Advertisement

ನಾಳೆ ಸಕಲ ಸಿದ್ಧತೆಯೊಂದಿಗೆ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆ: ಜೆ ಮಂಜುನಾಥ್

07:54 PM Dec 13, 2021 | Team Udayavani |

ಬೆಂಗಳೂರು : ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ, ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಯ ಮತ ಎಣಿಕಾ ಕಾರ್ಯವು ನಾಳೆ ಅಂದರೆ ಡಿ.14 ರಂದು ನಗರದ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಸಕಲ ಸಿದ್ಧತೆಯೊಂದಿಗೆ ನಡೆಯಲಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಜೆ. ಮಂಜುನಾಥ್ ತಿಳಿಸಿದರು.

Advertisement

ಈಗಾಗಲೇ ಮತಗಟ್ಟೆಗಳಿಂದ ತಂದಿರುವ ಮತಪೆಟ್ಟಿಗೆಗಳನ್ನು ಮತ ಎಣಿಕಾ ಕೇಂದ್ರದ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ನಾಳೆ ಬೆಳಿಗ್ಗೆ ಸುಮಾರು 7-30 ಕ್ಕೆ ಅಭ್ಯರ್ಥಿಗಳ ಹಾಗೂ ಚುನಾವಣಾ ವೀಕ್ಷಕರ ಸಮಕ್ಷಮದಲ್ಲಿ ಭದ್ರತಾ ಕೊಠಡಿಯನ್ನು ತೆರೆಯಲಾಗುವುದು. ಮತ ಎಣಿಕಾ ಕೊಠಡಿಯಲ್ಲಿ ಒಟ್ಟು ಏಳು ಟೇಬಲ್ ಗಳನ್ನು ಜೋಡಿಸಲಾಗಿದ್ದು. ಪ್ರತಿ ಟೇಬಲ್ ಗೆ ಇಬ್ಬರು ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಿದ್ದ, ಅಭ್ಯರ್ಥಿ ಪರವಾಗಿ ಒಬ್ಬ ಏಜೆಂಟ್ ಗೆ ಅವಕಾಶ ಕಲ್ಪಿಸಲಾಗಿರುತ್ತದೆ, ಎಂದು ಅವರು ತಿಳಿಸಿದರು.

ಮತಪೆಟ್ಟಿಗೆಯಿಂದ ಎಲ್ಲಾ ಮತಪತ್ರಗಳನ್ನು ಹೊರತೆಗೆದು ವೀಕ್ಷಕರ ಹಾಗೂ ಏಜೆಂಟರ ಮುಂದೆಯೆ 25 ಕಟ್ಟುಗಳಂತೆ ಬಂಡಲ್ ಮಾಡಿ ಒಂದು ದೊಡ್ಡ ದ್ರಮ್ ಒಳಗೆ ಹಾಕಿ ಕಲಸಲಾಗುತ್ತದೆ.

ಚುನಾವಣಾ ಕಣದಲ್ಲಿ ಸ್ಪರ್ಧಿಸಿದ್ದ ನಾಲ್ಕು ಅಭ್ಯರ್ಥಿಗಳಿಗೆ ಸೇರಿ ಒಟ್ಟು 2070 ಮತ ಚಲಾವಣೆಯಾಗಿದ್ದು, ಪ್ರತಿ ಟೇಬಲ್ ಗೆ ತಲಾ 300 ಮತಪತ್ರಗಳನ್ನು ಎಣಿಕೆಗೆ ಹಂಚಿಕೆ ಮಾಡಲಾಗುವುದು ಎಂದ ಜಿಲ್ಲಾಧಿಕಾರಿಗಳು ನಂತರ ಸಿಂಧು ಮತ್ತು ಅಸಿಂಧು ಮತಪತ್ರಗಳನ್ನು ಬೇರ್ಪಡಿಸಿ, ಸಿಂಧುವಾದ ಮತಪತ್ರಗಳನ್ನು ಮೊದಲ ಆದ್ಯತೆಗಾಗಿ ಎಣಿಕೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ : BBMP ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ ಸೇರಿ 40ಕ್ಕೂ ಅಧಿಕ‌ ಜನರಿಂದ ನೇತ್ರದಾನಕ್ಕೆ ವಾಗ್ದಾನ

