Advertisement

ಗೋಡೆ ಇರದಿದ್ದರೆ ಅಮ್ಮನನ್ನು ಉಳಿಸಿಕೊಳ್ತಿದ್ದೆ…

09:07 AM Mar 25, 2019 | keerthan |

ಕೋಟಿಗಟ್ಟಲೆ ಕಾಸಿದೆ, ಕರಗದಷ್ಟು ಆಸ್ತಿಯಿದೆ. ಒಳ್ಳೇ ಹೆಸರಿದೆ, ಸಮಾಜದಲ್ಲಿ ಗೌರವವಿದೆ, ಅವರಿಗೇನ್ರೀ ಕಮ್ಮಿ ಆಗಿರೋದು? ಸೆಲೆಬ್ರಿಟಿಗಳ ಕುರಿತು ಜನ ಹೀಗೆಲ್ಲಾ ಮಾತಾಡುತ್ತಿರುತ್ತಾರೆ. ಇಂಥ ಮಾತುಗಳಿಗೆ ಉತ್ತರವೆಂಬಂತೆ ಬಾಲಿವುಡ್‌ನ‌ ಖ್ಯಾತ ನಟ ಜಾಕಿ ಶ್ರಾಫ್ ಅವರ ಬಾಳ ಕಥನವಿದೆ. ಐದಾರೇಳೆಂಟು ಕಡೆಯಿಂದ ಸಂಗ್ರಹಿಸಿದ ವಿವರಗಳೆಲ್ಲ ಜಾಕಿಯ ಮಾತುಗಳಲ್ಲೇ ಇವೆ. ಓದಿಕೊಳ್ಳಿ…
***
ಕಾಕಾಭಾಯ್‌ ಹರಿಬಾಯ್‌ ಶ್ರಾಫ್, ಇದು ನನ್ನ ತಂದೆಯ ಹೆಸರು. ಅಪ್ಪ ಗುಜರಾತ್‌ನವರು. ಅವರಿಗೆ ಜ್ಯೋತಿಷ್ಯಶಾಸ್ತ್ರ ತಿಳಿದಿತ್ತು. ಆಭರಣಗಳ ವ್ಯಾಪಾರ ಅವರ ಕುಲಕಸುಬು. ಬಿಜಿನೆಸ್‌ ಮಾಡುತ್ತಲೇ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದ ಅವರು, ಗೆಳೆಯರು ಹಾಗೂ ಬಂಧುಗಳೊಂದಿಗೆ ಸೀದಾ ಮುಂಬಯಿಗೆ ಬಂದ್ರು, ಶ್ರೀಮಂತ ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರಂತೆ.

Advertisement

ಇದೇ ಸಮಯಕ್ಕೆ, ದೂರದ ಟರ್ಕಿ ದೇಶದಲ್ಲಿ ದಂಗೆ ಶುರುವಾಯಿತಂತೆ. ಮುಂದೆ ಏನಾದೀತೋ ಎಂದು ಹೆದರಿದ ಕುಟುಂಬವೊಂದು ಟರ್ಕಿಯಿಂದ ಲಡಾಕ್‌, ದೆಹಲಿ ತಲುಪಿ ಆನಂತರ ನೇರವಾಗಿ ಮುಂಬಯಿಗೆ ಬಂದಿದೆ. ಆ ಕುಟುಂಬದ ಹದಿಹರೆಯದ ಹೆಣ್ಣುಮಗಳು ರೀಟಾಳನ್ನು, ಹರಿಬಾಯ್‌ ಶ್ರಾಫ್ ಆಕಸ್ಮಿಕವಾಗಿ ಭೇಟಿಯಾಗಿದ್ದಾರೆ. ಕ್ರಮೇಣ, ಪರಿಚಯ ಪ್ರೇಮವಾಗಿ, ಮದುವೆಯಲ್ಲಿ ಕೊನೆಗೊಂಡಿದೆ.

