ದಾವಣಗೆರೆ: ವಿದ್ಯಾರ್ಥಿಗಳು ತರಗತಿಗಳಲ್ಲಿ ಪಡೆದ ಜ್ಞಾನದಿಂದ ಗರ್ವ ಪಡದೇ, ಸದ್ಗುಣ ಬೆಳೆಸಿಕೊಂಡು ಸದಾ ಅಧ್ಯಯನಶೀಲರಾಗಬೇಕು ಎಂದು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಕಿವಿಮಾತು ಹೇಳಿದ್ದಾರೆ.
ಸೋಮವಾರ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ 2018-19ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳಿಗೆ ಚಾಲನೆ ನೀಡಿದ ಸಮಾರಂಭದಲ್ಲಿ ಅವರು ಮಾತನಾಡಿ, ವಿದ್ಯೆಗೆ ವಿನಯವೇ ಭೂಷಣ ಎಂಬ ಮಾತನ್ನು ಪ್ರತಿಯೊಬ್ಬ ವಿದ್ಯಾರ್ಥಿನಿಯು ಅರ್ಥ ಮಾಡಿಕೊಳ್ಳಬೇಕು. ಗುರು, ಹಿರಿ ಯರಿಗೆ ಗೌರವ ನೀಡುವ ಮೂಲಕ ಸದ್ಗುಣ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಪಡೆದ ಶಿಕ್ಷಣ ಸಾರ್ಥಕ ಆಗಲಿವೆ ಎಂದರು.
ಪ್ರಸ್ತುತ ಎಲ್ಲಾ ಕ್ಷೇತ್ರದಲ್ಲೂ ಪೈಪೋಟಿ ಹೆಚ್ಚಿದೆ. ಹಾಗಾಗಿ ವಿದ್ಯಾರ್ಥಿಗಳು ಹಗಲಿರುಳು ಪರಿಶ್ರಮ ಪಡಬೇಕು. ಈ ಹಿಂದೆ ಸರ್ಕಾರಿ ಮಹಿಳಾ ಕಾಲೇಜು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿತ್ತು. ಆದರೀಗ ಆ ಕಷ್ಟವಿಲ್ಲ. ವಿಶಾಲವಾದ ಪರಿಸರದಲ್ಲಿ ಸರಕಾರದಿಂದ ಹೊಸದಾದ ಸ್ವಂತ ಕಟ್ಟಡ ಕಲ್ಪಿಸಿಕೊಡಲಾಗಿದೆ. ಉತ್ತಮ ಬೋಧನಾ ಕೊಠಡಿಗಳಿವೆ. ಶಾಸಕರಿಗೆ ಸರ್ಕಾರದಿಂದ ವರ್ಷಕ್ಕೆ 2ಕೋಟಿ ಅನುದಾನ ದೊರಕುತ್ತಿದ್ದು, ಅಂತಹ ಅನುದಾನವನ್ನು ಇತರೆ ಸರ್ಕಾರಿ ಕಾಲೇಜುಗಳ ಸೌಲಭ್ಯಕ್ಕೂ ನೀಡಲಾಗುತ್ತಿದೆ. ಈ ಕಾಲೇಜಿನ ಬೇಡಿಕೆಗಳು ಸಾಕಷ್ಟಿರುವುದರಿಂದ ಈಗ 10 ಲಕ್ಷ ರೂ. ಅನುದಾನ ನೀಡಲಾಗುವುದು. ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲು ಶಿಕ್ಷಣ ಸಚಿವರಿಗೆ ಪತ್ರ ಬರೆದು, ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕಾಲೇಜು ಪ್ರಾಧ್ಯಾಪಕ ಜಿ.ಎಸ್. ಸತೀಶ್ ಮಾತನಾಡಿ, ಕಾಲೇಜಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ಅದರಲ್ಲಿ ಶೇ. 90ರಷ್ಟು ಗ್ರಾಮೀಣ ಭಾಗದವರು.
ಬೆಳಗ್ಗೆ ಹಾಗೂ ಮಧ್ಯಾಹ್ನವೂ ತರಗತಿಗಳಲ್ಲಿ ಬೋಧಿಸಲಾಗುತ್ತಿದ್ದು, ಕೊಠಡಿಗಳ ಕೊರತೆ ಇದೆ. ಹಾಗಾಗಿ ಹೆಚ್ಚುವರಿ 10 ಕೊಠಡಿ, ಭೌತಶಾಸ್ತ್ರ, ರಸಾಯನ ಶಾಸ್ತ್ರ , ಕಂಪ್ಯೂಟರ್ ಲ್ಯಾಬ್ ಮತ್ತು ಉತ್ತಮ ಗ್ರಂಥಾಲಯ, ಜಿಮ್ ಹಾಗೂ 150 ಬೆಂಚುಗಳ ಅಗತ್ಯವಿದೆ ಎಂದು ಎಂದು ಶಾಸಕರಿಗೆ ಮನವಿ ಸಲ್ಲಿಸಿದರು.
ನಿವೃತ್ತ ಪ್ರಾಂಶುಪಾಲ ಎಸ್.ಟಿ. ಶಿವಪ್ಪ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ| ದಾದಾಪೀರ್ ನವಿಲೇಹಾಳ್, ಕಾಲೇಜಿನ ಅಧೀಕ್ಷಕ ಶೇಷಪ್ಪ, ಡಿ.ಎಸ್. ಶಿವಶಂಕರ್, ಜ್ಯೋತಿ ಸಿದ್ದೇಶ್, ವಿಠಲಾಪುರದ ರುದ್ರಪ್ಪ, ಕ್ರೀಡಾ ಸಂಚಾಲಕ ಪ್ರೊ. ಡಿ.ನಾಗೇಂದ್ರನಾಯ್ಕ, ಆನುರಾಧ, ಡಾ| ಎನ್.ಶಕುಂತಲಾ, ಕೆ.ಮಲ್ಲಿಕಾರ್ಜುನ ಗೌಡ, ಎ.ಬಾಬು ಮತ್ತಿತರರು ಈ ಸಂದರ್ಭದಲ್ಲಿದ್ದರು