ಬೆಂಗಳೂರು: ಬೆಳಗಾವಿ ಲೋಕಸಭಾ ಉಪಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ, ನನಗೆ ಆಸಕ್ತಿ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಹಾಗಿದ್ದರೂ ಯಾರೋ ನನ್ನ ಹೆಸರನ್ನು ತೇಲಿ ಬಿಡುತ್ತಿದ್ದಾರೆ ಎಂದು ಸಚಿವ ಜಗದೀಶ ಶೆಟ್ಟರ್ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ನೂತನ “ಕೈಗಾರಿಕಾ ನೀತಿ 2020-25′ ಬಿಡುಗಡೆಗೊಳಿಸಿ ಜಾಗೃತಿ ಮೂಡಿಸುವ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭೆ ಉಪಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗದ ಕಾರಣ ಅಭ್ಯರ್ಥಿ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಎರಡು ಬಾರಿ ನಡೆದ ಕೋರ್ ಕಮಿಟಿ ಸಭೆಯಲ್ಲೂ ಅಭ್ಯರ್ಥಿ ಆಯ್ಕೆ ಬಗ್ಗೆ ಮಾತುಕತೆ ನಡೆದಿಲ್ಲ ಎಂದು ಹೇಳಿದರು.
ಬೆಳಗಾವಿ ಲೋಕಸಭಾ ಉಪಚುನಾವಣೆ, ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಉಸ್ತುವಾರಿಗಳ ನೇಮಕವಾಗಿದ್ದು, ತಳಮಟ್ಟದಲ್ಲಿ ಸಿದ್ಧತಾ ಕಾರ್ಯ ನಡೆಯುತ್ತಿದೆ. ಅಭ್ಯರ್ಥಿ ಆಯ್ಕೆ ಹೊರತುಪಡಿಸಿ ಉಳಿದ ಪ್ರಕ್ರಿಯೆ ನಡೆದಿದೆ. ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಯಾರದ್ದೇ ಹೆಸರು ಪ್ರಸ್ತಾಪವಾದರೂ ದಿನಾಂಕ ಘೋಷಣೆಯಾಗುವವರೆಗೆ ಅಭ್ಯರ್ಥಿಯನ್ನು ಅಂತಿಮಗೊಳಿಸುವುದಿಲ್ಲ ಎಂದು ತಿಳಿಸಿದರು.
ತಮಗೆ ಅಥವಾ ತಮ್ಮ ಕುಟುಂಬದವರಿಗೆ ಸ್ಫರ್ಧಿಸುವ ಆಸೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಗದೀಶ ಶೆಟ್ಟರ್, ಇದು ಆಸೆ ಪ್ರಶ್ನೆ ಅಲ್ಲ. ಪಕ್ಷ, ಹೈಕಮಾಂಡ್ ಕೈಗೊಳ್ಳುವ ನಿರ್ಧಾರದ ಮೇಲೆ ಮುಂದಿನ ಆಲೋಚನೆ ಇರುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿಯೂ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಹೇಳಿದರು.
ತಾವೇ ಅಭ್ಯರ್ಥಿಯಾಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ, ಬೆಳಗಾವಿ ಲೋಕಸಭೆ ಉಪಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಆನಂತರವೂ ನನ್ನ ಹೆಸರು ಪದೇ ಪದೇ ಏಕೆ ಚರ್ಚೆಯಾಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ಪಕ್ಷದ ವೇದಿಕೆ, ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಚರ್ಚೆಯಾಗುತ್ತಿಲ್ಲ. ಮುಖ್ಯಮಂತ್ರಿಗಳು ನನ್ನೊಂದಿಗೆ ಚರ್ಚೆ ಮಾಡಿಲ್ಲ. ಇತ್ತೀಚೆಗೆ ಅಮಿತ್ ಶಾ ಅವರೊಂದಿಗೆ ಇಡೀ ದಿನ ಇದ್ದಾಗಲೂ ಒಂದು ಬಾರಿಯೂ ಚರ್ಚೆ ಮಾಡಿಲ್ಲ. ಯಾರೋ ನನ್ನ ಹೆಸರನ್ನು ತೇಲಿ ಬಿಡುತ್ತಿದ್ದಾರೆ. ಆ ಸುದ್ದಿ ನಂಬಬೇಡಿ. ಸ್ಪರ್ಧೆಗೆ ನನಗೆ ಆಸಕ್ತಿ ಇಲ್ಲ, ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.
ಖಾತೆ ಬದಲಾವಣೆ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು
ಖಾತೆ ಬದಲಾವಣೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಆ ಬಗ್ಗೆ ಚರ್ಚೆ ಅಗತ್ಯವಿಲ್ಲ. ಯಾವುದು ಚರ್ಚೆಯಲ್ಲಿರುವುದಿಲ್ಲವೋ ಅದನ್ನು ಮಾಧ್ಯಮಗಳು ಚರ್ಚೆಗೆ ಬಿಡುತ್ತವೆ. ಅದಕ್ಕೆಲ್ಲಾ ನಾನು ಪ್ರತಿಕ್ರಿಯಿಸುವುದಿಲ್ಲ. ಖಾತೆ ಬದಲಾವಣೆ ಬಗ್ಗೆ ಮುಖ್ಯಮಂತ್ರಿಗಳನ್ನು ಕೇಳಬೇಕು. ಮುಖ್ಯಮಂತ್ರಿಗಳು ಎಲ್ಲಿಯೂ ಈ ರೀತಿ ಹೇಳಿಲ್ಲ. ಹಿರಿಯ ಸಚಿವರೊಂದಿಗೆ ಚರ್ಚೆ ಮಾಡುವುದಾಗಿ ಮಾತ್ರ ಹೇಳಿದ್ದಾರೆ. ಈವರೆಗೆ ಅಂತಹ ಚರ್ಚೆಯಾಗಿಲ್ಲ ಎಂದು ಹೇಳಿದರು.