ಮದುವೆಯ ನಂತರ, ಸಹಜವಾಗಿಯೇ ಖರ್ಚು ಹೆಚ್ಚಾಗಿದೆ. ಆಗ, ಗೆಳೆಯರು-ಬಂಧುಗಳೆಲ್ಲ ಸೇರಿ, ಸ್ಟಾಕ್‌ ಮಾರ್ಕೆಟ್‌ನಲ್ಲಿ ಹಣ ಹೂಡಿದರೆ ಹೆಚ್ಚು ಲಾಭ ಮಾಡಬಹುದು ಅಂದಿದ್ದಾರೆ. ಹೆಚ್ಚು ಹಣ ಸಿಕ್ಕಿದರೆ ಖುಷಿಯಿಂದ ಬಾಳಬಹುದೆಂದು ಯೋಚಿಸಿದ ನನ್ನ ತಂದೆ, ಈ ವ್ಯವಹಾರದಲ್ಲಿ ತುಸು ಹೆಚ್ಚೇ ಆಸಕ್ತಿ ತೋರಿಸಿದ್ದಾರೆ. ಬ್ಯಾಡ್‌ಲಕ್‌. ವ್ಯವಹಾರದಲ್ಲಿ ವಿಪರೀತ ನಷ್ಟವಾಗಿದೆ. ಆಗ, ಬಂಧುಗಳು ಮತ್ತು ಗೆಳೆಯರು ಸೇರಿಕೊಂಡು- “ಎಲ್ಲವೂ ನಿನ್ನಿಂದಲೇ ಆಗಿದ್ದು. ಹಣ ತೊಡಗಿಸುವಂತೆ ಜಾಸ್ತಿ ಒತ್ತಾಯಿಸಿದ್ದೇ ನೀನು’ ಎಂದು ಛೀಮಾರಿ ಹಾಕಿ, ಅಪ್ಪನನ್ನು ಮನೆಯಿಂದಲೇ ಹೊರಗೆ ಹಾಕಿದರಂತೆ! ಪರಿಣಾಮ, ಶ್ರೀಮಂತ ಬಡಾವಣೆಯಿಂದ, ಮಲಬಾರ್‌ ಹಿಲ್‌ ಪ್ರದೇಶದಲ್ಲಿದ್ದ ಒಂದು ವಠಾರಕ್ಕೆ ನಮ್ಮ ಕುಟುಂಬ ಶಿಫಾrಯಿತು.

ನಾವು ವಾಸವಿದ್ದ ವಠಾರದಲ್ಲಿ ಒಟ್ಟು 30 ಜನರಿದ್ದರು. 3 ಟಾಯ್ಲೆಟ್‌ಗಳಿದ್ದವು. ದಿನವೂ ಬೆಳಗ್ಗೆ ಟಾಯ್ಲೆಟ್‌ನ ಮುಂದೆ ದೊಡ್ಡ ಕ್ಯೂ. ದೇಹಬಾಧೆ ತೀರಿಸಿಕೊಳ್ಳಲು ಅವಸರವಾಗಿ, ಮುಖ ಕಿವುಚುತ್ತಾ, ಒಂದೊಂದೇ ಹೆಜ್ಜೆ ಹಿಂದೆ ಮುಂದೆ ಸರಿದಾಡುತ್ತಾ, ಹೊಟ್ಟೆ ಸವರಿಕೊಳ್ಳುತ್ತಾ ಜನ ಅಡ್ಡಾಡುತ್ತಿದ್ದುದನ್ನು ನೆನಪಿಸಿಕೊಂಡರೆ ಈಗಲೂ ನಗು ಬರುತ್ತದೆ. ನನಗೊಬ್ಬ ಅಣ್ಣನಿದ್ದ. ವಠಾರದ ಜನ, ಅವನನ್ನು ಜಗ್ಗೂದಾದಾ ಎನ್ನುತ್ತಿದ್ದರು. ಅವನು ಎಲ್ಲ ರೀತಿಯಿಂದಲೂ ದಾದಾನಂತೆಯೇ ಇದ್ದ. ವಠಾರದ ಜನರ ತಂಟೆಗೆ ಯಾರಾದರೂ ಬಂದರೆ ಜಗಳಕ್ಕೇ ಹೋಗಿಬಿಡುತ್ತಿದ್ದ. ಅಂಥವನು, ಅದೊಂದು ಸಂಜೆ ನನ್ನನ್ನು ವಿಹಾರಕ್ಕೆಂದು ಸಮುದ್ರ ತೀರಕ್ಕೆ ಕರೆದೊಯ್ದ. ಅಲ್ಲಿ ಯಾರೋ ಮುಳುಗುತ್ತಿದ್ದರು. ಅವರನ್ನು ಕಾಪಾಡುವ ಉದ್ದೇಶದಿಂದ, ನೀರಿಗೆ ಜಿಗಿದೇ ಬಿಟ್ಟ. ಅವನಿಗೆ ಈಜು ಬರುತ್ತಿರಲಿಲ್ಲ. ಪರಿಣಾಮ, ನನ್ನ ಕಣ್ಮುಂದೆಯೇ ಅಣ್ಣ ಅಲೆಯೊಂದಿಗೆ ಕಣ್ಮರೆಯಾದ.

