Advertisement

ಐಯ್ಯಂಗಾರ್‌ ತಟ್ಟೆ ಇಡ್ಲಿ

09:18 AM Mar 01, 2020 | Lakshmi GovindaRaj |

ಹೋಟೆಲ್‌ನ ಕಮರ್ಷಿಯಲ್‌ ರೂಲ್ಸ್‌ಗಳನ್ನೆಲ್ಲಾ ತೆಗೆದು ಹಾಕಿ, ಅಪ್ಪಟ ಮನೆಯ ರೀತಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುವುದು, “ಐಯ್ಯಂಗಾರ್‌ ತಟ್ಟೆ ಇಡ್ಲಿ’ಯ ವಿಶೇಷತೆ…

Advertisement

ಮನೆಯಲ್ಲಿ ತಿಂಡಿ ಮಾಡೋಕ್ಕೆ ಯಾಕೋ ಬೇಸರ. ಹಾಗಂತ ಹೊರಗೆ ಹೋಟೆಲ್‌ನಲ್ಲಿ ಏನಾದ್ರೂ ತಿನ್ನೋಣ ಎಂದರೆ, ಸ್ವಲ್ಪ ತಿನ್ನುವಷ್ಟರಲ್ಲಿ ಹೊಟ್ಟೆ ತುಂಬಿದಂತಾಗಿ, ದಿನಾ ಪೂರ್ತಿ ಹುಳಿ ತೇಗು. ಆದರೆ, ನಿಮ್ಮ ರುಚಿ- ಶುಚಿ ಸಮಸ್ಯೆಗಳಿಗೆ ಪರಿಹಾರ, ಬಿಇಎಲ್‌ ಲೇಔಟ್, ವಿದ್ಯಾರಣ್ಯಪುರ ಮುಖ್ಯರಸ್ತೆಯಲ್ಲಿರುವ ಐಯ್ಯಂಗಾರ್‌ ತಟ್ಟೆ ಇಡ್ಲಿ ಹೋಟೆಲ್‌! ಹೌದು! ಇಲ್ಲಿ ಅಡುಗೆಗೆ ಯಾವುದೇ ರೀತಿಯ ಆರ್ಟಿಫಿಷಿಯಲ್‌ ಬಣ್ಣ, ಸೋಡಾ ಇಲ್ಲದೆ ಮಲ್ಲಿಗೆ ಹೂವಿನಂಥ ಮೃದುವಾದ ತಟ್ಟೆ ಇಡ್ಲಿ ಮಾಡ್ತಾರೆ.

“ನೀವು ಕಣ್ಮುಚ್ಚಿ ಎರಡು ಇಡ್ಲಿಯನ್ನು ಆರಾಮಾಗಿ ತಿನ್ನಬಹುದು’ ಎನ್ನುತ್ತಾರೆ ಹೋಟೆಲ್‌ ಮಾಲೀಕರು. ಕಳೆದ ಮೂವತ್ತು ವರ್ಷಗಳಿಂದ ಹೋಟೆಲ್‌ ಉದ್ಯಮದಲ್ಲಿಯೇ ಪಳಗಿರುವ ಇವರು, ಹೋಟೆಲ್‌ನ ಕಮರ್ಷಿಯಲ್‌ ರೂಲ್ಸ್‌ಗಳನ್ನೆಲ್ಲಾ ತೆಗೆದು ಹಾಕಿ, ಅಪ್ಪಟ ಮನೆಯ ರೀತಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರು ಮಾಡ್ತಾರೆ. ಪುಳಿಯೊಗರೆಗೆ ಗೊಜ್ಜು, ಸಾಂಬರ್‌ಗೆ ಬೇಕಾಗುವ ಪುಡಿ, ಎಲ್ಲವನ್ನೂ ಖುದ್ದು ತಾವೇ ತಯಾರಿಸುವುದು ಮತ್ತೂಂದು ವಿಶೇಷ. ಒಮ್ಮೆ ಕರಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸೋಲ್ಲವಂತೆ.

ಏನುಂಟು ಏನಿಲ್ಲ?‌: ಚಿಕ್ಕ ದರ್ಶಿನಿಗಳಲ್ಲಿ ಕುಡಿಯುವ ನೀರಿನದ್ದೇ ಸಮಸ್ಯೆ ಇರುತ್ತದೆ. ಆದರೆ, ಇಲ್ಲಿ ಫಿಲ್ಟರ್‌ ಕುಡಿಯುವ ನೀರಿನ ವ್ಯವಸ್ಥೆ ಇದೆ. ಪರಿಸರ ಸ್ನೇಹಿಯಾದ ಅಡಕೆ ಪಟ್ಟೆಯ ತಟ್ಟೆಗಳನ್ನು ಉಪಯೋಗಿಸುವುದು ನನಗಿಷ್ಟವಾದ ಮತ್ತೂಂದು ಅಂಶ. ತಟ್ಟೆ ಇಡ್ಲಿ ಜೊತೆ ಒತ್ತು ಶ್ಯಾವಿಗೆ ಬಾತ್‌, ನಿಂಬೆ ಹಣ್ಣಿನ ಚಿತ್ರಾನ್ನ, ಪುಳಿಯೊಗರೆ- ಬೆಳಗ್ಗಿನ ಮತ್ತೂಂದಿಷ್ಟು ಆಕರ್ಷಣೆಗಳು. ಮಧ್ಯಾಹ್ನ ಮುದ್ದೆ, ಚಪಾತಿ, ಪಲ್ಯ ಮತ್ತು ರೈಸ್‌. ಸಂಜೆ ಇಡ್ಲಿಯ ಜೊತೆ ಟೊಮೇಟೊ ರೈಸ್‌. ಇನ್ನು ನಿಮ್ಮ ನಾಲಿಗೆ ರುಚಿಗೆ ಬೋಂಡ, ಬನ್‌ ಬಿಸಿ ಬಿಸಿಯಾಗಿ ಕಾದು ಕೂತಿರುತ್ತವೆ. ಎಲ್ಲವೂ ನಿಮ್ಮ ಕೈಗೆಟುಕುವ ಬೆಲೆಯಲ್ಲಿ.

ಹಬ್ಬಕ್ಕೆ ಭರ್ಜರಿ ಅಡುಗೆ: ಇಲ್ಲಿಯ ಇನ್ನೊಂದು ವಿಶೇಷ, ಜನ್ಮಾಷ್ಟಮಿಯಂಥ ಹಬ್ಬಕ್ಕೆ ಅಷ್ಟಮಿ ತಿಂಡಿಗಳಾದ ಚಕ್ಕುಲಿ, ತೇಂಗೊಳ್‌, ಕೋಡುಬಳೆ, ನಿಪ್ಪಟ್ಟು ಇನ್ನಿತರೆ ತಿಂಡಿಗಳನ್ನು ಇವರು ಮಾಡಿ ಕೊಡುತ್ತಾರೆ.

Advertisement

ಎಲ್ಲಿದೆ?: 1207/2, ವಿದ್ಯಾರಣ್ಯಪುರ ಮುಖ್ಯರಸ್ತೆ, ಬಿಇಎಲ್‌ ಲೇಔಟ್‌ 2ನೇ ಬ್ಲಾಕ್‌

* ಗಾಯತ್ರಿ ರಾಜ್‌

Advertisement

Udayavani is now on Telegram. Click here to join our channel and stay updated with the latest news.

Next