ಇತ್ತೀಚೆಗೆ “ಏರಾ ಉಲ್ಲೆರ್‌ಗೆ’ ಸಿನೆಮಾದ ಮೂಲಕ ಕೋಸ್ಟಲ್‌ವುಡ್‌ನಲ್ಲಿ ಸಂಚಲನ ಮೂಡಿಸಿರುವ ದೇವದಾಸ್ ಕಾಪಿಕಾಡ್ ಈಗ “ಜಬರ್ದಸ್ತ್ ಶಂಕರ’ ಸಿನೆಮಾ ರಿಲೀಸ್‌ನ ಮೂಡ್‌ನಲ್ಲಿದ್ದಾರೆ.
ಅನಿಲ್ ಕುಮಾರ್, ಲೋಕೇಶ್ ಕೋಟ್ಯಾನ್, ರಾಜೇಶ್ ಕುಡ್ಲ ನಿರ್ಮಾಣದ ಈ ಸಿನೆಮಾದ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಹಾಗೂ ನಿರ್ದೇಶನವನ್ನು ದೇವದಾಸ್ ಕಾಪಿಕಾಡ್ ನಡೆಸಿದ್ದಾರೆ.
ಎಡಪದವು, ಬೆಂಜನಪದವು, ಮಂಗಳೂರು ವ್ಯಾಪ್ತಿಯಲ್ಲಿ ಸಿನೆಮಾದ ಶೂಟಿಂಗ್ ನಡೆದಿದೆ. ಕಾಮಿಡಿಯ ಜತೆಗೆ ಮಾಸ್ ಜನರಿಗೆ ಒಪ್ಪುವ ರೀತಿಯಲ್ಲಿ ವಿಭಿನ್ನ ಮ್ಯಾನರಿಸಂನ ಸಿನೆಮಾ ಮಾಡುವುದು ಚಿತ್ರತಂಡದ ಉದ್ದೇಶವಾಗಿತ್ತು. ಅರ್ಜುನ್ ಕಾಪಿಕಾಡ್ ಅವರ ಶೈಲಿ ಈ ಸಿನೆಮಾದಲ್ಲಿ ಹೆಚ್ಚು ಚರ್ಚಿತ ವಿಷಯವಾಗಲಿದೆ. ಹೀರೋಯಿಸಂ ಈ ಸಿನೆಮಾದಲ್ಲಿ ಮುಖ್ಯ ನೆಲೆಯಲ್ಲಿ ಕಾಣಿಸಿಕೊಂಡಿದೆ. ಫೈಟ್‌ಗೆ ವಿಶೇಷ ಆಸ್ಥೆ ನೀಡಲಾಗಿದೆ. ಒಂದು ವಾರ ಕಾಲ ಫೈಟ್ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
ಏರಾ ಉಲ್ಲೆರ್‌ಗೆ ತಂಡದಲ್ಲಿದ್ದ ಬಹುತೇಕ ಎಲ್ಲ ನಟರು ಅಭಿನಯಿಸಲಿದ್ದಾರೆ. ಸಾಯಿಕೃಷ್ಣ, ಸತೀಶ್ ಬಂದಳೆ, ಸುನಿಲ್ ನೆಲ್ಲಿಗುಡ್ಡೆ, ಲಕ್ಷ್ಮಣ ಕುಮಾರ್ ಮಲ್ಲೂರು, ಗೋಪಿನಾಥ್ ಭಟ್, ಚೇತನ್ ರೈ ಮಾಣಿ, ಸರೋಜಿನಿ ಶೆಟ್ಟಿ ಸೇರಿದಂತೆ ಹಲವರಿದ್ದಾರೆ. ಅಂದಹಾಗೆ ಚಾಪರ ತಂಡದ ಎಲ್ಲ ಕಲಾವಿದರು ಸಿನೆಮಾದಲ್ಲಿದ್ದು, ಉಳಿದ ನಾಟಕ ತಂಡದ ಒಂದೆರಡು ನಟರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
ವಿಶೇಷವೆಂದರೆ ದೇವದಾಸ್ ಕಾಪಿಕಾಡ್ ಅವರೂ ಸಿನೆಮಾದಲ್ಲಿ ಅಭಿನಯಿಸಲಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ,ಕೆಮರಾದಲ್ಲಿ ಸಿದ್ದು,ಸ್ಟಾರ್ ಗಿರಿ ಕೊರಿಯರ್, ಸಾಹಸ ಮಾಸ್ ಮಾದ ನಡೆಸಲಿದ್ದಾರೆ.