ಈ ದುರಂತದ ನಂತರ, ಜನರೆಲ್ಲಾ ಅಪ್ಪನನ್ನು ಗೇಲಿ ಮಾಡತೊಡಗಿದರು. “ಜ್ಯೋತಿಷಿಯಂತೆ, ಜ್ಯೋತಿಷಿ. ತನ್ನ ಮಗನ ಭವಿಷ್ಯ ಹೇಳಲು ಆಗದವನು ಊರ ಜನರ ಭವಿಷ್ಯ ಹೇಳ್ತಾನಂತೆ’ ಎಂದೆಲ್ಲಾ ಆಡಿಕೊಂಡರು. ವಾಸ್ತವ ಏನೆಂದರೆ, ಅವತ್ತು ಅಣ್ಣ ಹೊರಗೆ ಹೊರಟಾಗಲೇ- “ನೋಡೋ, ಈಗ ಟೈಂ ಸರಿಯಾಗಿಲ್ಲ. ಇವತ್ತು ನೀನು ಹೊರಗೆ ಹೋಗಬೇಡ’ ಅಂದಿದ್ರು ಅಪ್ಪ. ಆದರೆ, ಅವರ ಮಾತನ್ನು ಮೀರಿ ಅಣ್ಣ ಹೊರನಡೆದಿದ್ದ.
ಇದಾಗಿ ಎಷ್ಟೋ ದಿನಗಳ ನಂತರ, ಅಕಸ್ಮಾತ್‌ ನನ್ನ ಕೈ ನೋಡಿದ ಅಪ್ಪ ಮರುಕ್ಷಣವೇ ಉದ್ಗರಿಸಿದರು: “ಮುಂದೊಂದು ದಿನ ನೀನು ದೊಡ್ಡ ಹೆಸರು ಮಾಡ್ತೀಯ. ಹಣ, ಖ್ಯಾತಿ ಎರಡೂ ನಿನ್ನ ಕಾಲಡಿಗೆ ಬಂದು ಬೀಳುತ್ತೆ.’ ಅವತ್ತು ನಾವಿದ್ದ ಸ್ಥಿತಿಯಲ್ಲಿ ಅಂಥದೊಂದು ಪವಾಡ ನಡೆಯಲು ಸಾಧ್ಯವೇ ಇರಲಿಲ್ಲ. ಅದೇ ಕಾರಣದಿಂದ ಅಪ್ಪನನ್ನು ಅವತ್ತು ನಾನೂ ಮರುಕದಿಂದ ನೋಡಿದ್ದೆ.

Advertisement

ಇದು 45 ವರ್ಷಗಳ ಹಿಂದಿನ ಮಾತು. ಆಗೆಲ್ಲಾ, ದಿನಕ್ಕೊಂದು ಶರ್ಟ್‌ ಹಾಕ್ಕೋಬೇಕು ಅಂತ ವಿಪರೀತ ಆಸೆ ಆಗ್ತಿತ್ತು. ಆದರೆ, ಮನೆಯ ಇಂಚಿಂಚನ್ನೂ ಬಡತನ ಆವರಿಸಿಕೊಂಡಿತ್ತು. ಅವತ್ತು ಒಂದು ಮೀಟರ್‌ ಬಟ್ಟೆಯ ಬೆಲೆ 3 ರುಪಾಯಿ. ಅಷ್ಟು ಹಣ ಕೂಡ ಅಪ್ಪ-ಅಮ್ಮನ ಬಳಿ ಇರಲಿಲ್ಲ. ಹಾಗಂತ ಸುಮ್ಮನಿರಲು ಸಾಧ್ಯವಾ? ನಾನೇನು ಮಾಡಿದೆ ಗೊತ್ತೆ? ಅಮ್ಮನ ಎರಡು ಹಳೆಯ ಸೀರೆಗಳನ್ನು ಹರಿದು, ಅದನ್ನೇ ಹೊಸ ಶರ್ಟ್‌ ರೂಪದಲ್ಲಿ ಹೊಲಿಸಿಕೊಂಡೆ. ಆಗಲೂ ಸಮಾಧಾನವಾಗಲಿಲ್ಲ. ಆಗ, ಗಾಢಬಣ್ಣದ, ಬಗೆಬಗೆಯ ಡಿಸೈನ್‌ ಇದ್ದ ಕರ್ಟನ್‌ ಬಟ್ಟೆಯನ್ನು ಆಚೆ ಮನೆಯವರಿಂದ ಪಡೆದು, ಅದನ್ನು ಟೇಪ್‌ನಂತೆ ಕತ್ತರಿಸಿ, ಕತ್ತಿನ ಸುತ್ತ ಹಾಕಿಕೊಂಡು ಸ್ಟೈಲ್‌ ಮಾಡಿದೆ! (ಮುಂದೆ, ನಾನು ಹೀರೋ ಆದಾಗ, ಬಾಲ್ಯದ ದಿನಗಳು ನೆನಪಾಗಿ, ಆಗ ಹಾಕುತ್ತಿದ್ದಂಥದೇ ಸ್ಕಾರ್ಪ್‌ ಹಾಕಿಕೊಂಡೆ ನೋಡಿ; ಅದು ಒಂದಷ್ಟು ವರ್ಷ ಹೊಸ ಫ್ಯಾಷನ್‌ ಎಂದೇ ಹೆಸರಾಯಿತು!)

