Advertisement

ಹಲಸಿನ ಘಮ ಘಮ…ಹಣ್ಣು, ತಿನಿಸು, ಸಸ್ಯಗಳ ಸಮಾಗಮ

10:23 PM Jul 13, 2019 | sudhir |

ಉಡುಪಿ: ಸುವಾಸನೆ ಭರಿತ ರುಚಿಕರ ಹಲಸಿನ ಹಣ್ಣುಗಳು, ಹಲಸಿನ ಹಣ್ಣಿನಿಂದ ಮಾಡಿದ ಸಾಂಪ್ರದಾಯಿಕ ತಿನಿಸುಗಳು, ಹಲಸಿನ ಹಣ್ಣಿನ ಹೊಸ ಹೊಸ ಖಾದ್ಯಗಳು, ಐಸ್‌ಕ್ರೀಂ, ಸೋಪ್‌, ಜಾಮ್‌, ಮಂಚೂರಿ ಮೊದಲಾದ ಹೊಸ ಹೊಸ ಪ್ರಯೋಗದ ಉತ್ಪನ್ನಗಳು. ಜತೆಗೆ ವಿಧ ವಿಧ ಹಲಸಿನ ಹಣ್ಣಿನ ಸಸಿಗಳು, ಇತರೆ ಗಿಡಗಳು.

Advertisement

ಶನಿವಾರ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟ ಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ (ರೈತ ಸೇವಾ ಕೇಂದ್ರ) ಆವರಣದಲ್ಲಿ ಆರಂಭಗೊಂಡ 3 ದಿನಗಳ ಉಡುಪಿ ಜಿಲ್ಲಾ ಮಟ್ಟದ ಹಲಸು ಮೇಳ ಮತ್ತು ಸಸ್ಯ ಸಂತೆ ಜನಾಕರ್ಷಣೆಯ ತಾಣವಾಯಿತು.

ಹಲಸಿನ ಹಣ್ಣಿನ ಹೋಳಿಗೆ
ಈ ಬಾರಿ ಹಲಸಿನ ಹಣ್ಣಿನ ಬೀಜ ಮತ್ತು ಹಲಸಿನ ಹಣ್ಣಿನಿಂದ (ಎರಡೂ ಪ್ರತ್ಯೇಕ) ಮಾಡಿದ ಹೋಳಿಗೆ ವಿಶೇಷವಾಗಿ ಜನರ ಗಮನ ಸೆಳೆಯಿತು. ಉಡುಪಿಯ ಈ ಮೇಳದಲ್ಲಿ ಇದನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು.
ಪುತ್ತೂರಿನ ಕಲ್ಪ ಸಂಸ್ಥೆಯವರು ಹಲಸಿನ ಬೀಜ ಮತ್ತು ಸಾವಯವ ಬೆಲ್ಲವನ್ನು ಸೇರಿಸಿ ಸ್ಥಳದಲ್ಲಿಯೇ ಹೋಳಿಗೆಯನ್ನು ಮಾಡಿಕೊಡುತ್ತಿದ್ದರು. ಅಲ್ಲಿಯೇ ಮುಂದಕ್ಕೆ ಮೂಡುಶೆಡ್ಡೆಯ ಲಕ್ಷ್ಮೀ ಸಿ. ಆಚಾರ್ಯ ಅವರು ಹಲಸಿನ ಹಣ್ಣು, ಬೆಲ್ಲ, ತೆಂಗಿನ ಕಾಯಿ ಹಾಕಿ ಹೋಳಿಗೆ ತಯಾರಿಸಿ ಕೊಡುತ್ತಿದ್ದರು. ಲಕ್ಷ್ಮೀ ಅವರು ಕಳೆದೆರಡು ವರ್ಷಗಳಿಂದ ಇಂಥ ಹೋಳಿಗೆ ಮಾಡುತ್ತಿದ್ದು ಜನರಿಂದ ಉತ್ತಮ ಬೇಡಿಕೆ ಇದೆಯಂತೆ.

