ವಡೋದರ: ರಸ್ತೆ ಅಪಘಾತಕ್ಕೆ ಸಿಲುಕಿ ಶ್ವಾಸಕೋಶ ಮತ್ತು ಯುಕೃತ್ತಿಗೆ ಬಿದ್ದ ತೀವ್ರ ಪ್ರಮಾಣದ ಏಟಿನಿಂದ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದ ಭಾರತದ ಮಾಜಿ ಕ್ರಿಕೆಟಿಗ ಜೇಕಬ್ ಮಾರ್ಟಿನ್ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಮಾತನಾಡುವ ಸ್ಥಿತಿಗೆ ತಲುಪಿದ್ದಾರೆ. ಅವರನ್ನೀಗ ತುರ್ತು ಚಿಕಿತ್ಸಾ ಘಟಕದಿಂದ ವಾರ್ಡ್‌ಗೆ ವರ್ಗಾಯಿಸಲಾಗಿದೆ.ಜೇಕಬ್ ಮಾರ್ಟಿನ್ ಚಿಕಿತ್ಸೆಗಾಗಿ ಬಿಸಿಸಿಐ ಸಹಿತ ಅನೇಕ ಮೂಲಗಳಿಂದ ಸಾಕಷ್ಟು ಧನಸಹಾಯ ಬಂದಿದ್ದರೂ ಅವರ ಕುಟುಂಬಕ್ಕೆ ಇನ್ನಷ್ಟು ಆರ್ಥಿಕ ನೆರವಿನ ಅಗತ್ಯವಿದೆ. ಈಗಾಗಲೇ ಅವರ ಚಿಕಿತ್ಸೆಗೆಂದು 16 ಲಕ್ಷ ರೂ.ನಷ್ಟು ಮೊತ್ತ ಒಟ್ಟುಗೂಡಿದ್ದು, ಇದನ್ನೆಲ್ಲ ಚಿಕಿತ್ಸೆಯ ವೆಚ್ಚವಾಗಿ ಬಳಸಲಾಗಿದೆ.
ಇನ್ನೂ ಬೇಕಿದೆ ಆರ್ಥಿಕ ನೆರವು
“ಪತಿಯ ಚಿಕಿತ್ಸೆಗಾಗಿ ಅನೇಕ ಜನರು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಧನಸಹಾಯ ಮಾಡಿದ್ದಾರೆ. ಭಾರತೀಯ ಆಟಗಾರರು, ಬಿಸಿಸಿಐ, ಬರೋಡಾ ಕ್ರಿಕೆಟ್ ಅಸೋಸಿಯೇಶನ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಈ ಸಹಾಯ ದೊರಕಿದೆ. ಜೇಕಬ್ ಇನ್ನೂ 2 ತಿಂಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗಿರುವುದರಿಂದ ಇನ್ನಷ್ಟು ಹಣದ ಅವಶ್ಯಕತೆ ಇದೆ’ ಎಂದು ಜೇಕಬ್ ಪತ್ನಿ ಕ್ಯಾಟಿ ಹೇಳಿದ್ದಾರೆ.