ಫ‌ಸ್ಟ್‌ ಪಿಯುಸಿಯ ನಂತರ ಕಾಲೇಜಿಗೆ ಹೋಗಬೇಕು ಅನ್ನಿಸಲಿಲ್ಲ. ಹೆತ್ತವರಿಗೆ, ಮೂರು ಹೊತ್ತಿನ ಅನ್ನ ಸಂಪಾದನೆಯೇ ಕಷ್ಟವಾಗಿತ್ತು. ಇನ್ನು ಓದಿಸುವುದೆಲ್ಲಿ? ಅವರೂ ಒತ್ತಾಯಿಸಲಿಲ್ಲ. ಹಗಲಿಡೀ ಆಟ ಆಡುವುದು, ಸಂಜೆ ಮನೆ ಸೇರುವುದು- ಇದಿಷ್ಟೇ ನನ್ನ ಬದುಕಾಗಿತ್ತು. ಅವತ್ತೂಂದು ದಿನ, ಸ್ವಲ್ಪ ದೂರವಿದ್ದ ಫೀಲ್ಡ್‌ಗೆ ಬಸ್‌ನಲ್ಲಿ ಹೋಗಲು ನಿಂತಿದ್ದೆನಾ? ಅಲ್ಲಿಗೇ ಸುಂದರಿಯೊಬ್ಬಳು ಬಂದು ನಿಂತಳು. ಅವಳು ಹೈಸ್ಕೂಲ್‌ ಹುಡುಗಿ. ಶಾಲೆಯ ಯೂನಿಫಾರ್ಮ್ ಹಾಕಿದ್ದಳು. ನಾನೇ ಮುಂದಾಗಿ ಪರಿಚಯ ಹೇಳಿಕೊಂಡೆ. ಮೊದಲ ಭೇಟಿಯಲ್ಲೇ, ಜನ್ಮಾಂತರದ ಗೆಳತಿಯಂತೆ ಆಕೆ ಹರಟೆಗೆ ನಿಂತಳು. “ನನ್ನ ಹೆಸರು ಆಯೇಷಾ. ನಾನು ಮಿಲಿಟರಿ ಆಫೀಸರ್‌ ಮಗಳು. ಶ್ರೀಮಂತ ಬಡಾವಣೆಯಲ್ಲಿ ನಮ್ಮ ಮನೆಯಿದೆ’ ಎಂದಳು. ಸಂಕೋಚದಿಂದಲೇ- “ನಾನು ಕಡುಬಡವ’ ಅಂದೆ. “no matter. ನನ್ನತ್ರ ದುಡ್ಡಿದೆ. ಹಂಚಿಕೊಳ್ಳುವಾ’ ಅಂದಳು. ಮರುದಿನದಿಂದ, ನಾವು ಕಾಸನ್ನು ಮಾತ್ರವಲ್ಲ; ಕನಸುಗಳನ್ನೂ ಹಂಚಿಕೊಂಡೆವು. ಮುಂದೆ ನಮ್ಮ ಗೆಳೆತನ ಗಟ್ಟಿಯಾದಾಗ ಒಂದು ದಿನ ನಾನೇ ಸಂಕೋಚದಿಂದ ಹೇಳಿದೆ: “ಈಗಾಗ್ಲೆà ಒಂದು ಹುಡುಗೀನ ಲವ್‌ ಮಾಡ್ತಿದೀನಿ. ಅವಳು ಓದಲೆಂದು ಅಮೆರಿಕಕ್ಕೆ ಹೋಗಿದಾಳೆ. ಅವಳು ಬಂದ ತಕ್ಷಣ, ಮದುವೆ ಆಗಬೇಕು ಅಂತ ಪ್ಲಾನ್‌ ಇದೆ…’ ಎರಡು ನಿಮಿಷ ಸುಮ್ಮನಿದ್ದ ಆಯೇಷಾ, ನಂತರ ಹೇಳಿಬಿಟ್ಟಳು: “ಜಾಕೀ, ನಮ್ಮ ಪರಿಚಯ, ಗೆಳೆತನದ ಬಗ್ಗೆ ಮುಚ್ಚುಮರೆಯಿಲೆª ಅವಳಿಗೆ ಪತ್ರ ಬರೆದು ತಿಳಿಸು. ಅವಳೂ ಬರಲಿ. ಆಗ ಇಬ್ರೂ ನಿನ್ನನ್ನೇ ಮದುವೆ ಆಗ್ತೀವೆ. ಇಬ್ರೂ ಒಟ್ಟಿಗೇ ಬದುಕ್ತೇವೆ! ನಿನ್ನನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಕಣೋ…’

ಆಯೇಷಾಳ ನಿರ್ಮಲ ಪ್ರೀತಿಯ ಎದುರು ನನ್ನ ಹಳೆಯ ಹುಡುಗಿ ಮತ್ತೆ ನೆನಪಾಗಲೇ ಇಲ್ಲ!
ಹೆತ್ತವರ ತೀವ್ರ ವಿರೋಧದ ನಡುವೆ ಮದುವೆಯಾಗಿ, ಶ್ರೀಮಂತ ಬಂಗಲೆಯಿಂದ, ವಠಾರದ ನಮ್ಮ ಮುರುಕಲು ಮನೆಗೆ ಬಂದೇ ಬಿಟ್ಟಳು ಆಯೇಷಾ. ಆಗಲೂ ನನಗೆ ನೌಕರಿ ಇರಲಿಲ್ಲ. ಅವತ್ತಿಗೆ, ಯಾವುದಾದರೂ ಹೋಟೆಲಿನ ಅಡುಗೆ ಭಟ್ಟ ಆಗಬೇಕು ಎಂಬುದೇ ನನ್ನ ಕನಸಾಗಿತ್ತು. ಅಡುಗೆ ಭಟ್ಟನಾದರೆ, ಮೂರು ಹೊತ್ತು ಊಟ ಮಾಡಬಹುದು. ಮನೆಗೂ ಕೊಂಡೊಯ್ಯಬಹುದು ಎಂಬುದೇ ಆ ಕೆಲಸದ ಬಗ್ಗೆ ಪ್ರೀತಿ-ಭಕ್ತಿಯನ್ನು ಹುಟ್ಟಿಸಿತ್ತು. ಇಂಟರ್‌ವ್ಯೂಗೆ ಹೋದರೆ, ಡಿಗ್ರಿ ಆಗಿಲ್ಲ, ಒಳ್ಳೆಯ ಭಾಷೆ ಗೊತ್ತಿಲ್ಲ ಎಂದು ರಿಜೆಕ್ಟ್ ಮಾಡಿದರು. ಏರ್‌ ಇಂಡಿಯಾದಲ್ಲಿ ಅಟೆಂಡರ್‌ ಆದರೂ ಆಗಬೇಕು ಅಂದುಕೊಂಡು ಅರ್ಜಿ ಹಾಕಿದರೆ, -“ಜಸ್ಟ್‌ ಪಿಯುಸೀನಾ? ಅಷ್ಟು ಓದು ಸಾಲದು’ ಎಂದು ಆಚೆ ಕಳಿಸಿದರು! ಕಡೆಗೆ, ಬೇರೇನೂ ತೋಚದೆ ಟ್ರಾವಲ್‌ ಏಜೆಂಟ್‌ ಆದೆ. ಪ್ಯಾಸೆಂಜರ್ ಎದುರು ನಿಂತು- “ಎಲ್ಲಿಗೆ ಹೋಗಬೇಕು ಸಾರ್‌? ಬಸ್‌ ಇದೆ ಬನ್ನಿ ಸಾರ್‌’ ಎಂದು ಗೋಗರೆಯುವುದೇ ನನ್ನ ಕೆಲಸವಾಗಿತ್ತು!

ಅವತ್ತೂಂದು ದಿನ, ಪ್ರಯಾಣಿಕರಿಗಾಗಿ ಕಾಯುತ್ತಾ ಬಸ್‌ಸ್ಟ್ಯಾಂಡ್‌ನ‌ಲ್ಲಿ ನಿಂತಿದ್ದೆ. ನನ್ನ ಬಳಿ ಬಂದ ಒಬ್ಟಾತ- “ಸ್ಮಾರ್ಟ್‌ ಆಗಿದೀಯ. ನೀನ್ಯಾಕೆ ಮಾಡೆಲಿಂಗ್‌ಗೆ ಬರಬಾರ್ಧು? ನಿನ್ನ ಫೋಟೋ ತಗೊಂಡು, ಕಾಸು ಕೊಡ್ತಾರೆ. ಟ್ರೆç ಮಾಡು’ ಅಂದ. ಪರಿಣಾಮ- ಮಾಡೆಲಿಂಗ್‌ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟೆ. ಐದಾರು ಜಾಹೀರಾತುಗಳಲ್ಲಿ ನಟಿಸಿದೆ. ಆಗಲೇ ಒಂದಿಬ್ಬರು- “ನಿನ್ನ ಮುಖದಲ್ಲಿ ಫ್ರೆಶ್‌ನೆಸ್‌ ಇದೆ. ಸಿನಿಮಾದಲ್ಲಿ ಆ್ಯಕ್ಟ್ ಮಾಡ್ತಿಯಾ?’ ಅಂದರು. ಒಂದು ಕೈ ನೋಡೇಬಿಡೋಣ ಎಂದು ಆ್ಯಕ್ಟಿಂಗ್‌ ಕೋರ್ಸ್‌ ಗೆ ಸೇರಿಕೊಂಡೆ. ಅಲ್ಲಿ ಪರಿಚಯವಾದವನೇ ಸುನೀಲ್‌ ಆನಂದ್‌. ಅದೊಂದು ಸಂಜೆ, ಅವರ ಮನೆಗೆ ಹೋದೆ. ಸುನೀಲ್‌ನ ತಂದೆ ದೇವಾನಂದ್‌ರ ಎದುರು ನಿಂತು- “ಇಲ್ಲೇ ಒಂದು ವಠಾರದಲ್ಲಿ ನಾವಿದೀವಿ ಸಾರ್‌. ನಮ್ಮಮ್ಮ ನಿಮ್ಮ ದೊಡ್ಡ ಫ್ಯಾನ್‌…’ ಎಂದೆಲ್ಲಾ ಬಡಬಡಿಸಿದೆ. ಒಮ್ಮೆ ಮುಗುಳ್ನಕ್ಕು, ಹುಬ್ಬು ಹಾರಿಸಿದ ದೇವಾನಂದ್‌- “ಬೆಳಗ್ಗೆಯಷ್ಟೇ ನಿನ್ನ ಫೋಟೋ ನೋಡಿದೆ. ಸಂಜೆಯ ವೇಳೆಗೆ ನೀನೇ ನನ್ನೆದುರು ನಿಂತಿದೀಯ. ಹೊಸ ಸಿನಿಮಾದಲ್ಲಿ ನಿನಗೊಂದು ಪಾತ್ರ ಇದೆ. ಪ್ಯಾರಲಲ್‌ ರೋಲ್‌. ನಾನು ಹೀರೋ. ನೀನು ಸೆಕೆಂಡ್‌ ಹೀರೋ. ಆಗ್ಬೋದಾ?’ ಅಂದರು. “ಸ್ವಾಮಿ ದಾದಾ’ ಚಿತ್ರದ ಮೂಲಕ ಬಾಲಿವುಡ್‌ಗೆ ನಾನು ಎಂಟ್ರಿ ಕೊಟ್ಟದ್ದು ಹೀಗೆ.

