Advertisement
ಮೇಳದಲ್ಲಿ ಸುಮಾರು 40 ಆಹಾರ ಮಳಿಗೆಗಳು, ಎರಡು ಗಿಡ ಮಾರಾಟದ ಮಳಿಗೆಗಳಿದ್ದವು. ಮಂಚೂರಿ, ಚಿಲ್ಲಿ, ರೋಸ್ಟ್, ಕೇಸರಿಬಾತ್, ಬರ್ಫಿ, ಅಂಬಡೆ, ಬನ್ಸ್, ಗಟ್ಟಿ, ಪಾಯಸ, ಗಾರಿಕೆ, ಚಿಪ್ಸ್, ಹಪ್ಪಳ, ಕಬಾಬ್, ಚಿಕ್ಕಿ, ಉಪ್ಪಿನಕಾಯಿ, ಜಾಮೂನ್ ಹೀಗೆ ಹಲವು ವಿಧದ ಹಲಸಿನ ಮೌಲ್ಯವರ್ಧಿತಉತ್ಪನ್ನಗಳು ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾದವು. ಇದರ ಜತೆಗೆ ಸಾವಯವ ತರಕಾರಿ, ಹಣ್ಣು ಹಂಪಲು ಮಾರಾಟ, ಹಲಸಿಗೆ ಸಂಬಂಧಿಸಿದ ಪುಸ್ತಕಗಳು, ವಿವಿಧ ತಳಿಯ ಗಿಡ, ಬೀಜಗಳ ಮಾರಾಟ ನಡೆಯಿತು.
ಪುತ್ತೂರು ಮರಿಕೆಯ ಸುಹಾಸ್- ಮಾನಸ ಯುವಕರ ತಂಡದಿಂದ ಹಲಸಿನ ಐಸ್‌ಕ್ರೀಮ್, ಉಪ್ಪಿನಂಗಡಿ ಇಳಂತಿಲ ಆದರ್ಶ ಐಸ್‌ಕ್ರೀಮ್ ತಯಾರಿಸಿ ಭಾಗವಹಿಸಿದ್ದು ಗಮನಸೆಳೆಯಿತು. ಹಲಸಿನ ಪಾಯಸ!
ಉಪ್ಪಿನಂಗಡಿಯ ಮಂಜುನಾಥ ಭಟ್ ಅವರು ಹಲಸಿನ ಬೀಜದ ಪಾಯಸ ಹಂಚಿದರು. ಪದವಿನಂಗಡಿಯ ವಿನೋದ್ ಅವರು ಹಲಸಿನ ಬೀಜದ ಚಟ್ನಿ ಹುಡಿ ಮಾರಾಟ ಮಾಡಿದರು. ಮೂಡುಶೆಡ್ಡೆ ಹಾಗೂ ಉಪ್ಪಿನಂಗಡಿಯಿಂದ ಬಂದಿದ್ದ ವ್ಯಾಪಾರಿಗಳು ಸ್ಥಳದಲ್ಲಿಯೇ ಬಿಸಿಬಿಸಿ ಹೋಳಿಗೆಗಳನ್ನು ರೆಡಿ ಮಾಡುತ್ತಿದ್ದರು. ಹಲಸಿನ ಉತ್ಪನ್ನಗಳಲ್ಲಿ ಕೆಲವೊಂದನ್ನು ಮೊದಲೇ ತಯಾರಿಸಿ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದರೆ, ಇನ್ನು ಕೆಲವನ್ನು ಸ್ಥಳದಲ್ಲೇ ತಯಾರಿಸಿ ಕೊಡಲಾಗುತ್ತಿತ್ತು. ಮಾರಾಟಗಾರರು ತೆಂಗಿನ ಎಣ್ಣೆ ಉಪಯೋಗಿಸಿಯೇ ಉತ್ಪನ್ನಗಳನ್ನು ತಯಾರಿಸಬೇಕು ಎಂದು ಸಾವಯವ ಬಳಗದಿಂದ ಮೊದಲೇ ಸೂಚನೆ ನೀಡಲಾಗಿತ್ತು. ಗ್ರಾಹಕರೂ ಖರೀದಿಸುವಾಗ ಪರಿಶೀಲಿಸಿ ಖರೀದಿಸುವಂತೆ ಆಯೋಜಕರು ಸೂಚಿಸುತ್ತಿದ್ದರು.
Related Articles
ಬೆಳಗ್ಗೆ ಸುಮಾರು 7 ಗಂಟೆಗೆ ಹಲಸು ಹಬ್ಬ ಆರಂಭವಾಯಿತು. ಆ ಕ್ಷಣದಿಂದಲೇ ಭಾರೀ ಸಂಖ್ಯೆಯಲ್ಲಿ ಜನರು ಹಬ್ಬದಲ್ಲಿ ಪಾಲ್ಗೊಂಡರು. ಸಂಜೆಯವರೆಗೆ ಸಾವಿರಾರು ಜನರು ಬಂದು ಹಲಸು ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಕೆಲವರು ಸ್ಥಳದಲ್ಲೇ ಹಲಸಿನ ವಿವಿಧ ಉತ್ಪನ್ನಗಳನ್ನು ಸವಿದರೆ, ಇನ್ನು ಕೆಲವರು ಹಲಸು, ಹಲಸಿನ ಉತ್ಪನ್ನಗಳನ್ನು ಖರೀದಿಸಿ ಮನೆಗೆ ಕೊಂಡೊಯ್ದರು. ಅಂತೂ, ಮನೆ ಮಂದಿ ಹಲಸಿನ ಹಬ್ಬದಲ್ಲಿ ಭಾಗ ವಹಿಸಿ ‘ಸಂಡೇ’ ಎಂಜಾಯ್ ಮಾಡಿದರು.
Advertisement
ತೂಬುಗೆರೆಯಿಂದ ಬಂದಿತ್ತು ಹಲಸು!ಸಾವಯವ ಕೃಷಿಕ-ಗ್ರಾಹಕರ ಬಳಗದ ಸಂಘಟನ ಕಾರ್ಯದರ್ಶಿ ಕೆ. ರತ್ನಾಕರ ಕುಳಾಯಿ ಮಾತನಾಡಿ, ಬೆಂಗಳೂರಿನ ಗ್ರಾಮೀಣ ಜಿಲ್ಲೆಯ ತೂಬುಗೆರೆಯ ಪ್ರಸಿದ್ಧ ಕೆಂಪುತೊಳೆಯ ರುದ್ರಾಕ್ಷಿ ಹಲಸಿನ ಪ್ರದರ್ಶನ ಈ ಬಾರಿ ವಿಶೇಷವಾಗಿತ್ತು. ದೇಶದಲ್ಲಿಯೇ ಪ್ರಥಮ ಹಲಸು ಬೆಳೆಗಾರರ ಸಂಘದ ಎಂ.ಜಿ. ರವಿಕುಮಾರ್ ಹಾಗೂ ತಂಡದವರು ಸುಮಾರು 2 ಟನ್ ಕೆಂಪು ತೊಳೆಯ ರುದ್ರಾಕ್ಷಿ ಹಲಸಿನ ಹಣ್ಣು ತಂದು ಮಾರಾಟ ಮಾಡಿದರು. ಸಣ್ಣ ಗಾತ್ರದ ಹಣ್ಣುಗಳು ಗ್ರಾಹಕರ ವಿಶೇಷ ಆಕರ್ಷಣೆಗೆ ಕಾರಣವಾಗಿದ್ದವು. ಶಿವಮೊಗ್ಗದ ರಿಪ್ಪನ್‌ಪೇಟೆಯ ಅನಂತ ಮೂರ್ತಿ ಜವಳಿ ಹಾಗೂ ಅಮೋಘ ಜವಳಿ ಅವರು ಹಲಸಿನ ಸಸಿಗಳ ಮಾರಾಟ ಮಾಡಿದರು.