Advertisement

ಶೆಟ್ಟರ್‌ ಇಂದು ಕಾಂಗ್ರೆಸ್‌ಗೆ? ಬೆಂಗಳೂರಿನಲ್ಲಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಜತೆ ಭೇಟಿ

12:43 AM Apr 17, 2023 | Team Udayavani |

ಬೆಂಗಳೂರು: ಬಿಜೆಪಿ ಟಿಕೆಟ್‌ ನಿರಾಕರಣೆಯಿಂದ ತೀವ್ರ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ರವಿವಾರ ಸಂಜೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಮೂಲಗಳ ಪ್ರಕಾರ ಅವರು ಸೋಮವಾರವೇ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಅವರು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುಜೇìವಾಲ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವ ಕುಮಾರ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

Advertisement

ಹುಬ್ಬಳ್ಳಿಯಿಂದ ತಮ್ಮ ಬೀಗರೂ ಕಾಂಗ್ರೆಸ್‌ ಹಿರಿಯ ನಾಯಕರೂ ಆದ ಶ್ಯಾಮನೂರು ಶಿವಶಂಕರಪ್ಪ ಮತ್ತು ಎಂ.ಬಿ. ಪಾಟೀಲ್‌ ಜತೆಗೆ ಶೆಟ್ಟರ್‌ ಅವರು ಬೆಂಗಳೂರಿಗೆ ಹೆಲಿಕಾಪ್ಟರ್‌ ನಲ್ಲಿ ಆಗಮಿಸಿದರು. ಬಳಿಕ ಅಪಾರ್ಟ್‌ ಮೆಂಟ್‌ ಒಂದರಲ್ಲಿ ಕಾಂಗ್ರೆಸ್‌ ನಾಯಕರ ಜತೆಗೆ ಸುದೀರ್ಘ‌ ಚರ್ಚೆ ನಡೆಸಿದರು. ಆದರೆ ಯಾವುದೇ ಕಾರಣಕ್ಕೂ ಶೆಟ್ಟರ್‌ ಕಾಂಗ್ರೆಸ್‌ ಸೇರುವುದಿಲ್ಲ ಎಂಬ ವಿಶ್ವಾಸವನ್ನು ಕೆಲವು ಬಿಜೆಪಿ ನಾಯಕರೂ ಈಗಲೂ ಹೊಂದಿದ್ದಾರೆ.

ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಕೆ
ಶನಿವಾರ ರಾತ್ರಿಯೇ ರಾಜೀನಾಮೆ ಘೋಷಣೆ ಮಾಡಿದ್ದ ಶೆಟ್ಟರ್‌ ರವಿವಾರ ಬೆಳಗ್ಗೆ ಶಿರಸಿಗೆ ತೆರಳಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಿದರು. ಇದಕ್ಕೆ ಮುನ್ನ ಸ್ಪೀಕರ್‌ ಜತೆಗೆ ರಹಸ್ಯ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ವರಿಷ್ಠರು ದೂರವಾಣಿ ಮುಖಾಂತರ ಸಂಪರ್ಕಿಸಿ ಶೆಟ್ಟರ್‌ ಮನವೊಲಿಕೆಗೆ ಮುಂದಾಗಿದ್ದು, ಶೆಟ್ಟರ್‌ ಪಟ್ಟು ಸಡಿಸಲಿಲ್ಲ ಎನ್ನಲಾಗಿದೆ.

ಅಂತಿಮವಾಗಿ ರಾಜೀನಾಮೆ ಸಲ್ಲಿಸಿ ಶಿರಸಿಯಿಂದ ಹುಬ್ಬಳ್ಳಿಗೆ ಆಗಮಿಸಿದ ಅವರು, ಸ್ವಲ್ಪ ಕಾಲ ತಮ್ಮ ಬೆಂಬಲಿಗರು, ಅಭಿಮಾನಿಗಳೊಂದಿಗೆ ಚರ್ಚಿಸಿ ಅನಂತರ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ
ಶಿರಸಿಯಲ್ಲಿ ನಾಮಪತ್ರ ಸಲ್ಲಿಸಿ ಹುಬ್ಬಳ್ಳಿಗೆ ಮರಳಿದ ಜಗದೀಶ ಶೆಟ್ಟರ್‌ ಉದ್ಯಮಿಯೊಬ್ಬರ ಹೆಸರಲ್ಲಿ ಬುಕ್‌ ಆಗಿದ್ದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತೆರಳಿದರು. ಡಿಕೆಶಿ ಅತ್ಯಾಪ್ತರ ಉಸ್ತುವಾರಿಯಲ್ಲಿ ಶೆಟ್ಟರ್‌ ಅವರ ಪುತ್ರ ಸಂಕಲ್ಪ, ಮುಖಂಡ ತವನಪ್ಪ ಅಷ್ಟಗಿ, ಉದ್ಯಮಿ ಜತೆಗಿದ್ದರು. ಒಂದು ವೇಳೆ ಶಿರಸಿಯಿಂದಲೇ ಬೆಂಗಳೂರಿಗೆ ತೆರಳುವ ಪ್ರಮೇಯ ಎದುರಾದರೆ ಮುನ್ನೆಚ್ಚರಿಕೆ ಕ್ರಮ ವಾಗಿ ಎರಡು ಹೆಲಿಕಾಪ್ಟರ್‌ಗಳನ್ನು ಸಹ ಸಜ್ಜುಗೊಳಿಸಲಾಗಿತ್ತು. ಕೊನೇ ಕ್ಷಣದಲ್ಲಿ ರಾಜೀನಾಮೆ ನೀಡಿ ಹುಬ್ಬಳ್ಳಿಗೆ ಬಂದಿದ್ದರಿಂದ ವಿಶೇಷ ವಿಮಾನದಲ್ಲಿ ತೆರಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next