ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಜಡೇಜ ಫಿಟ್‌ನೆಸ್ ಟೆಸ್ಟ್‌ನಲ್ಲಿ ತೇರ್ಗಡೆಯಾಗಿದ್ದಾರೆ. ಪ್ರವಾಸಿ ಆಸ್ಟ್ರೇಲಿಯದೆದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಲು ಹಸಿರು ನಿಶಾನೆ ಲಭಿಸಿದೆ. ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಬುಧವಾರ ರವೀಂದ್ರ ಜಡೇಜ ಅವರಿಗೆ ಫಿಟ್‌ನೆಸ್ ಟೆಸ್ಟ್ ನಡೆದಿತ್ತು. ಇದರ ವರದಿ ಈಗ ಬಿಸಿಸಿಐ ಕೈಸೇರಿದೆ.
ಫೆ. 9ರಂದು ಆರಂಭವಾಗಲಿರುವ ಆಸ್ಟ್ರೇಲಿಯ ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕಾಗಿ ರವೀಂದ್ರ ಜಡೇಜ ನಾಗ್ಪುರದಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಇದಕ್ಕಾಗಿ ಏರ್ಪಡಿಸಲಾದ ಸಿದ್ಧತಾ ಶಿಬಿರದಲ್ಲೂ ಪಾಲ್ಗೊಳ್ಳಲಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ನಡೆದ ಏಷ್ಯಾ ಕಪ್ ಪಂದ್ಯಾವಳಿಯ ವೇಳೆ ರವೀಂದ್ರ ಜಡೇಜ ಮಂಡಿನೋವಿನಿಂದಾಗಿ ಟೀಮ್ ಇಂಡಿಯಾದಿಂದ ಬೇರ್ಪಟ್ಟಿದ್ದರು. ಅನಂತರದ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲೂ ಆಡಲು ಸಾಧ್ಯವಾಗಿರಲಿಲ್ಲ. ಒಟ್ಟು 5 ತಿಂಗಳ ಕಾಲ ಅವರು ವಿಶ್ರಾಂತಿಯಲ್ಲಿರಬೇಕಾಯಿತು.
ಕಳೆದ ಬಾಂಗ್ಲಾದೇಶ ವಿರುದ್ಧದ ಸರಣಿಗಾಗಿ ರವೀಂದ್ರ ಜಡೇಜ ಅವರನ್ನು ಆಯ್ಕೆ ಮಾಡಲಾಯಿತಾದರೂ ಅವರಿಗೆ ತಂಡವನ್ನು ಕೂಡಿಕೊಳ್ಳಲು ಸಾಧ್ಯವಾಗಲಿಲ್ಲ. ಮರಳಿ ರಾಷ್ಟ್ರೀಯ ತಂಡವನ್ನು ಸೇರಬೇಕಾದರೆ ಒಂದಾದರೂ ದೇಶಿ ಕ್ರಿಕೆಟ್ ಪಂದ್ಯವನ್ನು ಆಡಬೇಕು ಎನ್ನುವ ಬಿಸಿಸಿಐ ನಿಯಮದಂತೆ ಜಡೇಜ ತಮಿಳುನಾಡು ವಿರುದ್ಧ ರಣಜಿ ಪಂದ್ಯದಲ್ಲಿ ಆಡಲಿಳಿದರು. ಇದರಲ್ಲಿ ಅವರಿಗೆ ಸೌರಾಷ್ಟ್ರ ತಂಡದ ನಾಯಕ್ವವನ್ನೂ ವಹಿಸಲಾಗಿತ್ತು. ಯಾವುದೇ ಅಡ್ಡಿ ಎದುರಿಸದೆ 41.1 ಓವರ್ ಬೌಲಿಂಗ್ ನಡೆಸಿದರು. ದ್ವಿತೀಯ ಇನಿಂಗ್ಸ್‌ನಲ್ಲಿ 7 ವಿಕೆಟ್ ಕೆಡವಿ ಮಿಂಚಿದರು.
ಶ್ರೇಯಸ್ ಐಯ್ಯರ್ ಗಾಯಾಳಾಗಿ ಹೊರಬಿದ್ದಿರುವ ಕಾರಣ, ರವೀಂದ್ರ ಜಡೇಜ ಅವರ ಪುನರಾಗಮನ ಎನ್ನುವುದು ಟೀಮ್ ಇಂಡಿಯಾ ಪಾಲಿಗೊಂದು ಬೂಸ್ಟ್ ಆಗುವುದರಲ್ಲಿ ಅನುಮಾನವಿಲ್ಲ.
ಎನ್‌ಸಿಎಯಲ್ಲಿ ಶ್ರೇಯಸ್ ಐಯ್ಯರ್ :
ಬೆನ್ನುನೋವಿಗೆ ಸಿಲುಕಿ ನ್ಯೂಜಿಲೆಂಡ್ ಸರಣಿಯಿಂದ ಹೊರಬಿದ್ದ ಶ್ರೇಯಸ್ ಐಯ್ಯರ್ ಪ್ರಸ್ತುತ ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಪೂರ್ತಿ ಫಿಟ್ ಆಗದ ಕಾರಣ ಆಸ್ಟ್ರೇಲಿಯ ಎದುರಿನ ನಾಗ್ಪುರ ಟೆಸ್ಟ್ ಪಂದ್ಯದಿಂದ ಬೇರ್ಪಟ್ಟಿದ್ದಾರೆ. ಡಿ.17ರಂದು ದಿಲ್ಲಿಯಲ್ಲಿ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗುವ ನಿರೀಕ್ಷೆ ಇದೆ.