Advertisement

ಮೊದಲ ಸುತ್ತಿನ ನಂತರ ಅತಿ ಹೆಚ್ಚು ಮತಗಳನ್ನು ಪಡೆದಿರುವ ಅಭ್ಯರ್ಥಿಯು ಕನಿಷ್ಠ 1036 ಮತಗಳನ್ನು ಪಡೆಯದೇ ಇದ್ದ ಪಕ್ಷದಲ್ಲಿ ಎರಡನೇ ಸುತ್ತಿನ ಎಣಿಕೆಗೆ ಅತ್ಯಂತ ಕನಿಷ್ಠ ಮತಗಳನ್ನು ಪಡೆದ ಅಭ್ಯರ್ಥಿಯ ಮತಗಳನ್ನು ತೆಗೆದು ಎರಡನೇ ಆದ್ಯತೆಗಾಗಿ ಇತರೆ ಅಭ್ಯರ್ಥಿಗಳ ಟ್ರೇಗೆ ಹಂಚಲಾಗುವುದು ಎಂದು ಅವರು ತಿಳಿಸಿದರು. ಹೀಗೆ ಗರಿಷ್ಠ ಮತಸಂಖ್ಯೆ ಓರ್ವ ಅಭ್ಯರ್ಥಿಗೆ ಎಣಿಕೆಯಾಗುವವರೆಗೂ ಮತ ಎಣಿಕೆ ನಡೆಸಲಾಗುವುದು ಎಂದವರು ತಿಳಿಸಿದರು.

ಮತ ಎಣಿಕೆಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ನಿಗದಿತ ಗುರುತಿನ ಚೀಟಿ ವಿತರಿಲಾಗಿದ್ದು, ಕೋವಿಡ್ ನಿಯಮದ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಮತ ಎಣಿಕಾ ಕಾರ್ಯ ನಡೆಯಲಿದೆ ಎಂದು ಅವರು ತಿಳಿಸಿದರು.

ಮಾಧ್ಯಮದವರ ಗಮನಕ್ಕೆ:

ಮತ ಎಣಿಕಾ ಕಾರ್ಯದ ವರದಿಗಾಗಿ ಬರುವ ಮಾಧ್ಯಮಗಳ ಓಬಿ ವ್ಯಾನ್ ವಾಹನ ನಿಲುಗಡೆಗೆ ಕಾಲೇಜಿನ ನೆರೆಯಲ್ಲಿರುವ ಸ್ಕೌಟ್ಸ್ ಅಂಡ್ ಗೈಡ್ಸ್ ಕಚೇರಿ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ವೈಯಕ್ತಿಕ ವಾಹನ ನಿಲುಗಡೆಗೆ ಫ್ರೀಡಂ ಪಾರ್ಕ್ ಆವರಣದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದವರು ತಿಳಿಸಿದರು.

ಮತ ಎಣಿಕಾ ಕೇಂದ್ರದಲ್ಲಿ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಚುನಾವಣಾ ಆಯೋಗದಿಂದ ನೀಡಲಾಗಿರುವ ಪ್ರವೇಶ ಪತ್ರವನ್ನು ಹಾಗೂ ತಮ್ಮ ಮಾಧ್ಯಮ ಸಂಸ್ಥೆಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರುವಂತೆ ಹಾಗೂ ಬೆಳಿಗ್ಗೆ 7.00 ಗಂಟೆಯೊಳಗಾಗಿ ಮಾಧ್ಯಮ ಕೇಂದ್ರಕ್ಕೆ ಆಗಮಿಸುವಂತೆ
ಜಿಲ್ಲಾಧಿಕಾರಿಗಳು ಕೋರಿದ್ದಾರೆ.

ಕೋವಿಡ್ ಹಿನ್ನೆಲೆ ಎಲ್ಲರೂ ಎಲ್ಲ ಸಮಯದಲ್ಲೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next