ಮಂಗಳೂರು: ಅಧಿಕಾರಕ್ಕೆ ಬಂದರೆ 200 ಯೂನಿಟ್ ವಿದ್ಯುತ್ ಉಚಿತ ನೀಡುವುದಾಗಿ ಕಾಂಗ್ರೆಸ್ ನೀಡಿರುವ ಹೇಳಿಕೆ ಒಂದು ಜೋಕ್ ಎಂದು ಬಿಜೆಪಿ ದ.ಕ. ಜಿಲ್ಲಾ ವಕ್ತಾರ ಜಗದೀಶ ಶೇಣವ ಟೀಕಿಸಿದ್ದಾರೆ.
ದೇಶದಲ್ಲಿ 60 ವರ್ಷ ಆಡಳಿತ ನಡೆಸಿದಾಗ ವಿದ್ಯುತ್ ಸಂಪರ್ಕ ಕಲ್ಪಿಸದ ಕಾಂಗ್ರೆಸ್ ಈಗ ಉಚಿತ ವಿದ್ಯುತ್ ನೀಡುವ ಹೇಳಿಕೆ ಕೊಟ್ಟಿದೆ. ವಿದ್ಯುತ್ ಖಾತೆಯ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ರಾಜ್ಯದ ಜನತೆಗೆ ಲೋಡ್ ಶೆಡ್ಡಿಂಗ್ ಮೂಲಕ ಕತ್ತಲೆ ಭಾಗ್ಯ ಕರುಣಿಸಿದ್ದರು. ಇವರು ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ಉಚಿತ ವಿದ್ಯುತ್ ಬದಲಿಗೆ ಉಚಿತ ಕತ್ತಲೆ ಭಾಗ್ಯ ಖಾತರಿ ಎಂದು ಶೇಣವ ಹೇಳಿದ್ದಾರೆ. ಕಾಂಗ್ರೆಸ್‌ನಿಂದ ಸಕಾರಾತ್ಮಕ ಬದಲಾವಣೆ ಎಂದಿಗೂ ಸಾಧ್ಯವಿಲ್ಲ. ದೇಶದ ಪ್ರತೀ ಹಳ್ಳಿಗಳಿಗೂ ವಿದ್ಯುತ್ ತಲುಪುವಂತೆ ಮಾಡಿದ್ದು ಕೇಂದ್ರದ ಮೋದಿ ಸರಕಾರ. ರಾಜ್ಯದ ಜನತೆಗೆ ಉಚಿತ ವಿದ್ಯುತ್ ಕನಸನ್ನು ತೋರಿಸುತ್ತಿರುವ ಕಾಂಗ್ರೆಸ್ ಕೇಜ್ರಿವಾಲ್ ಅವರಂತೆ ಪ್ರತಿಯೊಂದನ್ನು ಉಚಿತವಾಗಿ ನೀಡುವ ಸುಳ್ಳು ಆಶ್ವಾಸನೆಯೊಂದಿಗೆ ರಾಜ್ಯದ ಜನರ ದಾರಿ ತಪ್ಪಿಸುತ್ತಿದೆ ಎಂದು ಅವರು ಹೇಳಿದ್ದಾರೆ.