ಸಕ್ಕರೆ ಅಂಶವೂ ಪರೀಕ್ಷೆ !
ಶಂಕರ ಪ್ರಭು ಅವರು ತಾನು ಬೇರೆಯವರಿಂದ ಹಲಸನ್ನು ಖರೀದಿಸುವಾಗ ಅದು ಎಷ್ಟಿದೆ ಎಂಬುದನ್ನು ಯಂತ್ರದ ಮೂಲಕ ಪರೀಕ್ಷಿಸುತ್ತಾರೆ. ಹಾಗಾಗಿ ಅವರಿಗೆ ಯಾವ ಜಾತಿಯ ಹಣ್ಣು ಎಷ್ಟು ಸಕ್ಕರೆ ಅಂಶ ಹೊಂದಿದೆ ಎಂಬುದು ಸ್ಪಷ್ಟವಾಗಿ ತಿಳಿದಿರುತ್ತದೆಯಂತೆ! ಸ್ಥಳೀಯವಾಗಿ ಸಿಗುವ ಒಂದು ಜಾತಿಯ ಹಲಸಿನಲ್ಲಿ ಕೇವಲ ಶೇ.20ರಷ್ಟು ಮಾತ್ರ ಸಕ್ಕರೆ ಅಂಶ ಹೊಂದಿರುತ್ತದೆ. ಇದರಿಂದ ಡಯಾಬಿಟೀಸ್‌ನವರಿಗೂ ಯಾವುದೇ ತೊಂದರೆಯಾಗದು. ಜೇನು ಬಕ್ಕೆಯಲ್ಲಿ ಶೇ.26, ಸುಂದರ ಜಾತಿಯ ಹಲಸಿನಲ್ಲಿ ಶೇ.32ರಷ್ಟು ಸಕ್ಕರೆ ಅಂಶವಿರುತ್ತದೆ ಎನ್ನುತ್ತಾರೆ ಶಂಕರ ಪ್ರಭು.

Advertisement

ಒಂದೂವರೆ ವರ್ಷದಲ್ಲಿ ಫ‌ಸಲು?
ಹಲಸಿನ ಸಸಿಗಳಿಗೆ ಕೂಡ ಬೇಡಿಕೆ ಕಂಡು ಬಂತು. “ನಮ್ಮಲ್ಲಿ ಕೇರಳ ಮೂಲದ ಆಯುರ್‌ ಜಾಕ್‌ ಜಾತಿಯ ಹಲಸು ಇದೆ. ಇದು ಸುಮಾರು ಒಂದೂವರೆ ವರ್ಷದಲ್ಲಿ ಫ‌ಲ ನೀಡುತ್ತದೆ. ಜೆ1 ಸೂಪರ್‌ ಅರ್ಲಿ ಜಾತಿಯ ಗಿಡ ಮೂರು ವರ್ಷದಲ್ಲಿ ಫ‌ಸಲು ನೀಡುತ್ತದೆ ಎಂದು ಮಾರಾಟಗಾರ ಫಾಯಜ್‌ ಹೇಳಿದರು. ಹೂವು, ಹಣ್ಣು, ಔಷಧೀಯ, ಆಲಂಕಾರಿಕ ಗಿಡಗಳಿಗೆ ಕೂಡ ಉತ್ತಮ ಬೇಡಿಕೆ ವ್ಯಕ್ತವಾಯಿತು.

ಹಲಸು ಖರೀದಿಗೆಂದೇ ಬಂದೆ
ಕಳೆದ ವರ್ಷವೂ ಹಲಸು ಮೇಳಕ್ಕೆ ಬಂದಿದ್ದೆ. ಉತ್ತಮ ಹಲಸುಗಳನ್ನು ಕೊಂಡೊಯ್ದಿದ್ದೆ. ಈ ಬಾರಿಯೂ ನಮ್ಮ ಮನೆಯವರು ಹಲಸಿನ ಮೇಳಕ್ಕೆ ಹೋಗಿ ಹಲಸು ತರಲು ಹೇಳಿದರು. ಅದರಂತೆ ಬಂದು ಖರೀದಿಸುತ್ತಿದ್ದೇನೆ. ಖುಷಿಯಾಗಿದೆ. – ಜಗದೀಶ್‌ ಕಾಮತ್‌, ಕನ್ನರ್ಪಾಡಿ

