ಮಂಗಳೂರು : ರಾಜ್ಯ ಸರಕಾರ ಮೀನುಗಾರರಿಗಾಗಿ ಬಜೆಟ್ ನಲ್ಲಿ ಪ್ರಕಟಿಸಿದ ಒಂದು ಯೋಜನೆಯನ್ನೂ ಕಾರ್ಯರೂಪಕ್ಕೆ ತರದೆ ಮೀನುಗಾರ ಸಮುದಾಯವನ್ನು ಅವಗಣಿಸಿದೆ. ಈಗಾಗಲೇ ಮೀನು ಗಾರ ಮುಖಂಡರು ಬೆಂಗಳೂರಿಗೆ ತೆರಳಿ ತಮ್ಮ ಸಮಸ್ಯೆಯನ್ನು ಸರಕಾರ ಮುಂದೆ ಇಟ್ಟಿದ್ದಾರೆ. ಇದಕ್ಕೆ ಸ್ಪಂದಿಸದಿದ್ದರೆ ಮೀನುಗಾರರ ಜತೆ ಸೇರಿ ಕಾಂಗ್ರೆಸ್ ಪಕ್ಷವೂ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಮೀನುಗಾರರೊಂದಿಗೆ ಜಿಲ್ಲಾ ಕಾಂಗ್ರೆಸ್ ಸಭೆ ನಡೆಸಿದ್ದು, ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದೆ. ಬೆಳಗಾವಿ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಈ ವಿಚಾರವಾಗಿ ಸಮಗ್ರ ವಿಚಾರ ಮಂಡಿಸುವಂತೆ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್‌ನಲ್ಲಿ ಮಂಜುನಾಥ್ ಭಂಡಾರಿ ಹಾಗೂ ಹರೀಶ್ ಕುಮಾರ್ ಅವರಲ್ಲಿ ತಿಳಿಸಲಾಗಿದೆ ಎಂದರು.
ನಾಲ್ಕು ತಿಂಗಳಿಂದ ಮೀನುಗಾರರಿಗೆ ಸಬ್ಸಿಡಿ ಸೀಮೆ ಎಣ್ಣೆ ಪೂರೈಕೆಯಾಗುತ್ತಿಲ್ಲ. ಟ್ರಾಲ್‌ಬೋಟ್‌ಗಳಿಗೆ ನೀಡುತ್ತಿರುವ ತಿಂಗಳಿಗೆ 500 ಲೀ. ಡೀಸೆಲ್ ಪ್ರಮಾಣವನ್ನು ಏರಿಕೆ ಮಾಡುವಂತೆ ಬೇಡಿಕೆ ಸಲ್ಲಿಸಿದ್ದರೂ ಈಡೇರಿಲ್ಲ. ಬಂದರಿನ ವಿಸ್ತರಣೆಯೂ ನಡೆಯುತ್ತಿಲ್ಲ. ಬಂದರು ಪ್ರದೇಶದ ಅಭಿವೃದ್ಧಿ ಸ್ಮಾರ್ಟ್ ಸಿಟಿ ಯೋಜನೆಯ ಉದ್ದೇಶವಾಗಿತ್ತಾದರೂ ಪ್ರಸ್ತುತ ಬೇರೆಯೇ ಕೆಲಸ ನಡೆಯುತ್ತಿದೆ. ಬಂದರಿನ ಬೋಟ್ ತಂಗುವ ಸ್ಥಳದಲ್ಲಿ ಬಿರುಕು ಬಿಟ್ಟಿದ್ದು, ಅಪಾಯದ ಸ್ಥಿತಿಯಲ್ಲಿದೆ. ಅಳಿವೆ ಬಾಗಿಲಿನಲ್ಲಿ ಡ್ರೆಜ್ಜಿಂಗ್ ಮಾಡದೆ ಬೋಟ್‌ಗಳು ಹಾನಿಗೀಡಾಗುತ್ತಿವೆ.
ಮೀನುಗಾರಿಕೆ ಸಚಿವರು ಜಿಲ್ಲೆಯವರೇ ಆದರೂ ಮೀನುಗಾರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬಂದರಿಗೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ ಎನ್ನುವುದನ್ನು ಅವರು ಸ್ಪಷ್ಟಪಡಿಸಬೇಕು. ಕಳೆದ ನಾಲ್ಕು ವರ್ಷದಲ್ಲಿ ಬಂದರಿನ ಅಭಿವೃದ್ಧಿಗೆ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎನ್ನುವ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಪದ್ಮ ಪ್ರಸಾದ್, ಕೋಡಿಜಾಲ್ ಇಬ್ರಾಹಿಂ, ಎಂ. ಶಶಿಧರ ಹಗ್ಡೆ, ಶಾಹುಲ್ ಹಮೀದ್, ಶಬೀರ್ ಸಿದ್ದಕಟ್ಟೆ, ಶುಭೋದಯ ಆಳ್ವ, ಚಿತ್ತರಂಜನ್ ಶೆಟ್ಟಿ, ಭಾಸ್ಕರ ರಾವ್, ಮನೋರಾಜ್, ಪಿ.ಎಂ.ಮುಸ್ತಫಾ, ನಝೀರ್ ಬಜಾಲ್ ಪತ್ರಿಕಾಗೋಷ್ಠಿಯಲ್ಲಿದ್ದರು.