Advertisement

ನ್ಯಾ.ಪಾಟೀಲ್‌ರದ್ದು ಸಾರ್ಥಕ ಜೀವನ

12:48 AM Jan 13, 2020 | Lakshmi GovindaRaj |

ಬೆಂಗಳೂರು: ಪ್ರಾಮಾಣಿಕತೆ, ದಕ್ಷತೆ ಹಾಗೂ ಹೃದಯವಂತಿಕೆಯೊಂದಿಗೆ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್‌ ಅವರು ಸಾರ್ಥಕ ಜೀವನ ನಡೆಸುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ ಹೇಳಿದರು.

Advertisement

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್‌ ಅವರ 80ರ ಜನ್ಮದಿನದ ಅಂಗವಾಗಿ ಅವರ ಹಿತೈಷಿಗಳು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಅವರ ಜೀವನಾಧರಿತ “ಸಾರ್ಥಕ ಬದುಕು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್‌ ಅವರು ನ್ಯಾಯಾಂಗ ಕ್ಷೇತ್ರದಲ್ಲಿ ಉನ್ನತ ಸಾಧನೆ ಜತೆಗೆ ನಾಡಿನ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ. ಮಾನವತಾವಾದಿಯಾಗಿರುವ ಅವರು ಅನೇ ಕರಿಗೆ ಮಾರ್ಗದರ್ಶಕರಾಗಿದ್ದಾರೆ. ಪರರಿಗೆ ಮಿಡಿಯುವ ಹೃದಯವಂತಿಕೆ ಅವರಲ್ಲಿದ್ದು, ಒಟ್ಟಾರೆ ಸಾರ್ಥಕ ಜೀವನ ನಡೆಸುತ್ತಿದ್ದಾರೆ.

ಸಮಾಜ ಕಂಡ ಸಜ್ಜನ, ಅಪರೂಪದ ವ್ಯಕ್ತಿಯಾಗಿದ್ದು, ಇವರ ಬದುಕು ಎಲ್ಲರಿಗೂ ಮಾದರಿಯಾಗಲಿ ಎಂದು ತಿಳಿಸಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಯಾರ ಸಹಕಾರ ಮಾರ್ಗದರ್ಶನವಿರದ ದಿನಗಳಲ್ಲಿ ಶಿವರಾಜ್‌ ಪಾಟೀಲರು ಸಾಧನೆ ಮಾಡಿ ಎತ್ತರಕ್ಕೆ ಬೆಳೆದಿದ್ದಾರೆ. ಅವರದ್ದು ಸಾರ್ಥಕ ಬದುಕು ಎಂದರು.

ಚಿಂತಕ ಡಾ.ಗುರುರಾಜ್‌ ಕರ್ಜಗಿ ಮಾತನಾಡಿ, ಘನ ತತ್ವ ಇಟ್ಟುಕೊಂಡವರು ಮಾತ್ರ ಬಹಳ ಎತ್ತರಕ್ಕೆ ಬೆಳೆಯಲು ಸಾಧ್ಯ. ತೆರೆಮರೆಯಲ್ಲಿ ಬೇರೆಯವರು ಮಾಡಿದ ಸಹಾಯವನ್ನು ನೆನಪಿಸಿಕೊಳ್ಳುವಂಥದ್ದು ದೊಡ್ಡತನ. ಅಂತಹ ದೊಡ್ಡತನ ಶಿವರಾಜ್‌ ಪಾಟೀಲರಿಗಿದೆ. ಸಾಧನೆ ಮಾಡಲು ಬಡತನ ಹಾಗೂ ಗ್ರಾಮೀಣ ಪ್ರದೇಶ ಅಡ್ಡಿಯಲ್ಲ. ಶಿವರಾಜ್‌ ಪಾಟೀಲರು ಗ್ರಾಮೀಣ ಪ್ರದೇಶದವರಾದರೂ ಸಾಧನೆಯ ಶಿಖರವೆರಿದ್ದಾರೆ ಎಂದರೆ ತಪ್ಪಾಗುವುದಿಲ್ಲ ಎಂದು ಹೇಳಿದರು.

Advertisement

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಿವರಾಜ ಪಾಟೀಲ್‌, ನನ್ನ ಮುಂದಿನ ಜೀವನದ ಎಲ್ಲ ಸಮಯವನ್ನು ಸಮಾಜಕ್ಕಾಗಿ ಮೀಸಲಿಡುತ್ತೇನೆ ಎಂದರು. ಕೇಂದ್ರದ ಮಾಜಿ ಸಚಿವ ಶಿವರಾಜ್‌ ಪಾಟೀಲ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next