ತೂಬುಗೆರೆಯಿಂದ 3 ಟನ್‌
ತೂಬುಗೆರೆಯ ಹಲಸು ಬೆಳೆಗಾರರ ಸಂಘದ ಕಾರ್ಯದರ್ಶಿ ಎಂ.ಜಿ.ರವಿ ಕುಮಾರ್‌ ಅವರು ಕಳೆದ ವರ್ಷದಂತೆ ಈ ವರ್ಷವೂ 3 ಟನ್‌ ಹಲಸು ತಂದಿದ್ದರು. ಅದರಲ್ಲಿ ಕೆಂಪು, ಹಳದಿ ರುದ್ರಾಕ್ಷಿ, ಚಂದ್ರ ಹಲಸು, ಏಕಾದಶಿ ಹಲಸು ಕೂಡ ಸೇರಿದ್ದವು. 12 ಸೊಳೆಗೆ 50 ರೂ.ಗಳಂತೆ ಮಾರಾಟ ಮಾಡಿದರು. “ಉತ್ತಮ ಬೇಡಿಕೆ ಇದೆ. ಈ ವರ್ಷವೂ ಎಲ್ಲ ಹಲಸು ಖಾಲಿಯಾಗುವ ನಿರೀಕ್ಷೆ ಇದೆ’ ಎಂದು ರವಿಕುಮಾರ್‌ ಹೇಳಿದರು.

ತೂಬುಗೆರೆಯಲ್ಲಿ 2008ರಲ್ಲಿ ಸಂಘ ಆರಂಭಗೊಂಡು ಕೇವಲ 3 ಲ.ರೂ.ಗಳ ವಹಿವಾಟು ನಡೆಸಿತ್ತು. ಪ್ರಸ್ತುತ ಹಲಸಿನ ಹಣ್ಣಿನಿಂದಲೇ ವರ್ಷಕ್ಕೆ 30ರಿಂದ 35 ಲ.ರೂ. ವಹಿವಾಟು ನಡೆಸುತ್ತಿದೆ ಎಂದರು ರವಿಕುಮಾರ್‌.

ಐಸ್‌ಕ್ರೀಂ, ಪೋಡಿ, ಶೀರಾ
ಸಾಣೂರು ಹಲಸು ಬೆಲೆಗಾರರ ಸಂಘದ ಶಂಕರ ಪ್ರಭು ಅವರು ವರ್ಷಕ್ಕೆ 10ರಷ್ಟು ಹಲಸು ಮೇಳಗಳಲ್ಲಿ ಪಾಲ್ಗೊಳ್ಳುತ್ತಾರೆ. ಅವರು ಈ ಬಾರಿ ಚಂದ್ರ ಬಕ್ಕೆ, ಜೇನು ಬಕ್ಕೆ, ದಾದು ತುಳುವ, ಸಕ್ಕರೆ ಬಕ್ಕೆ, ಕೋವಿ, ಪ್ರತಾಪ್‌ಚಂದ್ರ ಮೊದಲಾದ ತಳಿಗಳ ಹಲಸನ್ನು ತಂದಿದ್ದರು. ಬಿಡಿಸಿಟ್ಟ ಚಂದ್ರ ತುಳುವ ಹಣ್ಣು ತನ್ನ ಬಣ್ಣದಿಂದಲೇ ಆಕರ್ಷಿಸುತ್ತಿತ್ತು. ಹಣ್ಣು ಮಾರಾಟದ ಜತೆಗೆ ಪ್ರಭು ಅವರು ಹಪ್ಪಳ, ಗಟ್ಟಿ, ಹೋಳಿಗೆ ಕೂಡ ತಂದಿದ್ದರು. ಮುಲ್ಕ ಕೂಡ ತಯಾರಿಸಿಕೊಡುತ್ತಿದ್ದರು. ಈ ಬಾರಿ ವಿಶೇಷವಾಗಿ ಜಾಮ್‌, ಶೀರಾ, 4 ಬಗೆಯ ಪೋಡಿಗಳನ್ನು ಕೂಡ ತಯಾರಿಸಿ ಕೊಡುತ್ತಿದ್ದರು. ಪುತ್ತೂರಿನ ಕೆ.ಪಿ. ಭಟ್‌ ಅವರು ಹಲಸಿನ ಹಣ್ಣಿನಿಂದ ಮಾಡಿದ ಸಾಬೂನು ಕೂಡ ತಂದಿದ್ದರು. ಇದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಭಟ್‌ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next