Advertisement

ವಿಶ್ವಕ್ಕೆ ಯೋಗ ಪರಿಚಯಿಸಿದ ಅಯ್ಯಂಗಾರ್‌ ಸ್ಮರಣೆ

08:45 PM May 01, 2019 | Lakshmi GovindaRaj |

ಮೈಸೂರು: ಏನು ಇರಲಾರದ ವ್ಯಕ್ತಿ, ಎಲ್ಲವೂ ಇದೆ ಎಂದು ಬಾಳುವುದೇ ನಿಜವಾದ ಯೋಗ ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ಬೆಂಗಳೂರಿನ ಯೋಗ ಮಂದಿರ ಟ್ರಸ್ಟ್‌, ಜ್ಞಾನ ಯೋಗ ಮಂದಿರ ಮತ್ತು ಲಯನ್ಸ್‌ ಜ್ಞಾನ ಯೋಗ ಸಂಸ್ಥೆ ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಿದ್ದ ಡಾ.ಬಿ.ಕೆ.ಎಸ್‌.ಅಯ್ಯಂಗಾರ್‌ ಅವರ ಜನ್ಮ ಶತಮಾನೋತ್ಸವ ಹಾಗೂ ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಡಾ.ಎಸ್‌.ಎನ್‌.ಓಂಕಾರ್‌ ರಚಿಸಿರುವ ಡಾ.ಬಿ.ಕೆ.ಎಸ್‌. ಅಯ್ಯಂಗಾರ್‌ ಅವರ ಜೀವನ ಚರಿತ್ರೆ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯೋಗ ಮನುಷ್ಯನ ಮನಸ್ಸನ್ನು ಶುದ್ಧ ಮಾಡುತ್ತದೆ, ಶಾಂತಗೊಳಿಸುತ್ತದೆ. ಜತೆಗೆ ಸತ್ಯ ದರ್ಶನ ಮಾಡುವ ಮನಃಸ್ಥಿತಿಯನ್ನೂ ನಿರ್ಮಿಸುತ್ತದೆ ಎಂದರು.

ಯೋಗ ಕೈವಲ್ಯ ಸಿದ್ಧಿ: ಇಂದು ಯೋಗ ಎಂದರೆ ಅಯ್ಯಂಗಾರ್‌ ಎನ್ನುವಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಯೋಗವನ್ನು ಜಗತ್ತಿನಾದ್ಯಂತ ಹರಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಯೋಗಕ್ಕೂ ಅವರಿಗೂ ಅವಿನಾಭಾವ ಸಂಬಂಧವಿದೆ. ಏಕೆಂದರೆ ಅಹಿಂಸೆಯಿಂದ ಪ್ರಾರಂಭವಾದ ಯೋಗ ಕೈವಲ್ಯ ಸಿದ್ಧಿ ಪಡೆದುಕೊಳ್ಳಲು ಅಯ್ಯಂಗಾರ್‌ ಅವರೇ ಕಾರಣ. ಈ ನಿಟ್ಟಿನಲ್ಲಿ ಅವರ 100ನೇ ಸ್ಮರಣೋತ್ಸವ ಆಯೋಜಿಸಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ಮೂರು ಭಾವ: ಅಯ್ಯಂಗಾರ್‌ ಅವರ ಕುರಿತ ಪುಸ್ತಕಗಳ ಮುಖಪುಟದಲ್ಲಿ ಅವರ ಮುಖವನ್ನು ಮೂರು ರೀತಿಯಲ್ಲಿ ಇರಿಸಲಾಗಿದೆ. ಇದರಿಂದ ಮನುಷ್ಯ ಸಮಾಧಾನಿ, ಪ್ರಸನ್ನ ಹಾಗೂ ಅತ್ಯಂತ ವಿನೀತನೂ ಆಗಿರಬೇಕು ಎಂದು ತಿಳಿಸಿಕೊಡುತ್ತದೆ. ನೀವೂ ಹಾಗೆಯೇ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

ಅಪರೂಪದ ಯೋಗಿ: ಸಾಹಿತಿ ಡಾ.ಕೆ.ಸಿ.ಶಿವಪ್ಪ, ಯೋಗ ಕ್ಷೇತ್ರದ ಭೀಷ್ಮ ಪಿತಾಮಹಾರಂತಿದ್ದ ಬಿಕೆಎಸ್‌ ಕುರಿತು ಪುಸ್ತಕ ಪ್ರಕಟಿಸಿರುವುದು ಶ್ಲಾಘನೀಯ. ಕುಗ್ರಾಮದಲ್ಲಿ ಹುಟ್ಟಿದ ಅವರು ಯೋಗವನ್ನು ವಿಶ್ವಮಾನ್ಯತೆಯತ್ತ ಕೊಂಡೊಯ್ದ ಅಪರೂಪದ ಯೋಗಿ. ಬಿಕೆಎಸ್‌ ಅವರ ಬಾಲ್ಯ ಅತ್ಯಂತ ಕಷ್ಟವಾಗಿತ್ತು.1935ರಲ್ಲಿ ಪುಣೆಗೆ ವಲಸೆ ಹೋದ ನಂತರ ಅನುಭವಿಸಿದ ಕಷ್ಟ, ನಿರಾಸೆಗಳು ಪುಸ್ತಕದಲ್ಲಿ ಚಿತ್ರಣಗೊಂಡಿದೆ ಎಂದರು.

ತಮ್ಮ ಅವಿರತ ಆತ್ಮವಿಶ್ವಾಸ ಬಲದಿಂದ ಹಾಗೂ ಗುರಿ ಸಾಧಿಸುವ ಛಲಗಾರಿಕೆಯಿಂದ ತಮ್ಮೆಲ್ಲ ಕಷ್ಟಗಳನ್ನು ನುಂಗಿ ಯೋಗದಲ್ಲಿ ವಿಶ್ವವೇ ಮೆಚ್ಚುವ ಸಾಧನೆಯನ್ನು ಮಾಡಿದರು. ಬಿಕೆಎಸ್‌ ಅವರ ಎಲ್ಲಾ ಮಾಹಿತಿಯನ್ನು ಪುಸ್ತಕ ಒಳಗೊಂಡಿದ್ದು, ಡಾ.ಎಸ್‌.ಎನ್‌. ಓಂಕಾರ್‌, ತಮ್ಮ ಗುರುಗಳ ಸರಳತೆ, ಲೋಕದ ಕಾಳಜಿ, ಪಠ್ಯ-ಪ್ರವಚನ, ಶಿಸ್ತು, ಜೀವನ ಶೈಲಿ ಸೇರಿದಂತೆ ಎಲ್ಲವನ್ನೂ ಅದಮ್ಯ ವಿಶ್ವಾಸದಿಂದ ಕೃತಿಯಲ್ಲಿ ಮೂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಯೋಗಮಂದಿರ ಟ್ರಸ್ಟ್‌ ಅಧ್ಯಕ್ಷ ಡಾ.ಎಸ್‌.ಎನ್‌. ಓಂಕಾರ್‌ ಮತ್ತಿತರರು ಉಪಸ್ಥಿತರಿದ್ದರು.

ಬಿಕೆಎಸ್‌ಗೆ ಮೈಸೂರು ಯೋಗ ಪ್ರೇರಣೆ: 1934ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ಯೋಗ ಪ್ರಾತ್ಯಕ್ಷಿಕೆ ನೋಡಿ, ಬಿಕೆಎಸ್‌ ಅಯ್ಯಂಗಾರ್‌ ಪ್ರಭಾವಿತರಾದರು. ಆನಂತರ ಮೈಸೂರಿಗೆ ಬಂದು 2 ವರ್ಷ ಯೋಗಾಭ್ಯಾಸ ಮಾಡಿ, 1936ರಲ್ಲಿ ಯೋಗ ಗುರುಗಳಾದರು ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಎನ್‌.ಎಸ್‌.ಸತ್ಯ ತಿಳಿಸಿದರು.

ಅಲ್ಲದೇ 1937ರಲ್ಲಿ ಪುಣೆಗೆ ತೆರಳಿ ಅಲ್ಲಿ ವಿದೇಶಿಯರಿಗೂ ಯೋಗ ತರಬೇತಿ ನೀಡಿದರು. ಇವರ ಪ್ರಭಾವದಿಂದಾಗಿ ಇಂದಿಗೂ ಕರ್ನಾಟಕದ ಅನೇಕರು ಚೀನಾದಲ್ಲಿ ಯೋಗ ಗುರುಗಳಾಗಿದ್ದಾರೆ. ಹಾಗೂ ಇವರ ಯೋಗ ದೀಪಿಕಾ ಕೃತಿಯನ್ನು ವಿದೇಶದಲ್ಲಿಯೂ ಯೋಗದ ಭಗವದ್ಗೀತೆ ಎಂದು ಪೂಜಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next