Advertisement

ಜಡ್ಕಲ್‌ –ಮುದೂರು ರಸ್ತೆಯುದ್ದಕ್ಕೂ ಗಿಡಗಂಟಿ: ಸವಾರರಿಗೆ ಸಂಕಷ್ಟ

12:08 PM Jul 21, 2022 | Team Udayavani |

ಜಡ್ಕಲ್‌: ಮುದೂರು, ಸೆಳ್ಕೊಡು, ಉದಯನಗರ, ಬೀಸಿನಪಾರೆ ಮತ್ತಿತರ ಪ್ರಮುಖ ಊರುಗಳಿಗೆ ಸಂಪರ್ಕ ಕಲ್ಪಿಸುವ ಜಡ್ಕಲ್‌ – ಮುದೂರು ರಸ್ತೆಯುದ್ದಕ್ಕೂ ಗಿಡಗಂಟಿಗಳು ಬೆಳೆದು, ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿದೆ. ಅದರಲ್ಲೂ ಜಡ್ಕಲ್‌ – ಸೆಳ್ಕೊಡುವರೆಗೆ ಅಲ್ಲಲ್ಲಿ ಹಲವೆಡೆಗಳಲ್ಲಿ ಹೊಂಡ- ಗುಂಡಿಯಿಂದಾಗಿ ಸಮಸ್ಯೆಯಾಗುತ್ತಿದೆ.

Advertisement

ಜಡ್ಕಲ್‌ನಿಂದ ಮುದೂರುವರೆಗಿನ 10 ಕಿ.ಮೀ. ದೂರದ ರಸ್ತೆಯ ಇಕ್ಕೆಲಗಳಲ್ಲಿ ಉದ್ದಕ್ಕೂ ರಸ್ತೆಗೆ ಬಾಗಿದ ಗಿಡಗಂಟಿಗಳು ಸವಾರರಿಗೆ ಅಪಾಯಕಾರಿಯಾಗಿದೆ. ಈ ಮಾರ್ಗದಲ್ಲಿ ನಿತ್ಯ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದು, ಬಸ್‌ಗಳ ಗ್ಲಾಸ್‌ಗಳಿಗೂ ಇದರಿಂದ ಹಾನಿಯಾಗಿದೆ.

 ಪ್ರಮುಖ ರಸ್ತೆ

ಇತಿಹಾಸ ಪ್ರಸಿದ್ಧ ಎರಡು ಧಾರ್ಮಿಕ ಕೇಂದ್ರಗಳಾದ ಕೊಲ್ಲೂರಿನಿಂದ ಕಮಲಶಿಲೆಯನ್ನು ಸಂಪರ್ಕಿಸುವ ಹತ್ತಿರದ ಮಾರ್ಗ ಇದಾಗಿದೆ. ಇದರೊಂದಿಗೆ ಜಡ್ಕಲ್‌ ಭಾಗದಿಂದ ಸೆಳ್ಕೊಡು, ಮುದೂರು, ಉದಯನಗರ, ಬೆಳ್ಕಳ್‌ ತೀರ್ಥ ಕಡೆಗೆ, ಹಳ್ಳಿಹೊಳೆ, ಕಮಲಶಿಲೆ, ಸಿದ್ದಾಪುರ, ಅಮಾಸೆಬೈಲು ಮತ್ತಿತರ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೂ ಆಗಿದೆ. ನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ.

ಮರು ಡಾಮರು ಆಗಿಲ್ಲ

Advertisement

ಜಡ್ಕಲ್‌ನಿಂದ ಸೆಳ್ಕೊಡುವರೆಗಿನ 5-6 ಕಿ.ಮೀ. ವ್ಯಾಪ್ತಿಯಲ್ಲಂತೂ ಹಲವೆಡೆಗಳಲ್ಲಿ ಹೊಂಡ – ಗುಂಡಿಮಯವಾಗಿದ್ದು, ಅಲ್ಲಲ್ಲಿ ರಸ್ತೆ ಜರ್ಜರಿತಗೊಂಡಿದೆ. ಈ ಮಾರ್ಗದಲ್ಲಿ ಮರು ಡಾಮರು ಕಾಮಗಾರಿ ಯಾಗದೇ ಹಲವು ವರ್ಷಗಳೇ ಕಳೆದಿದೆ. ಈ ಬಾರಿಯ ಮಳೆ ಕಡಿಮೆಯಾದ ಅನಂತರವಾದರೂ, ಮರು ಡಾಮರು ಕಾಮಗಾರಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುಂದಾಗಲಿ ಎನ್ನುವುದಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ.

ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆ

ಜಡ್ಕಲ್‌ – ಮುದೂರು – ಸಿದ್ದಾಪುರ ವರೆಗೆ ಜಿಲ್ಲಾ ಮುಖ್ಯ ರಸ್ತೆಯಾಗಿದ್ದ ಈ ಮಾರ್ಗವು ಈಗ ಅಮಾಸೆಬೈಲು, ಮಡಾಮಕ್ಕಿಯವರೆಗೆ ಸೇರಲ್ಪಟ್ಟು, ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆ ಗೇರಿದೆ. ಆದರೂ ನಿರ್ವಹಣೆ ಸರಿಯಾಗದೆ ಜನ-ಸಾಮಾನ್ಯರು ಸಮಸ್ಯೆ ಅನುಭವಿಸುವಂತಾಗಿದೆ.

ಶೀಘ್ರ ಕಟಾವು: ರಸ್ತೆಯಲ್ಲಿ ನೀರು ನಿಂತು ಸಮಸ್ಯೆಯಾಗುತ್ತಿರುವ ಬಗ್ಗೆ ಸರಿಪಡಿಸಲಾಗಿದೆ. ರಸ್ತೆ ಬದಿ ಬೆಳೆದ ಗಿಡ- ಗಂಟಿ ಕಟಾವು ಕಾರ್ಯವನ್ನು ಶೀಘ್ರ ಕೈಗೊಳ್ಳಲಾಗುವುದು. ಇದು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ್ದು, ರಸ್ತೆ ವಿಸ್ತರಣೆ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದು, ಸದ್ಯಕ್ಕೆ ಯಾವುದೇ ಅನುದಾನವಿಲ್ಲ. ಮುಂದಿನ ದಿನಗಳಲ್ಲಿ ಆಗಬಹುದು. -ದುರ್ಗಾದಾಸ್‌, ಸಹಾಯಕ ಕಾರ್ಯಪಾಲಕ ಅಭಿಯಂತ, ಲೋಕೋಪಯೋಗಿ ಇಲಾಖೆ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next