ಪುತ್ತೂರು: ಜನವರಿ 20ರವರೆಗೆ ಕಂಬಳಕ್ಕೆ ಸುಗ್ರೀವಾಜ್ಞೆ ಇರುವ ಹಿನ್ನೆಲೆಯಲ್ಲಿ ಜ. 21ರಂದು ಷರತ್ತಿನ ಪ್ರಕಾರ ಪುತ್ತೂರು ಕೋಟಿ- ಚೆನ್ನಯ ಜೋಡುಕರೆ ಕಂಬಳ ನಡೆಸಲು ತೀರ್ಮಾನಿಸಲಾಗಿದೆ.
ಕೋಟಿ- ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅಧ್ಯಕ್ಷತೆಯಲ್ಲಿ ಮಂಗಳವಾರ ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಬೆಳ್ಳಿಹಬ್ಬದ ಪ್ರಯುಕ್ತ ಈ ಬಾರಿ ಕಂಬಳವನ್ನು ವಿಶೇಷವಾಗಿ ನಡೆಸಲು ನಿರ್ಧರಿಸಲಾಯಿತು. ಕಂಬಳ ಕ್ರೀಡೆ ನಡೆಸಲು ಎಲ್ಲ ಅಡೆತಡೆ ನಿವಾರಣೆ ಆಗಿದೆ. ಹಾಗಿದ್ದೂ ಜ. 20ರವರೆಗೆ ಸುಗ್ರೀವಾಜ್ಞೆ ಜಾರಿಯಲ್ಲಿದೆ. ಇದಲ್ಲದೆ, ಪೆಟಾ ಸಂಘಟನೆ ಕಂಬಳದ ಹಿಂದೆ ಬಿದ್ದಿದ್ದು, ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಜಿಲ್ಲೆಯಲ್ಲಿ ನವೆಂಬರ್‌ನಿಂದಲೇ ಕಂಬಳ ಆರಂಭವಾಗಲಿದೆ. ಆದರೆ ಪುತ್ತೂರಿನಲ್ಲಿ ಸುಗ್ರೀವಾಜ್ಞೆ ಮುಗಿದ ನಂತರವೇ ಕಂಬಳ ನಡೆಯಲಿದೆ. ಜನವರಿ 21ರಂದು ನಡೆಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಯಿತು. ಪುತ್ತೂರಿನಲ್ಲಿ ನಡೆಸುವ ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಕಳೆದ 25 ವರ್ಷಗಳಿಂದ ಕಂಬಳ ಕ್ರೀಡೆಯಲ್ಲಿ ಬಹುಮಾನ ಪಡೆದವರ ವಿವರ, ಕಂಬಳ ಕ್ರೀಡಾಸಕ್ತರ ಅಭಿಪ್ರಾಯ ಸಹಿತ ಇತರ ವಿವರಗಳನ್ನು ಒಳಗೊಂಡ ಸ್ಮರಣ ಸಂಚಿಕೆಯನ್ನು ಹೊರತರಲು ನಿರ್ಧರಿಸಲಾಯಿತು. ಬೆಳ್ಳಿಹಬ್ಬದ ಅಂಗವಾಗಿ ಕಂಬಳ ಸಮಿತಿಯಲ್ಲಿ 25 ವರ್ಷಗಳಿಂದ ತನ್ನನ್ನು ತೊಡಗಿಸಿಕೊಂಡವರಿಗೆ ನೆನಪಿನ ಕಾಣಿಕೆ ನೀಡುವಂತೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕಂಬಳ ಸಮಿತಿ ಸಂಚಾಲಕ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ, ಕಾರ್ಯದರ್ಶಿ ದಿನೇಶ್ ಪಿ.ವಿ., ಕೋಶಾಧಿಕಾರಿ ಪ್ರಸನ್ನ ಶೆಟ್ಟಿ ಸಿಜ್ಲರ್, ಸದಸ್ಯರಾದ ಕರುಣಾಕರ ರೈ ದೇರ್ಲ, ಲೂಯಿಸ್ ಡಯಾಸ್ ಸಲಹೆ ಸೂಚನೆ ನೀಡಿದರು. ಸಮಿತಿಯ ಸುಂದರೇಶ್ ಅತ್ತಾಜೆ, ಎಲಿಕ ಜಯರಾಜ್, ಜಿನ್ನಪ್ಪ ಪೂಜಾರಿ, ಪ್ರಭಾಕರ ಶೆಟ್ಟಿ, ಹಸೈನಾರ್, ಉಮೇಶ್ ಕರ್ಕೆರಾ, ಶಶಿ ನೆಲ್ಲಿಕಟ್ಟೆ, ಕೃಷ್ಣಪ್ರಸಾದ್ ಆಳ್ವ, ಸುದೇಶ್ ಕುಮಾರ್, ಜತಿನ್ ನಾಯ್ಕ, ನವೀನ್ ಕುಮಾರ್, ಪ್ರಶಾಂತ್ ಮುರ, ಸುಧೀರ್ ಶೆಟ್ಟಿ, ಶಿವರಾಮ ಆಳ್ವ, ನಾರಾಯಣ ನಾಯ್ಕ ರೆಂಜಾಳ, ಈಶ್ವರ ಭಟ್, ನೇಮಾಕ್ಷ ಸುವರ್ಣ ಉಪಸ್ಥಿತರಿದ್ದರು.
ಅಕ್ಕಿ ಮುಡಿ
ಪ್ರತಿ ವರ್ಷ ಕಂಬಳದಲ್ಲಿ ಗೆದ್ದ ಕೋಣಗಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನವಾಗಿ ಪವನ್ ಚಿನ್ನ ನೀಡಲಾಗುತ್ತಿದೆ.
ಈ ಬಾರಿ ಚಿನ್ನದ ಪದಕ ಜತೆಗೆ ಅಕ್ಕಿ ಮುಡಿ ನೀಡಿದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇದು ಸಾಂಪ್ರದಾಯಿಕವಾಗಿ ಕಾಣಿಸುತ್ತದೆ. ಅಲ್ಲದೆ ನಶಿಸುತ್ತಿರುವ ಗದ್ದೆಗಳ ಕಡೆಗೆ ಮತ್ತೂಮ್ಮೆ ನೋಟ ಹರಿಸಲು ಪೂರಕವಾಗಿರುತ್ತದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.