Advertisement

ಲಂಕೆಗೂ ವೈಟ್‌ವಾಶ್‌ ಮಾಡಿದ ಟೀಮ್‌ ಇಂಡಿಯಾ

11:38 PM Feb 27, 2022 | Team Udayavani |

ಧರ್ಮಶಾಲಾ: ಮತ್ತೊಂದು ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತ 3ನೇ ಟಿ20 ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದು ಶ್ರೀಲಂಕಾಕ್ಕೆ ವೈಟ್‌ವಾಶ್‌ ಮಾಡಿದೆ. ಇದಕ್ಕೂ ಮೊದಲು ಪ್ರವಾಸಿ ವೆಸ್ಟ್‌ ಇಂಡೀಸಿಗೂ ಏಕದಿನ ಹಾಗೂ ಟಿ20ಯಲ್ಲಿ ಟೀಮ್‌ ಇಂಡಿಯಾ 3-0 ಸೋಲುಣಿಸಿ ಮೆರೆದಿತ್ತು.

Advertisement

ರವಿವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 5 ವಿಕೆಟಿಗೆ 146 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿದರೆ, ಭಾರತ 16.5 ಓವರ್‌ಗಳಲ್ಲಿ 4 ವಿಕೆಟಿಗೆ 148 ರನ್‌ ಬಾರಿಸಿತು. ಈ ಜಯದೊಂದಿಗೆ ಭಾರತ ಸತತವಾಗಿ ಅತೀ ಹೆಚ್ಚು 12 ಟಿ20 ಪಂದ್ಯ ಗಳನ್ನು ಗೆದ್ದ ಅಫ್ಘಾನಿಸ್ಥಾನದ ದಾಖಲೆಯನ್ನು ಸರಿದೂಗಿಸಿತು.

ಅಯ್ಯರ್‌ ಹ್ಯಾಟ್ರಿಕ್‌ ಫಿಫ್ಟಿ
ವನ್‌ಡೌನ್‌ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಅವರ ಹ್ಯಾಟ್ರಿಕ್‌ ಅರ್ಧ ಶತಕ ಭಾರತದ ಸರದಿಯ ಆಕರ್ಷಣೆ ಆಗಿತ್ತು. ರೋಹಿತ್‌ ಶರ್ಮ ವಿಕೆಟ್‌ ದ್ವಿತೀಯ ಓವರ್‌ನಲ್ಲೇ ಉರುಳಿದ ಬಳಿಕ ಕ್ರೀಸಿಗೆ ಆಗಮಿಸಿದ ಅಯ್ಯರ್‌ 45 ಎಸೆತಗಳಿಂದ 73 ರನ್‌ ಬಾರಿಸಿ ಅಜೇಯರಾಗಿ ಉಳಿದರು. 9 ಬೌಂಡರಿ ಜತೆಗೆ ಒಂದು ಸಿಕ್ಸರ್‌ ಸಿಡಿಸಿ ಲಂಕಾ ಬೌಲರ್‌ಗಳಿಗೆ ಬೆವರಿಳಿಸಿದರು. ದೀಪಕ್‌ ಹೂಡಾ 21 ಹಾಗೂ ರವೀಂದ್ರ ಜಡೇಜ ಔಟಾಗದೆ 22 ರನ್‌ ಮಾಡಿದರು. ಅಯ್ಯರ್‌ ಮೂರೂ ಪಂದ್ಯಗಳಲ್ಲಿ ಔಟಾಗದೆ ಉಳಿದರು. ಲಕ್ನೋ ಮುಖಾಮುಖಿಯಲ್ಲಿ ಅಜೇಯ 57 ಹಾಗೂ ಶನಿವಾರದ ದ್ವಿತೀಯ ಪಂದ್ಯದಲ್ಲಿ ಅಜೇಯ 74 ರನ್‌ ಬಾರಿಸಿದ್ದರು.

