ನಾಗ್ಪುರ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಭಾರತ ತಂಡವು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಹಲವು ಸಮಯದ ವಿಶ್ರಾಂತಿಯ ಬಳಿಕ ಕಮ್ ಬ್ಯಾಕ್ ಮಾಡಿದ ರವೀಂದ್ರ ಜಡೇಜಾ ಆಲ್ ರೌಂಡ್ ಪ್ರದರ್ಶನದ ಮೂಲಕ ಮನಗೆದ್ದರು. ಒಟ್ಟು ಏಳು ವಿಕೆಟ್ ಮತ್ತು ಅರ್ಧ ಶತಕ ಸಿಡಿಸಿದ ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.
ಆಸೀಸ್ ನ ಮೊದಲ ಇನ್ನಿಂಗ್ಸ್ ವೇಳೆ ರವೀಂದ್ರ ಜಡೇಜಾ ಅವರು ಕೈಗೆ ಕ್ರೀಮ್ ಹಚ್ಚಿದ್ದರು. ಇದರ ಬಗ್ಗೆ ರೆಫ್ರಿ ಸ್ಪಷ್ಟನೆ ಕೂಡಾ ಕೇಳಿದ್ದರು. ಆದರೆ ಇದೀಗ ಅಂಪೈರ್ ಗಳಿಗೆ ತಿಳಿಸದೆ ಬೆರಳಿಗೆ ಮುಲಾಮು ಹಚ್ಚಿದ್ದಕ್ಕಾಗಿ ರವೀಂದ್ರ ಜಡೇಜಾ ಅವರಿಗೆ ಪಂದ್ಯ ಶುಲ್ಕದ 25% ದಂಡ ಮತ್ತು ಒಂದು ಡಿ ಮೆರಿಟ್ ಪಾಯಿಂಟ್ ನೀಡಲಾಗಿದೆ.
ಇದನ್ನೂ ಓದಿ:ವಿಡಿಯೋ: ಕಬಡ್ಡಿ ಮ್ಯಾಚ್ ಆಡುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟ 20 ವರ್ಷದ ಯುವಕ
“ಫಿಂಗರ್ ಸ್ಪಿನ್ನರ್ ತನ್ನ ಬೌಲಿಂಗ್ ಕೈಯ ತೋರು ಬೆರಳಿನ ಊತಕ್ಕೆ ಕ್ರೀಮ್ ಅನ್ನು ಅನ್ವಯಿಸುತ್ತಿದ್ದಾನೆ ಎಂದು ಭಾರತ ತಂಡದ ಆಡಳಿತವು ವಿವರಿಸಿದೆ. ಆದರೆ ಇದನ್ನು ಆನ್-ಫೀಲ್ಡ್ ಅಂಪೈರ್ ಗಳ ಅನುಮತಿಯನ್ನು ಕೇಳದೆ ಮಾಡಲಾಗಿದೆ” ಎಂದು ಐಸಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಜಡೇಜಾ ಮೇಲೆ ಬಾಲ್ ಟ್ಯಾಂಪರಿಂಗ್ ಆರೋಪ ಹೊರಿಸಬಹುದಾದ ಯಾವುದೇ ಉದ್ದೇಶಕ್ಕಾಗಿ ಕ್ರೀಮ್ ಅನ್ನು ಅನ್ವಯಿಸಲಾಗಿಲ್ಲ ಎಂದು ಮ್ಯಾಚ್ ರೆಫರಿಗೆ ಮನವರಿಕೆಯಾಗಿದೆ ಎಂದು ಐಸಿಸಿ ವಿವರಿಸಿದೆ.