಇರುವ 33 ಜನರ ಪೈಕಿ ಎರಡ್ಮೂರು ಜನರನ್ನು ಹೊರತುಪಡಿಸಿದರೆ ಉಳಿದವರೆಲ್ಲರ ಆರೋಗ್ಯ ಸ್ಥಿರವಾಗಿದೆ. ನಾಳೆ ಅಥವಾ ನಾಡಿದ್ದು, ಇನ್ನೂ ಕೆಲವೊಂದಿಷ್ಟು ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಶೆಟ್ಟರ್ ತಿಳಿಸಿದರು.

ಸದ್ಯ ಜಿಲ್ಲೆಯಲ್ಲಿ ಕೋವಿಡ್ ಯಾವ ಸ್ಥಿತಿಯಲ್ಲಿದೆ. ಜಿಲ್ಲಾಡಳಿತ ಕೈಗೊಂಡಿರುವ ಹಾಗೂ ಮುಂದೆ ಕೈಗೊಳ್ಳಬೇಕಾಗಿರುವ ಮುಂಜಾಗೃತಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಇದರೊಟ್ಟಿಗೆ ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸದ್ಯ ಜಿಲ್ಲೆಯಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಸುಧಾರಣೆಯಾಗುತ್ತಿದೆ. ಸಾರ್ವಜನಿಕರು ಮಾಸ್ಕ್ ಗಳನ್ನು ಕಡ್ಡಾಯವಾಗಿ ಹಾಕಿಕೊಂಡು ಸುತ್ತಾಡಬೇಕು. ಕೋವಿಡ್ ಸದ್ಯಕ್ಕೆ ಮುಗಿದು ಹೋಗುವಂತದ್ದಲ್ಲ. ಎರಡ್ಮೂರು ವರ್ಷ ಇದೇ ಪರಿಸ್ಥಿತಿ ಇರಬಹುದು. ಆದ್ದರಿಂದ ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.

ಮಹಾನಗರ ಪಾಲಿಕೆಗಳು ಮೂರು ವರ್ಷಕ್ಕೊಮ್ಮೆ ಶೇ.15 ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡುವ ನಿಯಮವಿದೆ. ಬೆಳಗಾವಿ ಮಹಾನಗರ ಪಾಲಿಕೆ ಕೂಡ ಶೇ.25 ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಿದೆ. ಆದರೆ, ಈ ಸಂದರ್ಭದಲ್ಲಿ ತೆರಿಗೆ ಹೆಚ್ಚಳ ಮಾಡಿರುವುದು ಸರಿಯಲ್ಲ ಎಂದು ನನಗೂ ಅನಿಸಿದೆ. ಈ ಬಗ್ಗೆ ನಾಳೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ, ಮುಖ್ಯಮಂತ್ರಿಗಳ ಗಮನಕ್ಕೂ ತಂದು ಸಾಧ್ಯವಾದ ಮಟ್ಟಿಗೆ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವ ಕ್ರಮವನ್ನು ತಡೆದು ಹಳೆಯ ಆಸ್ತಿ ತೆರಿಗೆಯನ್ನೇ ತುಂಬುವಂತೆ ಮನವರಿಕೆ ಮಾಡಲಾಗುವುದು. ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಸಾರ್ವಜನಿಕರು ಬದ್ಧವಾಗಿರಬೇಕು. ಈಗ ತೆರಿಗೆ ತುಂಬುತ್ತಿರುವ ಸಾರ್ವಜನಿಕರು ತುಂಬಲಿ, ಒಂದು ವೇಳೆ ಸರ್ಕಾರ ಹಳೆಯ ಪದ್ಧತಿಯನ್ನೇ ಮುಂದುವರಿಸಿದರೆ, ಈಗಾಗಲೇ ತೆರಿಗೆ ಕಟ್ಟಿರುವ ಸಾರ್ವಜನಿಕರಿಗೆ ಮುಂದಿನ ತೆರಿಗೆಯಲ್ಲಿ ವಿನಾಯ್ತಿ ನೀಡಲಾಗುವುದು ಎಂದರು.

Advertisement

ಸದ್ಯ ಕೈಗಾರಿಕೆಗಳು ಆರಂಭವಾಗಿದ್ದು, ಕಾರ್ಮಿಕರ ಕೊರತೆ ಇದೆ. ಇದು ತಾತ್ಕಾಲಿಕ ಮಾತ್ರ. ಇನ್ನೊಂದು ತಿಂಗಳಲ್ಲಿ ಕಾರ್ಮಿಕರ ಸಮಸ್ಯೆ ಬಗೆಹರಿಯುವ ಭರವಸೆ ಇದೆ ಎಂದು ಶೆಟ್ಟರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next