“ಜಾಜಿ’ ಎಂಬ ಆಲ್ಬಂ ಸಾಂಗ್‌ವೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ದರ್ಶನ್ ಆಲ್ಬಂ ಸಾಂಗ್ ಬಿಡುಗಡೆ ಮಾಡಿ ಶುಭಕೋರಿದರು. ಶಾಸಕ ಸತೀಶ್ ರೆಡ್ಡಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸುಮೋ ಪ್ರೊಡಕ್ಷನ್ಸ್‌ನಡಿ ಸುನೀತಾ ಮೋಹನ್ ರಾಜು ಅವರು “ಜಾಜಿ’ ಮ್ಯೂಸಿಕ್ ಸಾಂಗ್ ಅನ್ನು ನಿರ್ಮಿಸಿದ್ದು, ಹರ್ಷಿತ್ ಗೌಡ ಸಾಹಿತ್ಯ ಬರೆದು ಸಂಗೀತ ನೀಡಿದ್ದಾರೆ. ಕುಮಾರ್ ಛಾಯಾಗ್ರಹಣ, ಮೋಹನ್ ನೃತ್ಯ ನಿರ್ದೇಶನ, ಐಶ್ವರ್ಯ ರಂಗರಾಜನ್ ಗಾಯನ ಹಾಗೂ ಜಾಜಿ ಅವರು ಅಭಿನಯಿಸಿರುವ “ಜಾಜಿ’ ಮ್ಯೂಸಿಕ್ ಸಾಂಗ್ ಡಿ ಬಿಟ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.
ಹಾಡು ಬಿಡುಗಡೆ ಮಾಡಿ ಮಾತನಾಡಿದ ದರ್ಶನ್, “ಈ ಹಾಡು ಬಿಡುಗಡೆ ಮಾಡುವುದಕ್ಕೂ ಮುಂಚೆ ಕೆಲವು ವಿಷಯ ಹೇಳುತ್ತೇನೆ. ಸ್ನೇಹಿತರಾದ ಮೋಹನ್ ರಾಜು ಅವರು ಸಿಕ್ಕಾಗ ತಮ್ಮ ಮಗಳು ನೃತ್ಯ ಕಲಿಯುತ್ತಿರುವ ವಿಷಯದ ಬಗ್ಗೆ ಹೇಳಿದರು. ಮಗಳ ಹೆಸರು ಜಾಜಿ ಎಂದರು. ಈಗಿನ ಟ್ರೆಂಡ್ ನಲ್ಲಿ ಜಾಜಿ ಎನ್ನುವ ಹೆಸರು ಕೇಳಿ ಆಶ್ಚರ್ಯವಾಯಿತು. ಅವರ ಮಗನ ಹೆಸರು ಜಾಣ ಅಂತ ತಿಳಿದು ಇನ್ನೂ ಹೆಚ್ಚಿನ ಆಶ್ಚರ್ಯವಾಯಿತು. ಜಾಜಿ ಅವರ ನೃತ್ಯ ಎಷ್ಟು ಚೆನ್ನಾಗಿದೆ ಎಂದು ಈ ಜಾಜಿ ಹಾಡೇ ಹೇಳುತ್ತದೆ. ಡಿ ಬಿಟ್ಸ್ ಮೂಲಕ ಶೈಲಜಾ ನಾಗ್ ಹಾಗೂ ವಿ.ಹರಿಕೃಷ್ಣ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಮಗುವಿಗೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದರು.
“ನನ್ನ ಮಗಳು ಜಾಜಿ ದೊಡ್ಡ ಕಲಾವಿದೆಯಾಗಬೇಕೆಂಬುದು ನನ್ನ ತಂದೆ ರಂಗಭೂಮಿ ಕಲಾವಿದರಾದ ದಿ.ಬೋರೇಗೌಡರ ಕನಸ್ಸಾಗಿತ್ತು. ಆ ಕನಸು ಇಂದು ನನಸಾಗಿದೆ. ನನ್ನ ಮಗಳ ಮೊದಲ ಹಾಡು ಜಾಜಿ ಇಂದು ಬಿಡುಗಡೆಯಾಗಿದೆ. ದರ್ಶನ್ ಅವರು ಅವಳಿಗೆ ಪೋ›ತ್ಸಾಹ ನೀಡಿದ್ದು ನಿಜಕ್ಕೂ ಅವಳ ಪುಣ್ಯ ಎಂದರೆ ತಪ್ಪಾಗಲಾರದು. ಇನ್ನು ಮುಂದೆ ಅವಳ ಜವಾಬ್ದಾರಿ ಹೆಚ್ಚಿದೆ’ ಎಂದರು ಸುನೀತಾ ಮೋಹನ್ ರಾಜು. ತಂದೆ ಮೋಹನ್ ರಾಜು ಅವರು ಕೂಡ ಮಾತನಾಡಿದರು.
“ನಾನು ಮೊದಲ ಬಾರಿಗೆ ನೃತ್ಯ ಪ್ರದರ್ಶನ ನೀಡಿದ್ದು ನನಗೆ ಎರಡೂವರೆ ವರ್ಷ ಇದ್ದಾಗ. ಅದಕ್ಕೆ ಕಾರಣ ನನ್ನ ತಾತ. ಅವರ ಆಸೆಯಂತೆ ಇಂದು ಭರತನಾಟ್ಯ ಸೇರಿದಂತೆ ನಾಲ್ಕು ಪ್ರಕಾರದ ನೃತ್ಯಗಳನ್ನು ಕಲಿತಿದ್ದೀನಿ. ಈ ಹಾಡಿನಲ್ಲಿ ವಿಭಿನ್ನ ಶೈಲಿಯ ನೃತ್ಯವನ್ನು ಪ್ರದರ್ಶಿಸುವ ಪ್ರಯತ್ನ ಮಾಡಿದ್ದೇನೆ. ನನ್ನ ಮೊದಲ ಹಾಡನ್ನು ದರ್ಶನ್ ಸರ್ ಬಿಡುಗಡೆ ಮಾಡುತ್ತಾರೆ ಎಂದು ಕನಸಿನಲ್ಲೂ ನೆನಸಿರಲಿಲ್ಲ’ ಎನ್ನುವುದು ಜಾಜಿ ಮಾತು.