ಇನ್ನೇನು ಹಲಸು, ಮಾವಿನ ಕಾಯಿಯ ಸೀಸನ್ ಪ್ರಾರಂಭವಾಗುತ್ತಿದೆ. ಕರಾವಳಿ ಭಾಗದಲ್ಲಂತೂ ನಾನಾ ವಿಧದ ಹಲಸು, ಮಾವು ಹೇರಳವಾಗಿಯೇ ಸಿಗುತ್ತಿದೆ. ಹೀಗಾಗಿ ಪ್ರತಿ ಬಾರಿಯೂ ಪಲ್ಯ, ಸಾಂಬಾರು, ತಿಂಡಿ ಮಾಡುವ ಬದಲು ಒಂದಷ್ಟು ವಿಭಿನ್ನ ರುಚಿ ಮಾಡಿ ನೋಡಬಹುದು. ಈ ಹಿನ್ನೆಲೆ ಗೋಬಿ, ಮಶ್ರೂಮ್ ಮಂಚೂರಿಯನ್ನು ಎಲ್ಲರೂ ಸವಿದಿರುತ್ತಾರೆ. ಆದರೆ ಹಲಸಿನ ಕಾಯಿಯ ಮಂಚೂರಿ ಬಗ್ಗೆ ಕೇಳಿರಬಹುದು ಆದರೆ ಮಾಡಿದವರು ಕಡಿಮೆ. ಹೀಗಾಗಿ ರುಚಿರುಚಿಯಾದ ಹಲಸಿನ ಕಾಯಿಯ ಮಂಚೂರಿಯನ್ನು ಮನೆಯಲ್ಲೇ ಮಾಡಬಹುದಾಗಿದ್ದು, ವಿಭಿನ್ನ ರುಚಿಯನ್ನು ಸವಿಯಬಹುದು
ಬೇಕಾಗುವ ಸಾಮಗ್ರಿಗಳು: ಹಲಸಿನ ಕಾಯಿಯ ಹೋಳು- ಎರಡೂವರೆ ಕಪ್, ಅಕ್ಕಿ ಹುಡಿ- ಮುಕ್ಕಾಲು ಕಪ್, ಕಡ್ಲೆಹುಡಿ- ಎರಡು ಚಮಚ, ಆರಾರೋಟು (ಕೂವೆ) ಹುಡಿ- ಎರಡು ಚಮಚ, ಮೆಣಸಿನ ಹುಡಿ- ಎರಡು ಚಮಚ, ಹಸಿಮೆಣಸಿನ ಕಾಯಿ- ಮೂರು, ಟೊಮೆಟೊ- ಮೂರು, ಈರುಳ್ಳಿ-ಎರಡು, ಬೆಳ್ಳುಳ್ಳಿ- ಹತ್ತು ಎಸಳು, ಹೆಚ್ಚಿದ ಕೊತ್ತಂಬರಿ ಸೊಪ್ಪು- ಅರ್ಧ ಕಪ್, ಲಿಂಬೆರಸ- ಮೂರು ಚಮಚ, ಶುಂಠಿ- ಸಣ್ಣ ತುಂಡು, ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಹಲಸಿನ ಸಿಪ್ಪೆ, ಗೂಂಜು ತೆಗೆದು ಹದ ಗಾತ್ರದ ಹೋಳುಗಳಾಗಿ ಮಾಡಿಕೊಳ್ಳಿ. ಅಕ್ಕಿ ಹುಡಿಗೆ ಕಡ್ಲೆ ಹುಡಿ, ಉಪ್ಪು, ಮೆಣಸಿನ ಹುಡಿ, ಹಾಕಿ ದಪ್ಪಗೆ ಕಲಸಿಕೊಳ್ಳಿ. ಇದಕ್ಕೆ ಕೂವೆ ಹುಡಿಯನ್ನು ನೀರಿನಲ್ಲಿ ಕದಡಿ ಸೇರಿಸಿಕೊಂಡು ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಇದಕ್ಕೆ ಗುಜ್ಜೆ ಹೋಳುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ. ಟೊಮೆಟೊ ಹಣ್ಣನ್ನು ಬೇಯಿಸಿ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿ, ಮೆಣಸಿನ ಹುಡಿ, ಉಪ್ಪು, ಸಕ್ಕರೆ ಹಾಕಿ ದಪ್ಪಗಿನ ದ್ರಾವಣ ಮಾಡಿಕೊಳ್ಳಿ. ಬಾಣಲೆಗೆ ಮೂರು ಚಮಚ ಎಣ್ಣೆ ಹಾಕಿ ಕಾದ ಅನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು ಹಾಕಿ ಕೆಂಪಗೆ ಹುರಿದು, ಮಾಡಿಟ್ಟ ಟೊಮೆಟೊ ರಸವನ್ನು ಸೇರಿಸಿ ಚೆನ್ನಾಗಿ ಕುದಿಸಿ. ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ, ಹುರಿದ ಗುಜ್ಜೆ ಹೋಳುಗಳನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಕೊನೆಗೆ ಲಿಂಬೆರಸ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸವಿಯಿರಿ.