ಸುವರ್ಣವಿಧಾನಸೌಧ: ಹುಬ್ಬಳ್ಳಿ-ಧಾರವಾಡ, ಕಲಬುರ್ಗಿ, ಬೆಳಗಾವಿ ನಗರಗಳಲ್ಲಿ 24×7 ನೀರು ಪೂರೈಸುವ ಹೊಣೆ ಹೊತ್ತಿರುವ ಖಾಸಗಿ ಕಂಪನಿಯನ್ನು ರದ್ದು ಪಡಿಸಿ ಅದನ್ನು ಮತ್ತೆ ಜಲಮಂಡಳಿಗೆ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ಮಂಗಳವಾರ ಅವರು ಶೂನ್ಯವೇಳೆಯಲ್ಲಿ ಈ ನಗರಗಳು ಎದುರಿಸುತ್ತಿರುವ ಕುಡಿಯುವ ನೀರಿನ ಬವಣೆಯನ್ನು ತಿಳಿಸಿ, ಹಿಂದೆ ಕೆಯುಐಡಿಎಫ್ಸಿಯವರು ನಿರ್ವಹಣೆ ಮಾಡುತ್ತಿದ್ದು, ಪ್ರಸ್ತುತ ಅದನ್ನು ಎಲ್‌ಎಂಡ್‌ಟಿ ಕಂಪನಿಗೆ ವಹಿಸಲಾಗಿದೆ, ಈಗ ಶೇ.30ರಷ್ಟು ಕಡೆ ಮಾತ್ರವೇ ದಿನದ 24 ಗಂಟೆ ನೀರು ಬರುತ್ತಿದೆ, ಉಳಿದ ಕಡೆ 8-10 ದಿನಕ್ಕೊಮ್ಮೆ ನೀರು ಬರುತ್ತಿದೆ, ಕಂಪನಿ ತೀರಾ ಅದಕ್ಷತೆ ತೋರುತ್ತಿದೆ, ಹಾಗಾಗಿ ಅದರ ಗುತ್ತಿಗೆರದ್ದು ಪಡಿಸಿ ಜಲಮಂಡಳಿಗೆ ವಹಿಸಬೇಕು ಎಂದು ಆಗ್ರಹಿಸಿದರು.
ಶೆಟ್ಟರ್ ಆರೋಪಕ್ಕೆ ಸ್ವರಸೇರಿಸಿದ ಶಾಸಕ ಅಭಯ ಪಾಟೀಲ್, ಬೆಳಗಾವಿಯ ಕೆಲವು ಕಡೆಗಳಲ್ಲಿ 15-20ದಿನಕ್ಕೊಮ್ಮೆ ನೀರು ಬರುವ ಪರಿಸ್ಥಿತಿ ಇದೆ ಎಂದರು.ಈ ಕುರಿತು ಉತ್ತರಿಸಿದ ಸಚಿವ ಬೈರತಿ ಬಸವರಾಜು, ಬೆಂಗಳೂರಿನಲ್ಲಿ ಕೆಲದಿನಗಳ ಹಿಂದೆಯಷ್ಟೇ ಗುತ್ತಿಗೆದಾರರನ್ನೂ ಕರೆದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ, 15 ದಿನದೊಳಗೆ ಸುಧಾರಿಸದಿದ್ದರೆಅವರ ಗುತ್ತಿಗೆ ರದ್ದುಪಡಿಸಿ ಜಲಮಂಡಳಿಗೆ ನೀಡುವುದಾಗಿ ಸೂಚಿಸಿದ್ದಾರೆ ಎಂದರು.
ಆದರೆ ಉತ್ತರದಿಂದ ತೃಪ್ತರಾಗದ ಶೆಟ್ಟರ್, ತಿಂಗಳ ಹಿಂದೆಯೇ ಸಭೆ ನಡೆದಿದೆ, ಇದುವರೆಗೆ ಸೂಚನೆಗಳನ್ನು ಕಂಪನಿ ಪಾಲನೆ ಮಾಡಿಲ್ಲ, ಯಾವುದೇ ಫಲಿತಾಂಶ ಬಂದಿಲ್ಲ ಎಂದರು. ಶೆಟ್ಟರ್ ಅವರನ್ನು ಸಮಾಧಾನ ಪಡಿಸಿದ ಸಚಿವ ಬಸವರಾಜ್, ಇನ್ನೂ ಒಂದುವಾರ ನೋಡೋಣ, ಕಂಪನಿ ಸರಿಯಾಗಿ ನೀರು ನಿರ್ವಹಣೆ ಮಾಡದಿದ್ದರೆ ನಿಮ್ಮ ಸಮಕ್ಷಮವೇ ಸಭೆ ಕರೆದು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಮುಡಿಪು: ಕಾರು ಢಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ಬಾಲಕ ಸ್ಥಳದಲ್ಲೇ ಸಾವು