ಆರಂಭಿಕ ಚಡಪಡಿಕೆ
ಬ್ಯಾಟಿಂಗ್‌ ಆಯ್ದುಕೊಂಡ ಶ್ರೀಲಂಕಾ ನಿರ್ಧಾರಕ್ಕೆ ಭಾರತದ ಬೌಲರ್ ಮರ್ಮಾ ಘಾತವಿಕ್ಕಿದರು. ಪ್ರಧಾನ ಬೌಲರ್‌ಗಳಾದ ಬುಮ್ರಾ, ಭುವಿ, ಚಹಲ್‌ ಕೊರತೆ ಕಾಡಲೇ ಇಲ್ಲ. ಆದರೆ ಕೊನೆಯಲ್ಲಿ ನಾಯಕ ದಸುನ್‌ ಶಣಕ ಸ್ಫೋಟಕ ಬ್ಯಾಟಿಂಗ್‌ ಮೂಲಕ ಲಂಕಾ ಸರದಿಯ ಚಿತ್ರಣವನ್ನೇ ಬದಲಿಸಿದರು.

ಸಿರಾಜ್‌ ಮೊದಲ ಓವರ್‌ನಲ್ಲೇ ಗುಣತಿಲಕ ವಿಕೆಟ್‌ ಕಿತ್ತರು. ಆವೇಶ್‌ ಖಾನ್‌ ಕೂಡ ಹಿಂದುಳಿಯಲಿಲ್ಲ. ತಮ್ಮ ಮೊದಲ ಓವರ್‌ನಲ್ಲೇ ಕಳೆದ ಪಂದ್ಯದ ಹೀರೋ ನಿಸ್ಸಂಕ ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು. ಮತ್ತಷ್ಟು ಆವೇಶ ತೋರಿದ ಆವೇಶ್‌, ತಮ್ಮ ದ್ವಿತೀಯ ಓವರ್‌ನಲ್ಲಿ ಚರಿತ ಅಸಲಂಕ ಅವರನ್ನು ಕೀಪರ್‌ ಸ್ಯಾಮ್ಸನ್‌ ಕೈಗೆ ಕ್ಯಾಚ್‌ ಕೊಡಿಸಿದರು. ಪವರ್‌ ಪ್ಲೇ ವೇಳೆ ಲಂಕಾ 3 ವಿಕೆಟಿಗೆ ಕೇವಲ 18 ರನ್‌ ಗಳಿಸಿ ಕುಂಟುತ್ತಿತ್ತು. ಈ ಅವಧಿಯಲ್ಲಿ ದಾಖಲಾದದ್ದು ಒಂದೇ ಬೌಂಡರಿ!

Advertisement

ರವಿ ಬಿಷ್ಣೋಯಿ ಕೂಡ ಮೊದಲ ಓವರ್‌ನಲ್ಲೇ ವಿಕೆಟ್‌ ಬೇಟೆಯಾಡಿದರು. ಜನಿತ್‌ ಲಿಯನಗೆ ಬೌಲ್ಡ್‌ ಆಗಿ ನಿರ್ಗಮಿಸಿದರು. ಅರ್ಧ ಹಾದಿ ಕ್ರಮಿಸುವಾಗ ಲಂಕಾ 43ಕ್ಕೆ 4 ವಿಕೆಟ್‌ ಕಳೆದುಕೊಂಡು ಕುಂಟುತ್ತಿತ್ತು.

5ನೇ ವಿಕೆಟಿಗೆ ಜತೆಗೂಡಿದ ದಿನೇಶ್‌ ಚಂಡಿಮಾಲ್‌ ಮತ್ತು ನಾಯಕ ದಸುನ್‌ ಶಣಕ ಒಂದಿಷ್ಟು ಪ್ರತಿರೋಧ ಒಡ್ಡಿದರು. ಚಂಡಿಮಾಲ್‌ 25 ರನ್ನಿಗೆ ನಿರ್ಗಮಿಸಿದರೂ ಶಣಕ ಕೊನೆಯ ಹಂತದಲ್ಲಿ ಮುನ್ನುಗ್ಗಿ ಬಾರಿಸಲಾರಂಭಿಸಿದರು. 15 ಓವರ್‌ ಅಂತ್ಯಕ್ಕೆ 5 ವಿಕೆಟ್‌ ನಷ್ಟಕ್ಕೆ 78 ರನ್‌ ಮಾಡಿದ್ದ ಶ್ರೀಲಂಕಾ, ಶಣಕ ಸಾಹಸದಿಂದ ಡೆತ್‌ ಓವರ್‌ಗಳಲ್ಲಿ ಯಾವುದೇ ವಿಕೆಟ್‌ ಕಳದುಕೊಳ್ಳದೆ 68 ರನ್‌ ಪೇರಿಸುವಲ್ಲಿ ಯಶಸ್ವಿಯಾಯಿತು.

