Advertisement

ನಿನಗಾಗಿ ಸಾವಿರ ಬಾರಿ ಸೋಲುವೆ…

09:12 PM Jan 20, 2020 | mahesh |

ಹುಡುಗಿ,
ಗಂಟಲಿನ ತುಂಬಾ ಪದಗಳು ತುಂಬಿಕೊಂಡಿವೆ. ಯಾವುದನ್ನು ಮೊದಲು ಆಡಲಿ, ಯಾವುದನ್ನು ಮತ್ತೆ ಆಡಲಿ, ಯಾವುದನ್ನು ನಂತರ ಇರಲಿ ಅನ್ನುವುದೇ ನನಗೆ ಗೊಂದಲ. ನಾನು ಏನೇ ಮಾಡಿದರೂ ನೀನು ಅದರಲ್ಲೊಂದು ಕೊಂಕು ಹುಡುಕುತ್ತೀ. “ಬ್ರೈನ್‌ ವಾಶ್‌’ ಅನ್ನುತ್ತೀ. ನನ್ನಿಂದ ಬ್ರೈನ್‌ ವಾಶ್‌ ಸಾಧ್ಯವಾಗಿದ್ದರೆ ಜಗತ್ತಿನ ಹುಚ್ಚರನ್ನೆಲ್ಲಾ ತೊಳೆದು ಸರಿಮಾಡಿ ಬಿಡುತ್ತಿದ್ದೆ.

Advertisement

ನೀನು ನಿಯತ್ತಿನ ಮಾತನಾಡುತ್ತೀ. ನಿಯತ್ತನ್ನು ತೂಗಲು ಯಾವುದಾದರೂ ತಕ್ಕಡಿ ಇದ್ದರೆ ಹೇಳು, ಅದರ ಬೆಲೆ ಎಷ್ಟಾದರೂ ಆಗಲಿ, ಇನ್ಸಾಲ್‌ ಮೆಂಟಿನಲ್ಲಿಯಾದರೂ ಖರೀದಿಸಿ ಕೊಡುವೆ.

ನನಗೆ ಸದಾ ನಿನ್ನ ಮುಖವೇ ನೆನಪಾಗುತ್ತದೆ. ತುಂಬಿ ತುಳುಕುವ ಮುಗ್ಧತೆ ಕಾಡುತ್ತೆ. ಅಂತಹ ಮುಖದೊಳಗಿನಿಂದ ಅನುಮಾನವನ್ನು ಇಣುಕಿಸುತ್ತಿಯಲ್ಲ ‘ ಅದೇ ನನಗೆ ತಡೆಯಲಾರದ ಹಿಂಸೆ. ಹುಚ್ಚಿ, ಆ ಪರಿ ಅನುಮಾನವನ್ನಾದರೂ ಯಾಕೆ ಸಾಕಿಕೊಂಡೆ? ಬರೆದ ಕಥೆಯೊಳಗಿನ ಹುಡುಗಿಯನ್ನು ನೀನು ನನಗೆ ಜೋಡಿಸುತ್ತೀ, ಇದು ನಿಜ ಕಥೆ. ಅವಳು ಯಾರು ಹೇಳು ಅಂತ ಕೊರಳಪಟ್ಟಿ ಹಿಡಿದು ಎಳೆದಾಡುತ್ತೀ. ಅದು ಕಲ್ಪನೆ ಮಾರಾಯ್ತಿ ಅಂದರೆ ನೀನು ಮತ್ತೂಂದು ವರಾತ ತೆಗೆಯುತ್ತೀ. ನನಗೆ ಒಳಗೊಳಗೇ ಖುಷಿಯಾಗುತ್ತದೆ, ನನ್ನ ಮೇಲೆ ಎಷ್ಟೊಂದು ಪ್ರೀತಿ ಇದೆಯಲ್ಲ ಇವಳಿಗೆ ಅಂತ. ಆದರೆ, ಅದು ಜಾಸ್ತಿ ಆಗಬಾರದಲ್ಲ. ಬರೀ ತಪ್ಪು ಹುಡುಕಿಕೊಳ್ಳುವುದೇ ಪ್ರೀತಿಯ ಕೆಲಸವಾಗಬಾರದು. ಪ್ರೀತಿ ಕಾರಣಗಳನ್ನು ಪಕ್ಕಕ್ಕಿಟ್ಟು ಕೂಡಿಕೊಳ್ಳಬೇಕು. ಪ್ರೀತಿ ಕೂಡಲು ಹಾತೊರೆಯುವಾಗ ನೀನು ಮತ್ತೆ ಮತ್ತೆ ಇಲ್ಲದ ಕಾರಣಗಳನ್ನು ತಂದು ನಿಲ್ಲಿಸಿ ಜಗಳ ಕಾಯುತ್ತಿಯಲ್ಲ ಏನು ಹೇಳಲಿ? ಬದುಕಿನಲ್ಲಿ ಮಾನ ಮುಖ್ಯ ಅನುಮಾನ ಅಲ್ಲ. ಅದು ಒಳ್ಳೆಯದೂ ಅಲ್ಲ.

ಸಾಕು ಬಿಟ್ಟು ಬಿಡು ಜಗಳ. ಬದುಕು ನಾಲ್ಕು ದಿನದ ಅವಧಿ. ಬರೀ ಕೈ ಕೈ ಹಿಡಿದು ನಡೆದರೆ ಸಾಕು; ಮೂರು ದಿನಗಳು ಮುಗಿದೇ ಹೋಗುತ್ತವೆ.ಉಳಿದ ಒಂದು ದಿನವನ್ನು ಬರೀ ಜಗಳದಲ್ಲೇ ಕಳೆಯಬೇಕಾ? ಜಗಳವೇ ನಿನ್ನ ಹಠವಾದರೆ ನಾನು ಪ್ರತಿ ಜಗಳದಲ್ಲೂ ಸೋಲಲು ಸಿದ್ದ. ನನಗೆ ಗೆಲುವು ಬೇಡ, ನೀನು ಬೇಕು. ನಿನಗಾಗಿ ನಾನು ಸಾವಿರಬಾರಿ ಬೇಕಾದರೆ ಸೋಲುವೆ.

ಸದಾಶಿವ್‌ ಸೊರಟೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next