ಬೆಂಗಳೂರು: ಬೆಂಗಳೂರು ಮತ್ತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಪ್ರತಿನಿತ್ಯ ಸುಮಾರು 3 ಸಾವಿರ ಮಂದಿಯಂತೆ 14 ದಿನಗಳಲ್ಲಿ 42 ಸಾವಿರ ಮಂದಿ ಬಂದಿದ್ದಾರೆ. ಪ್ರಾಥಮಿಕ ತಪಾಸಣೆ ವೇಳೆ ಸ್ವಯಂ ಘೋಷಣೆ ಪತ್ರದ ಮೂಲಕ ಅವರ ದೂರವಾಣಿ ಸಂಖ್ಯೆ, ಇ-ಮೇಲ್, ಮನೆ ವಿಳಾಸ ಹಾಗೂ ಆರೋಗ್ಯ ವಿವರಗಳನ್ನು ತೆಗೆದುಕೊಂಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಎಲ್ಲಾ ಪ್ರಯಾಣಿಕರಿರನ್ನು ಒಂದೇ ವೇಳೆಗೆ ಸಂಪರ್ಕಿಸಿ ಅವರ ಆರೋಗ್ಯದ ಸ್ಥಿತಿ ಬಗ್ಗೆ ಮಾಹಿತಿ ಕಲೆ ಹಾಕಲು ಐವಿಆರ್‌ಎಸ್ (ಇಂಟರ್‌ಆ್ಯಕ್ಟಿವ್ ವಾಯ್ಸ ರೆಸ್ಪಾನ್ಸ್ ಸಿಸ್ಟಂ) ವ್ಯವಸ್ಥೆ ಬಳಸುತ್ತಿದ್ದೇವೆ. ದೇಶದಲ್ಲೇ ಮೊದಲ ಬಾರಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದು ತಿಳಿಸಿದರು. ಐವಿಆರ್‌ಎಸ್ ಮೂಲಕ ಜನರೇಟ್ ಆದ ಕರೆ ಸ್ವೀಕರಿಸಿದ ವ್ಯಕ್ತಿಗೆ ಪ್ರಾಥಮಿಕ ಮಾಹಿತಿಯನ್ನು ವ್ಯವಸ್ಥೆ ಕೇಳುತ್ತದೆ.
ಬಳಿಕ ಕೊರೊನಾ ಸೋಂಕಿನ ಲಕ್ಷಣಗಳಾದ ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳಿವೆಯೇ ಎಂದು ಐವಿಆರ್‌ಎಸ್ ಪ್ರಶ್ನಿಸಬಹುದು. ಇದಕ್ಕೆ ಉತ್ತರ ಪಡೆಯಲು “ಹೌದು’ ಎಂದಾದರೆ “1ನ್ನು’ ಒತ್ತಿ. “ಇಲ್ಲ’ ಎಂದಾದರೆ “2ನ್ನು’ ಒತ್ತಿ ಎಂದು ಹೇಳಬಹುದು. ಈ ರೀತಿ ಸಂಗ್ರಹಿಸಿದ ದತ್ತಾಂಶವನ್ನು ಆರೋಗ್ಯವಂತ ಹಾಗೂ ಅನಾರೋಗ್ಯ ಸಮಸ್ಯೆಯುಳ್ಳವರು ಎಂದು ವರ್ಗೀಕರಣ ಮಾಡಿ ಪ್ರತ್ಯೇಕ ನಿಗಾ ಹಾಗೂ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ನಗರ 35 ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ರೋಗದ ಲಕ್ಷಣ ಆಧಾರವಾಗಿ ವೈದ್ಯರು ಅಥವಾ 104ರ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚನೆ ನೀಡುತ್ತಾರೆ. ಆಸ್ಪತ್ರೆಗೆ ತೆರಳಿ ವಿದೇಶದಿಂದ ಬಂದ ದಾಖಲೆ ತೋರಿಸಿ ದಾಖಲಾಗಬಹುದು ಎಂದರು. ರಾಜ್ಯದ 17 ವೈದ್ಯಕೀಯ ಕಾಲೇಜುಗಳಲ್ಲಿ ಕಠಿಣ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು “ವಾರ್ ರೂಂ’ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲಾ ಆಸ್ಪತ್ರೆಗಳೊಂದಿಗೆ ಸಮನ್ವಯ ಸಾಧಿಸಿ ಕಠಿಣ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ರಾಜ್ಯದ 17 ವೈದ್ಯಕೀಯ ಕಾಲೇಜುಗಳಲ್ಲಿ ನಿರ್ಮಿಸುವ “ವಾರ್ ರೂಂ” ನೆರವಾಗಲಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದ ಜಿಲ್ಲೆಗಳಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳೊಂದಿಗೆ ಸಭೆ ನಡೆಸಿ ಚರ್ಚಿಸಲೂ ಸಹ ತೀರ್ಮಾನಿಸಲಾಗಿದೆ ಎಂದು ಹೇಳಿದರು.