ಪಣಜಿ: ‘ನನಗೀಗ ಭಯ ಶುರುವಾಗಿದೆ. ಹೆಣ್ಣು ಮಕ್ಕಳೂ ಮದ್ಯವನ್ನು ಸೇವಿಸಲು ಆರಂಭಿಸಿದ್ದಾರೆ. ಸಹಿಷ್ಣುತೆಯ ಮೀತಿ ಮೀರಿ ಹೋಗಿದೆ’ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ತೀವ್ರ ಕಳವಳ ವ್ಯಕ್ತ ಪಡಿಸಿದ್ದಾರೆ.
ರಾಜ್ಯದ ಶಾಸಕಾಂಗ ಇಲಾಖೆ ಆಯೋಜಿಸಿದ್ದ ಯುವ ಸಂಸತ್ ಸಮಾರಂಭದಲ್ಲಿ ನೆರೆದಿದ್ದ ಯುವಜನತೆಯನ್ನುದ್ದೇಶಿಸಿ ಮಾತನಾಡಿದ ಪರ್ರಿಕರ್ ‘ನಾನು ಎಲ್ಲರನ್ನು ಉದ್ದೇಶಿಸಿ ಈ ಮಾತನ್ನು ಹೇಳುತ್ತಿಲ್ಲ. ಇಲ್ಲಿ ಯಾರು ಇದ್ದೀರಿ ಅವರನ್ನುದ್ದೇಶಿಸಿ ಹೇಳುತ್ತಿದ್ದೇನೆ’ ಎಂದರು.
‘ಗೋವಾದಲ್ಲಿ ಮಾದಕದ್ರವ್ಯ ಜಾಲದ ಕುರಿತು ಮಾತನಾಡಿ ಈಗ ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ ಕಡಿಮೆಯಾಗಿದ್ದು, ಇದು ಶೂನ್ಯ ಪ್ರಮಾಣಕ್ಕೆ ಬರುವ ವಿಶ್ವಾಸ ನನ್ನದು. ಈಗ ಕಾಲೇಜುಗಳಲ್ಲಿ ಮಾದಕದ್ರವ್ಯಗಳು ಸರಬರಾಜಾಗುತ್ತಿಲ್ಲ’ ಎಂದರು.
‘ಈಗ ಸರಕಾರಿ ಗುಮಾಸ್ತನ ಉದ್ಯೋಗ ಗಿಟ್ಟಿಸಿಕೊಳ್ಳು ವ ಸಲುವಾಗಿ ಅರ್ಜಿ ಸಲ್ಲಿಸಲು ಉದ್ದನೆಯ ಸಾಲು ಕಂಡು ಬರುತ್ತದೆ.ಸರಕಾರಿ ಉದ್ಯೋಗ ಎಂದರೆ ಯಾವುದೇ ಕೆಲಸ ಇಲ್ಲ ಎಂದು ಜನ ತಿಳಿದುಕೊಂಡಿದ್ದಾರೆ’ ಎಂದು ಹಾಸ್ಯ ಮಾಡಿದರು.
ಪರ್ರಿಕರ್ ಅವರು ಡ್ರಗ್ಸ್ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಆದೇಶ ನೀಡಿದ ಬೆನ್ನಲ್ಲೇ 17 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು.