Advertisement
ಇತ್ತೀಚೆಗೆ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಜಾಕೆಟ್ ಬ್ಲೌಸ್ ಸೀರೆಯ ಅಂದವನ್ನು ಇಮ್ಮಡಿಗೊಳಿಸುತ್ತಿದೆ. ಈಗ ಸೀರೆ ಉಟ್ಟಾಗ ಧರಿಸಲೆಂದೇ ವಿಶೇಷ ವಿನ್ಯಾಸದ ಜಾಕೆಟ್‌ಗಳು ಲಭ್ಯವಾಗುತ್ತಿವೆೆ. ಇನ್ನು ಮಹಿಳೆಯರು ಸೀರೆಗೊಪ್ಪುವಂತಹ ಜಾಕೆಟ್‌ಗಳನ್ನು ಆಯ್ಕೆಗನುಸಾರವಾಗಿ ಖರೀದಿಸಬಹುದಾಗಿದೆ.
ದಿನಕ್ಕೊಂದು ಫ್ಯಾಷನ್ ಪರಿಚಯಿಸುವ ಬಾಲಿವುಡ್ ತಾರೆಯರು ಕೂಡ ಪಾರ್ಟಿ, ಇನ್ನಿತರ ಸಮಾರಂಭಗಳಿಗೆ ಈ ರೀತಿಯ ಜಾಕೆಟ್ ಬ್ಲೌಸ್ ಅನ್ನು ಉಟ್ಟು ಸಂಭ್ರಮಿಸುತ್ತಿದ್ದಾರೆ. ಇದು ನಟಿಯರಿಗಷ್ಟೇ ಅಲ್ಲ, ಕಾಲೇಜು ಸಮಾರಂಭ ಅಥವಾ ಮನೆಗಳಲ್ಲಿ ಆಗುವ ಕೆಲವು ಸಮಾರಂಭಗಳಲ್ಲಿ ತೊಟ್ಟು ವಿಭಿನ್ನ ಲುಕ್‌ನಲ್ಲಿ ಮಿಂಚಬಹುದಾಗಿದೆ. ಅದಲ್ಲದೆ ಸೀರೆಗಳಲ್ಲಿ ವಿಭಿನ್ನ ರೀತಿಯ ವಿನ್ಯಾಸಗಳು ಬಂದಿರುವುದು ಗೊತ್ತೆ ಇದೆ. ಅದರಲ್ಲಿ ಹಿಂದಿನ ಕಾಲದವರು ಉಡುತ್ತಿದ್ದ ಕಚ್ಚೆ ಸೀರೆಯ ಹಾಗೇ ಇರುವ ಈ ದೋತಿ ಸೀರೆಗಳಿಗೆ ಈ ಚಾಕೆಟ್ ಬ್ಲೌಸ್‌ಗಳು ಹೇಳಿ ಮಾಡಿಸಿದ್ದಾಗಿದೆ. ದೋತಿಗಳಿಗೆ ಬ್ಲೌಸ್ ಹೊಲಿಸುವಾಗ ಸಾಧ್ಯವಾದಷ್ಟು ಗಿಡ್ಡವಾಗಿರುವಂತೆ ನೋಡಿಕೊಳ್ಳಿ ಇಲ್ಲವಾದಲ್ಲಿ ಚೆಂದ ಕಾಣುವುದಿಲ್ಲ.
Related Articles
ಸೀರೆಗೆ ಯಾವಾಗಲೂ ಕಾಂಟ್ರಾಸ್ಟ್ ಬಣ್ಣದ ಸ್ಲಿವ್‌ಲೆಸ್ ಜಾಕೆಟ್ ಧರಿಸುವುದು ಚೆನ್ನಾಗಿ ಕಾಣುತ್ತದೆ. ಆಗ ಕಾಂಬಿನೆಷನ್ ಎದ್ದು ಕಾಣುತ್ತದೆ. ಇವುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಆದಷ್ಟು ಸೀರೆ ತುಂಬಾ ಸಿಂಪಲ್ ಆಗಿರುವಂತೆ ನೋಡಿಕೊಳ್ಳಿ. ಹೆಚ್ಚೆಂದರೆ ತೆಳ್ಳಗಿರುವ ಬಾರ್ಡರ್ ಆದರೆ ಸಾಕು. ಆದರೆ ಜಾಕೆಟ್ ಮಾತ್ರ ತುಂಬಾ ಗ್ರ್ಯಾಂಡ್ ಆಗಿರಲಿ. ಅವುಗಳಲ್ಲಿ ಮೀರರ್ ವರ್ಕ್ ಅಥವಾ ಕಸೂತಿ ವರ್ಕ್‌ಗಳಿದ್ದರೆ ಇನ್ನು ಉತ್ತಮ. ಇದನ್ನು ಪಾರ್ಟಿ ವೇರ್ ಆಗಿಯೂ ತೊಡಬಹುದಾಗಿದೆ.
Advertisement
ಇನ್ನು ಸೀರೆಯ ಮೇಲೆ ಬರುವ ಜಾಕೆಟ್‌ಗಳಿರುತ್ತವೆ. ಇವು ಕೂಡ ಸೀರೆಗೆ ಒಪ್ಪುವಂತಿದ್ದರೆ ಉತ್ತಮ. ಜರ್ದೋಸಿ ಬಳಸಿ ಕಸೂತಿ ಮಾಡಿರುವ ಜಾಕೆಟ್‌ಗಳು ತುಂಬಾ ಚೆಂದವಾಗಿ ಕಾಣಿಸುತ್ತದೆ. ಇದು ಮಧ್ಯವಯಸ್ಕ ಮಹಿಳೆಯರಿಗೆ ಹೇಳಿ ಮಾಡಿಸಿದ ರೀತಿಯಲ್ಲಿದ್ದು ಸೀರೆಯ ಸೆರಗನ್ನು ಮೇಲೆ ಧರಿಸಿ ಅಥವಾ ಜಾಕೆಟ್ ಮೇಲೆ ಧರಿಸಿದರೂ ಎರಡೂ ಕೂಡ ನಿಮ್ಮ ಸೀರೆಯ ಅಂದ ವನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.
- ಪ್ರೀತಿ ಭಟ್ ಗುಣವಂತೆ