ಕಲಬುರಗಿ: ಆಯುಷ್ಮಾನ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ಕಾರ್ಡ್ ವಿತರಣೆ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಕೂಡಲೇ ಇದಕ್ಕೆ ವೇಗ ನೀಡಿ ಬರುವ ಸೆಪ್ಟೆಂಬರ್ ಅಂತ್ಯದೊಳಗೆ ಶೇ.75ರಷ್ಟು ಎ.ಬಿ.ಆರ್.ಕೆ ಆರೋಗ್ಯ ಕಾರ್ಡ್ ವಿತರಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸಂಸದ ಡಾ| ಉಮೇಶ ಜಾಧವ ಸೂಚಿಸಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಗ್ರಾಮ ಮಟ್ಟದಲ್ಲಿ ಕ್ಯಾಂಪ್ ಆಯೋಜಿಸಿ ಆರೋಗ್ಯ ಕಾರ್ಡ್ ವಿತರಿಸಬೇಕು. ಡಂಗೂರ ಬಾರಿಸಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಬೇಕು. ಈ ಬಗ್ಗೆ ಖುದ್ದಾಗಿ ಮೇಲುಸ್ತುವಾರಿ ಮಾಡುವಂತೆ ಜಿಲ್ಲಾ ಪಂಚಾಯತ್ ಸಿಇಒ ಡಾ| ಗಿರೀಶ ಡಿ. ಬದೋಲೆ ಅವರಿಗೆ ಸಂಸದರು ಸೂಚಿಸಿದರು.
ಡಿಸಿ ಯಶವಂತ ವಿ. ಗುರುಕರ್ ಮಾತನಾಡಿ, ಶುಕ್ರವಾರವೇ ಆರೋಗ್ಯ ಅಧಿಕಾರಿಗಳ ಸಭೆಯಲ್ಲಿ ಎ.ಬಿ.ಆರ್.ಕೆ ಕಾರ್ಡ್ ವಿತರಣೆ ತ್ವರಿತಗೊಳಿಸಲು ಮತ್ತು ಮುಂದಿನ 15 ದಿನದಲ್ಲಿ ನಿಗದಿತ ಗುರಿ ಸಾಧನೆಗೆ ಸೂಚಿಸಿದ್ದೇನೆ ಎಂದರು.
ಜಲ ಮಿಷನ್ಗೂ ವೇಗ ಕೊಡಿ: ಜಲ ಜೀವನ್ ಮಿಷನ್ ಕಾಮಗಾರಿಗಳು ತೀವ್ರಗೊಳಿಸಬೇಕು. ಕಾರ್ಮಿಕ ವರ್ಗದವರಿಗೆ ಇ-ಶ್ರಮ್ ಕಾರ್ಡ್ ನೀಡಬೇಕು. ಅಮೃತ ಸರೋವರ ನಿರ್ಮಾಣಕ್ಕೂ ಆದ್ಯತೆ ನೀಡಬೇಕು. ಪಿಎಂ ಅವಾಸ್ ವಸತಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದರು.
ಚಿತ್ತಾ ಪುರ ತಾಲೂಕಿನ ಸನ್ನತಿಯಲ್ಲಿ 3.50ಕೋಟಿ ರೂ. ವೆಚ್ಚ ದಲ್ಲಿ ನಡೆಯುತ್ತಿರುವ ಬೌದ್ಧ ಸ್ತೂಪ ಮತ್ತು ಅಶೋಕನ ಶಾಸನ ಸಂರಕ್ಷಣಾ ಕಾರ್ಯವನ್ನು ಶೀಘ್ರವೇ ಮುಗಿಸಬೇಕು. ಶೀಘ್ರದಲ್ಲಿಯೇ ಅಲ್ಲಿಗೆ ಕೇಂದ್ರ ಸಚಿವರು ಭೇಟಿ ನೀಡಲಿದ್ದು, ಅಷ್ಟರೊಳಗೆ ಕಾಮಗಾರಿಗಳು ಪೂರ್ಣಗೊಳಿಸಬೇಕು ಎಂದು ಸೇಡಂ ಸಹಾಯಕ ಆಯುಕ್ತ ಕಾರ್ತಿಕ ಮತ್ತು ಚಿತ್ತಾಪುರ ತಹಶೀಲ್ದಾರ್ ಉಮಾಕಾಂತ ಹಲ್ಲೆ ಅವರಿಗೆ ಸಂಸದರು ನಿರ್ದೇಶನ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಸಹಾಯಕ ಆಯುಕ್ತೆ ಮೋನಾ ರೋಟ್, ಜಿಲ್ಲೆಯ ತಹಶೀಲ್ದಾರರು ಇದ್ದರು.