ಮುಂದೆ, 1983ರಲ್ಲಿ ಸುಭಾಷ್‌ ಘಾಯ್‌ ನಿರ್ದೇಶನದ “ಹೀರೋ’ ಸಿನಿಮಾ ಬಂತಲ್ಲ; ಆ ಕ್ಷಣದಿಂದಲೇ ನನ್ನ ಬಾಳ ಪಥವೂ ಬದಲಾಗಿಹೋಯಿತು. ರಾತ್ರಿ ಕಳೆದು ಬೆಳಗಾಗುವುದರೊಳಗೆ ನಾನು “ಸ್ಟಾರ್‌’ ಆಗಿಬಿಟ್ಟೆ. ನನ್ನನ್ನು ನೋಡಲು, ಮಾತಾಡಿಸಲು, ಕಾಲ್‌ಶೀಟ್‌ ಕೇಳಲು, ಸಂದರ್ಶಿಸಲು, ಕಥೆ ಹೇಳಲು ನಾವಿದ್ದ ವಠಾರಕ್ಕೇ ಜನ ಬರತೊಡಗಿದರು. ಹಣ ಮತ್ತು ಖ್ಯಾತಿ ಜೊತೆಯಾದ ಮೇಲೆ, ನಾವಿದ್ದ ಮನೆ ಚಿಕ್ಕದು ಅನ್ನಿಸತೊಡಗಿತು. ಮುಂಬಯಿಯ ಪ್ರತಿಷ್ಠಿತ ಬಡಾವಣೆಯಾದ ಬಾಂದ್ರಾದಲ್ಲಿ ಬಂಗಲೆ ಖರೀದಿಸುವಂಥ ಶ್ರೀಮಂತಿಕೆ ನನ್ನದಾಯ್ತು.

ಕಡುಬಡವರಾಗಿ ವಠಾರದಲ್ಲಿ ವಾಸಿಸಿದ್ದೆವು ಅಂದೆನಲ್ಲ; ಆ ಮನೆಯಲ್ಲಿ ಇದ್ದುದು ಒಂದು ಹಾಲ್‌, ಒಂದು ಬೆಡ್‌ರೂಂ, ಒಂದು ಅಡುಗೆ ಮನೆ, ಅಷ್ಟೆ. ಅಮ್ಮನೋ, ಅಪ್ಪನೋ ಸಣ್ಣಗೆ ಕೆಮ್ಮಿದರೂ, ನಿಟ್ಟುಸಿರು ಬಿಟ್ಟರೂ ನನಗದು ಕೇಳಿಸುತ್ತಿತ್ತು. ತಕ್ಷಣವೇ- “ಏನಾಯ್ತಮ್ಮಾ, ಏನಾಯ್ತಪ್ಪಾ’ ಎನ್ನುತ್ತಲೇ ಅವರ ಬಳಿಗೆ ಧಾವಿಸುತ್ತಿದ್ದೆ. ಎಷ್ಟೋ ಬಾರಿ, ನಾನು ಕೇರ್‌ ತಗೊಳ್ತೀನೋ ಇಲ್ಲವೋ ಎಂಬುದನ್ನು ಚೆಕ್‌ ಮಾಡಲೆಂದೇ ಅಪ್ಪ-ಅಮ್ಮ ಕೆಮ್ಮುತ್ತಿದ್ದರು. ಸತ್ಯ ಸಂಗತಿ ಗೊತ್ತಾದಾಗ, ಮೂವರೂ ಒಟ್ಟಾಗಿ ಕೂತು ನಗುತ್ತಿದ್ದೆವು. ಪರಸ್ಪರರ ಕಾಲೆಳೆಯುತ್ತಿದ್ದೆವು. ಹೀರೋ ಆದ ಮೇಲೆ ದುಡ್ಡು ಬಂತಲ್ಲ; ಅದರಿಂದ ಬಂಗಲೆ ಕಟ್ಟಿಸಿಕೊಂಡೆ. ಅಮ್ಮನಿಗೊಂದು ಪ್ರತ್ಯೇಕ ರೂಂ ಕೊಟ್ಟೆ. ಅಪ್ಪನಿಗೂ. ನಾವು ಗಂಡ-ಹೆಂಡತಿ, ಮತ್ತೂಂದು ರೂಂನಲ್ಲಿ ಉಳಿದುಕೊಂಡೆವು. ಅದೊಮ್ಮೆ, ತನ್ನ ರೂಂನಲ್ಲಿ ಕೂತಿದ್ದಾಗಲೇ ಅಮ್ಮನಿಗೆ ಸ್ಟ್ರೋಕ್‌ ಆಯಿತು. ನನಗದು ಗೊತ್ತೇ ಆಗಲಿಲ್ಲ. ಗೊತ್ತಾಗುವ ವೇಳೆಗೆ, ಚಿಕಿತ್ಸೆಯಿಂದ ಪ್ರಯೋಜನವಿಲ್ಲ ಎಂಬ ಸ್ಥಿತಿಗೆ ಅಮ್ಮ ಹೋಗಿಬಿಟ್ಟಿದ್ದಳು! ಕೆಲವು ತಿಂಗಳುಗಳ ನಂತರ, ಅದೇ ರೂಮಿನಲ್ಲಿ, ಮಧ್ಯರಾತ್ರಿ ಹಾರ್ಟ್‌ಅಟ್ಯಾಕ್‌ ಆಗಿ, ಅಮ್ಮ ಮಲಗಿದ್ದಲ್ಲೇ ಸತ್ತುಹೋದಳು. ಈ ಸಂಗತಿ ನನಗೆ ಗೊತ್ತಾದದ್ದೂ ಮರುದಿನ ಬೆಳಗ್ಗೆಯೇ. ಶ್ರೀಮಂತಿಕೆಯ ಕಾರಣದಿಂದಲೇ ನಮ್ಮ ಮನೆಯಲ್ಲಿ ಗೋಡೆಗಳು ಎದ್ದುನಿಂತವು. ಅದು ಇಲ್ಲದಿದ್ದರೆ, ಅಮ್ಮನಿಗೆ ಹಾರ್ಟ್‌ ಅಟ್ಯಾಕ್‌ ಆದ ತಕ್ಷಣ, ಆಸ್ಪತ್ರೆಗೆ ಕರೆದೊಯ್ದು, ಅವಳನ್ನು ಉಳಿಸಿಕೊಳ್ಳುತ್ತಿದ್ದೆ. ನಾವು ಕಲಾವಿದರು, ತೆರೆಯ ಮೇಲೆ ಪವಾಡಗಳನ್ನೇ ಮಾಡಿಬಿಡುತ್ತೇವೆ. ಆದರೆ, ಬದುಕು ಸಿನಿಮಾ ಅಲ್ಲವಲ್ಲ; ಹಾಗಾಗಿ, ಮನೆಯೊಳಗೆ, ನೀನೂ ನಿಸ್ಸಹಾಯಕ ಎಂಬ ನಗ್ನ ಸತ್ಯ ದಿನವೂ ನನ್ನನ್ನು ಅಣಕಿಸುತ್ತದೆ.

