ಗಜೇಂದ್ರಗಡ: ಉಂಡು ಮಾವು ತಿನ್ನು, ಹಸಿದು ತಿನ್ನು ಹಲಸು ತಿನ್ನು ಎನ್ನುವ ಗಾದೆಯೇ ಇದೆ. ಹಲಸಿನ ಹಣ್ಣು ಈಗ ಕೋಟೆ ನಾಡಿನ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸಂತೆಯಲ್ಲಿ ಪರಿಮಳ ಸೂಸುತ್ತ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.
ಪಟ್ಟಣದ ರಸ್ತೆ ಬದಿಯಲ್ಲಿ ಹಲಸಿನ ಮಾರಾಟ ಜೋರಾಗಿ ನಡೆಯುತ್ತಿದ್ದು, ಶಿವಮೊಗ್ಗ, ಶಿಕಾರಿಪುರ, ಸಾಗರ, ಶಿರಸಿ ಕಡೆಯ ಬೆಳೆಗಾರರು ಹಣ್ಣು ತಂದು ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಅಲ್ಲಿಂದಹಲಸಿನ ಹಣ್ಣು ತರುವ ಪಟ್ಟಣದ ಮಾರಾಟಗಾರರು ಗಾತ್ರಕ್ಕೆ ತಕ್ಕಂತೆ ಮಾರುತ್ತಾರೆ.
ಸಣ್ಣ ಗಾತ್ರದ ಹಣ್ಣಿಗೆ 150 ರೂ, ದೊಡ್ಡ ಗಾತ್ರದ ಹಣ್ಣಿಗೆ 200 ರಿಂದ 350ರವರೆಗೆ ಮಾರಾಟ ಆಗುತ್ತವೆ. ಆದರೆ ಬಯಲು ಸೀಮೆಯಲ್ಲಿ ಬಹುತೇಕರು ಪೂರ್ಣ ಹಣ್ಣುಗಳನ್ನು ಮಾರದೇ ಹಣ್ಣುಗಳನ್ನು ಬಿಡಿಸಿ, ಒಂದು ಪೀಸ್ ಹಲಸಿನ ಹಣ್ಣಿಗೆ 5 ರೂ.ನಂತೆ ವ್ಯಾಪಾರ ಮಾಡುತ್ತಾರೆ. ಹಲಸು ಹಣ್ಣಿನ ಪೀಸ್ ಕೆಜಿಗೆ 100 ರಿಂದ 120ರವರೆಗೆ ಮಾರಾಟ ಆಗುತ್ತದೆ.
ಹಲಸುಗಳನ್ನು ಬಿಡಿಸಿ, ಒಂದು ಡಬ್ಟಾದಲ್ಲಿ ಹಾಕಿ ರಸ್ತೆ ಬದಿಯ ತಳ್ಳುವ ಗಾಡಿಯಲ್ಲಿಟ್ಟುಕೊಂಡು ಮಾರಾಟ ಮಾಡಲಾಗುತ್ತಿದ್ದು, ದಾರಿ ಹೋಕರು ಇದರ ಸುವಾಸನೆಗೆ ಬಾಯಿ ಚಪ್ಪರಿಸಿ ಹಣ್ಣು ಸವಿದು ಮನೆಗೂ ತೆಗೆದುಕೊಂಡು ಹೋಗುತ್ತಾರೆ.
ಮಳೆಗಾಲದಲ್ಲಿ ಮಾತ್ರ ದೊರೆಯುವ ಹಣ್ಣು ಇದಾಗಿದ್ದು, ಬಸವ ಜಯಂತಿಯಿಂದ ಆರಂಭವಾಗಿ ಆಷಾಢದ ಅಂತ್ಯದವರೆಗೂ ಈ ಹಣ್ಣು ಸವಿಯಲು ಸಿಗುತ್ತದೆ.
ಈ ಭಾಗದಲ್ಲಿ ಹಲಸು ಹಣ್ಣು ಕಂಡು ಬರುವುದು ಕಡಿಮೆ. ಹೀಗಾಗಿ ಪ್ರತಿ ವರ್ಷ ಬೇರೆ ಊರುಗಳಿಂದ ಹಲಸಿನ ಹಣ್ಣು ತಂದು ಇಲ್ಲಿ ಮಾರಾಟ ಮಾಡುತ್ತೇವೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ.
•ಶಂಕ್ರಪ್ಪ ಪಾತ್ರೋಟಿ,ಹಲಸಿನ ಹಣ್ಣು ವ್ಯಾಪಾರಿ
ಹಲಸು ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಷಿಯಂ, ಕ್ಯಾಲ್ಸಿಯಂ ಅಂಶಗಳಿವೆ. ಎಲ್ಲ ಹಣ್ಣುಗಳಲ್ಲಿ ಹಲಸು ಮಹತ್ವದ ಪಾತ್ರ ವಹಿಸುತ್ತದೆ. ಇದರ ಸೇವನೆಯಿಂದ ಬಹುಪಯೋಗಗಳಿವೆ.
•ರೇಶ್ಮಾ ಕೋಲಕಾರ,ಹಿರಿಯ ವೈದ್ಯರು.
•ಡಿ.ಜಿ. ಮೋಮಿನ್