ಕೊಪ್ಪಳ: ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ 140 ರಿಂದ 150 ಸ್ಥಾನದಲ್ಲಿ ಗೆಲ್ಲುವುದು ನಿಶ್ಚಿತ. ಪಕ್ಷದ ಆರು ಘೋಷಣೆಗಳು ಜನಪರವಾಗಿವೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ಹೇಳಿದರು.
ಕೊಪ್ಪಳದಲ್ಲಿ ಕೈ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಪರ ಪ್ರಚಾರ ನಡೆಸಿ, ಸುದ್ದಿಗಾರರ ಜೊತೆ ಮಾತನಾಡಿದರು.
ಕಾಂಗ್ರೆಸ್‌ನಲ್ಲಿ ನಾನೇನು ಸ್ಥಾನಮಾನ ಕೇಳಿಲ್ಲ. ಬದಲಾಗಿ ಗೌರವದಿಂದ ನಡೆಸಿಕೊಳ್ಳಿ ಎಂದಿರುವೆ. ಅದರಂತೆ ಅವರು ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ ಜನಸಂಘದ ಕಾಲದಲ್ಲೂ ನಮ್ಮ ಕುಟುಂಬ ಇತ್ತು. ಆದರೆ ಅಲ್ಲಿ ಇತ್ತೀಚೆಗಿನ ಬೆಳವಣಿಗೆಗಳು ಸರಿ ಕಂಡಿಲ್ಲ. ಕೆಲವೇ ಕೆಲವರ ಕೈಯಲ್ಲಿ ಬಿಜೆಪಿ ಹಿಡಿತ ಬಂದಿದೆ. ಅವರು ಹೇಳಿದಂತೆ ನಡೆಯಬೇಕೆನ್ನುವ ವ್ಯವಸ್ಥೆ ಬಂದಿದೆ. ನಾನು ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕೆ ಹೊರ ಬಂದೆ. ಸ್ವಾಭಿಮಾನಕ್ಕೆ ದಕ್ಕೆಯಾದಾಗಲೂ ಸುಮ್ಮನೆ ಇದ್ದರೆ ಅದು ಗುಲಾಮಗಿರಿಗೆ ಹೋದಂತೆ. ಆಗ ಅವರು ಇದ್ದರೂ ಸತ್ತಂತೆ. ಆ ಗುಲಾಮಗಿರಿಗೆ ಶೆಡ್ಡು ಹೊಡೆದು ಹೊರ ಬಂದಿರುವೆ. ಯಾರೂ ಗುಲಾಮಗಿರಿಗೆ ಒಳಗಾಗ ಬಾರದು. ಅವರಿಗೆ ಚಾಲೆಂಜ್ ಮಾಡಿ ನಾನು ಹೊರ ಬಂದಿರುವೆ. ಬಿಜೆಪಿ ಈಗ ನೈತಿಕತೆ ಕಳೆದುಕೊಂಡಿದೆ ಎಂದರು.
ಕಾಂಗ್ರೆಸ್ ಕೆಲವೊಂದು ಗ್ಯಾರಂಟಿ ಘೋಷಣೆ ಮಾಡಿದೆ. ಬಿಜೆಪಿಯ ಪ್ರನಾಳಿಕೆಯಲ್ಲಿ ಯಾವುದೇ ಭರವಸೆಯಿಲ್ಲ. ಬಿಜೆಪಿಯಲ್ಲಿ ಬಿಎಸ್‌ವೈ ನಂತರ ನಾನೇ ಲಿಂಗಾಯತ ಸಿನಿಯರ್ ನಾಯಕನಾಗಿದ್ದೆ. ಆದರೆ ಬಿಜೆಪಿ ನನಗೆ ಯಾವುದೇ ಮನ್ನಣೆ ನೀಡದೆ ಸಣ್ಣ ಮಕ್ಕಳಂತೆ ನಿಮಗೆ ಟಿಕೆಟ್ ಇಲ್ಲ ಎಂದಿತು. ಇದರ ಹಿಂದೆ ಅವರಿಗೆ ಒಂದು ಹಿಡನ್ ಅಜೆಂಡಾ ಇದೆ. ಲಿಂಗಾಯತ ನಾಯಕರು ಬೇಡ ಎನ್ನುವ ಮನಸ್ಥಿತಿಯಲ್ಲಿದೆ. ಅವರ ವರ್ತನೆ ಬೇಸರ ತರಿಸಿತು. ಬಿಜೆಪಿಯಲ್ಲಿ ಐಡಿಯಾಲಜಿ ಇದ್ದರೆ ಪ್ರಿಯಾಂಕ ಖರ್ಗೆ ವಿರುದ್ದ ರಾಥೋಡ್‌ಗೆ ಟಿಕೆಟ್ ಕೊಟ್ಟಿದ್ದೀರಿ. ರೌಡೀ ಶೀಟರ್ ಇದ್ದಾನೆ.
ಆತನಿಗೆ ಏಕೆ ಟಿಕೆಟ್ ಕೊಟ್ಟಿದ್ದಾರೆ. ಹಿಂದೆ ಕಾಂಗ್ರೆಸ್-ಜೆಡಿಎಸ್‌ನಿಂದ 17 ಜನರನ್ನು ಬಿಜೆಪಿಗೆ ಕರೆತಂದರಲ್ಲಾ. ಅವರ ತತ್ವ ಏನಾಗಿದೆ. ಸೀಡಿಯಲ್ಲಿ 5-6 ಜನ ಸಚಿವರಿದ್ದಾರೆ. ಕೋರ್ಟ್‌ನಲ್ಲಿ ಅವರು ತಡೆಯಾಜ್ಞೆ ತಂದಿದ್ದಾರೆ. ಅವರಿಗೆ ಏಕೆ ಟಿಕೆಟ್ ಕೊಟ್ಟಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಅಮಿತ್ ಶಾ ಅವರು ನನ್ನನ್ನು 50 ಸಾವಿರ ಮತದಿಂದ ಸೋಲಿಸುವ ಚಾಲೆಂಜ್ ಮಾಡಿರುವ ವಿಚಾರ, ಇದು ಗುಜರಾತ್ ಅಲ್ಲ, ಕರ್ನಾಟಕ. ಹುಬ್ಬಳ್ಳಿಯ ಜನರ ಮನಸ್ಸಿನಲ್ಲಿ ನಾನಿದ್ದೇನೆ. ನನಗೂ ಅವರಿಗೂ ಹೃದಯ ಸಂಬಂಧವಿದೆ. ಯಾರೇ ಚಾಲೆಂಜ್ ಮಾಡಿದರೂ ನಾನು ಗೆಲ್ಲುವೆ. ಮತ್ತೆ ಹೆಚ್ಚು ಮತಗಳಿಂದ ಗೆಲ್ಲುವೆ ಎಂದರು.
ಇದನ್ನೂ ಓದಿ: ಮೇ 3ರಂದು ಕರಾವಳಿಗೆ ಪ್ರಧಾನಿ: ಹೊಸ ಇತಿಹಾಸ ಸೃಷ್ಟಿಯಾಗಲಿದೆ: ಸುದರ್ಶನ್ ಮೂಡುಬಿದಿರೆ