ಸಿಡಿದು ನಿಂತ ಶಣಕ
ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳೆಲ್ಲ ಕೈಕೊಟ್ಟಾಗ ದಿಟ್ಟ ಹೋರಾಟ ನಡೆಸಿದ ಶಣಕ ಬಹುಮೂಲ್ಯ ಅರ್ಧ ಶತಕದೊಂದಿಗೆ ಮಿಂಚಿದರು. 5 ವಿಕೆಟ್‌ ಕೈಲಿದ್ದುದರಿಂದ ಶಣಕ ಪ್ರತಿಯೊಂದು ಎಸೆತಕ್ಕೂ ಬಿಸಿ ಮುಟ್ಟಿಸತೊಡಗಿದರು. ರನ್‌ ಸರಾಗವಾಗಿ ಹರಿದು ಬರತೊಡಗಿತು. ಅವರಿಗೆ ಚಮಿಕ ಕರುಣಾರತ್ನೆ ಉತ್ತಮ ಬೆಂಬಲ ನೀಡಿದರು. ಈ ಜೋಡಿಯನ್ನು ಬೇರ್ಪಡಿಸಲು ಭಾರತಕ್ಕೆ ಸಾಧ್ಯವಾಗಲೇ ಇಲ್ಲ. ಇವರಿಂದ 6ನೇ ವಿಕೆಟಿಗೆ 47 ಎಸೆತಗಳಿಂದ 86 ರನ್‌ ಹರಿದು ಬಂತು.

ಶಣಕ 38 ಎಸೆತ ಎದುರಿಸಿ ಅಜೇಯ 74 ರನ್‌ ಬಾರಿಸಿದರು. 9 ಬೌಂಡರಿ, 2 ಸಿಕ್ಸರ್‌ ಸಿಡಿಸಿ ಗೌರವಯುತ ಮೊತ್ತವೊಂದನ್ನು ದಾಖಲಿಸುವಲ್ಲಿ ಯಶಸ್ವಿಯಾದರು. ಲಂಕಾ ಕೊನೆಯ 10 ಓವರ್‌ಗಳಲ್ಲಿ 103 ರನ್‌ ಬಾರಿಸಿತು.

ಭಾರತ ತಂಡದಲ್ಲಿ
4 ಬದಲಾವಣೆ
ಈ ಪಂದ್ಯಕ್ಕಾಗಿ ಭಾರತ 4 ಬದಲಾವಣೆ ಮಾಡಿಕೊಂಡಿತು. ಶನಿವಾರದ ಪಂದ್ಯದ ವೇಳೆ ಲಹಿರು ಕುಮಾರ ಅವರ ಎಸೆತವೊಂದು ತಲೆಗೆ ಬಡಿದುದರಿಂದ ಇಶಾನ್‌ ಕಿಶನ್‌ ಮೊದಲೇ ತಂಡದಿಂದ ಬೇರ್ಪಟ್ಟಿದ್ದರು. ಬುಮ್ರಾ, ಭುವನೇಶ್ವರ್‌ ಮತ್ತು ಚಹಲ್‌ಗೆ ವಿಶ್ರಾಂತಿ ನೀಡಲಾಯಿತು. ಇವರ ಸ್ಥಾನಕ್ಕೆ ರವಿ ಬಿಷ್ಣೋಯಿ, ಕುಲದೀಪ್‌ ಯಾದವ್‌, ಆವೇಶ್‌ ಖಾನ್‌ ಮತ್ತು ಮೊಹಮ್ಮದ್‌ ಸಿರಾಜ್‌ ಬಂದರು. ಲಂಕಾ ತಂಡದಲ್ಲಿ 2 ಬದಲಾವಣೆ ಸಂಭವಿಸಿತು. ಪ್ರವೀಣ್‌ ಜಯವಿಕ್ರಮ ಮತ್ತು ಕಮಿಲ್‌ ಮಿಶಾರ ಬದಲು ಜನಿತ್‌ ಲಿಯನಗೆ ಹಾಗೂ ಜೆಫ್ರಿ ವಾಂಡರ್ಸೆ ಅವರಿಗೆ ಅವಕಾಶ ಲಭಿಸಿತು.