ನಮ್ಮನ್ನು ದೂರದಿಂದಷ್ಟೇ ನೋಡಿ, ಅಯ್ಯೋ ಅವರಿಗೇನ್ರಿ ಕಡಿಮೆಯಾಗಿರೋದು? ಖ್ಯಾತಿ, ಹಣ, ಗೌರವ ಎಲ್ಲವೂ ಕಾಲ ಬಳಿಗೇ ಬಂದುಬಿದ್ದಿದೆ ಅನ್ನುತ್ತಾರೆ ಜನ. ಏನಿದ್ದರೆ ಏನºಂತು? ಅಮ್ಮ ಉಸಿರು ಚೆಲ್ಲಿದಾಗ ಅವಳ ಪಕ್ಕ ಕೂರುವ ಸೌಭಾಗ್ಯ ಇಲ್ಲದ ಮೇಲೆ, ಅಮ್ಮನನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಮೇಲೆ ಲಕ್ಷ-ಕೋಟಿಯಿಂದ ಏನುಪಯೋಗ ಎಂದು ಕೇಳಬೇಕು ಅನಿಸುತ್ತದೆ. ಏನೇ ಹೇಳಿಕೊಂಡರೂ, ಎಷ್ಟೇ ಪ್ರಾರ್ಥಿಸಿದರೂ ಕಣ್ಮರೆಯಾದ ಅಮ್ಮ ಮರಳಿ ಬರುವುದಿಲ್ಲ ಅನ್ನಿಸಿದಾಗ ಮಾತ್ರ, ಯಾರ ಅಪ್ಪಣೆಯೂ ಬೇಕಿಲ್ಲ ಎಂಬಂತೆ ಕೆನ್ನೆಗಿಳಿವ ಕಣ್ಣೀರು, ಆನಂತರದ ಎಷ್ಟೋ ಹೊತ್ತಿನವರೆಗೂ ಹರಿಯುತ್ತಲೇ ಇರುತ್ತದೆ…
ಅಮ್ಮನಿದ್ದಿದ್ದರೆ, ಕಂಬನಿ ಒರೆಸುತ್ತಿದ್ದಳು. ಸಮಾಧಾನ ಹೇಳುತ್ತಿದ್ದಳು. ಕಡೆಗೊಮ್ಮೆ ನನ್ನನ್ನು ನಗಿಸುತ್ತಿದ್ದಳು. ಆದರೆ…

 ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next