ಸ್ಕೋರ್‌ ಪಟ್ಟಿ
ಶ್ರೀಲಂಕಾ
ಪಥುಮ್‌ ನಿಸ್ಸಂಕ ಸಿ ವೆಂಕಟೇಶ್‌ ಬಿ ಅವೇಶ್‌ 1
ದನುಷ್ಕ ಗುಣತಿಲಕ ಬಿ ಸಿರಾಜ್‌ 0
ಚರಿತ ಅಸಲಂಕ ಸಿ ಸಂಜು ಬಿ ಅವೇಶ್‌ 4
ಜನಿತ್‌ ಲಿಯನಗೆ ಬಿ ಬಿಷ್ಣೋಯಿ 9
ಚಂಡಿಮಾಲ್‌ ಬಿ ವೆಂಕಟೇಶ್‌ ಸಿ ಹರ್ಷಲ್‌ 22
ದಸುನ್‌ ಶಣಕ ಔಟಾಗದೆ 74
ಚಮಿಕ ಕರುಣಾರತ್ನೆ ಔಟಾಗದೆ 12
ಇತರ 21
ಒಟ್ಟು (5 ವಿಕೆಟಿಗೆ) 146
ವಿಕೆಟ್‌ ಪತನ:1-1, 2-5, 3-11, 4-29, 5-60.
ಬೌಲಿಂಗ್‌;
ಮೊಹಮ್ಮದ್‌ ಸಿರಾಜ್‌ 4-0-22-1
ಅವೇಶ್‌ ಖಾನ್‌ 4-1-23-2
ಹರ್ಷಲ್‌ ಪಟೇಲ್‌ 4-0-29-1
ಕುಲದೀಪ್‌ ಯಾದವ್‌ 4-0-25-0
ರವಿ ಬಿಷ್ಣೋಯಿ 4-0-32-1

ಭಾರತ
ಸಂಜು ಸ್ಯಾಮ್ಸನ್‌ ಸಿ ಚಂಡಿಮಾಲ್‌ ಬಿ ಕರುಣಾರತ್ನೆ 18
ರೋಹಿತ್‌ ಶರ್ಮ ಸಿ ಕರುಣಾರತ್ನೆ ಬಿ ಚಮೀರ 5
ಶ್ರೇಯಸ್‌ ಅಯ್ಯರ್‌ ಔಟಾಗದೆ 73
ದೀಪಕ್‌ ಹೂಡಾ ಬಿ ಲಹಿರು 21
ವೆಂಕಟೇಶ್‌ ಅಯ್ಯರ್‌ ಸಿ ಜಯವಿಕ್ರಮ ಬಿ ಲಹಿರು 5
ರವೀಂದ್ರ ಜಡೇಜ ಔಟಾಗದೆ 22
ಇತರ 4
ಒಟ್ಟು (16.5 ಓವರ್‌ಗಳಲ್ಲಿ 4 ವಿಕೆಟಿಗೆ) 148
ವಿಕೆಟ್‌ ಪತನ:1-6, 2-51, 3-89, 4-103.
ಬೌಲಿಂಗ್‌; ಬಿನುರ ಫೆರ್ನಾಂಡೊ 4-0-35-0
ದುಶ್ಮಂತ ಚಮೀರ 3-0-19-1
ಲಹಿರು ಕುಮಾರ 3.5-0-39-2
ಚಮಿಕ ಕರುಣಾರತ್ನೆ 3.4-0-31-1
ಜೆಫ್ರಿ ವಾಂಡರ್ಸೆ 2.2-0-24-0

Advertisement

Udayavani is now on Telegram. Click here to join our channel and stay updated with the latest news.

Next