ಸೀಗ್ರೌಂಡ್ ಸಮುದ್ರ ತೀರಕ್ಕೆ ಹೊರಟಿದ್ದರೆ?
ಉಳ್ಳಾಲ ನಗರಸಭಾ ವ್ಯಾಪ್ತಿಯ ಮುಕ್ಕಚ್ಚೇರಿ ಸೀಗ್ರೌಂಡ್‌ನ ಸಮುದ್ರ ತಟದಲ್ಲಿ ಸುಮಾರು 30 ಎಕರೆ ಖಾಲಿ ಭೂಮಿಯನ್ನು 20 ವರ್ಷಗಳ ಹಿಂದೆಯೇ ಸಿದ್ಧಾರ್ಥ್ ಖರೀದಿಸಿದ್ದರು. ಇದರಲ್ಲಿ ಸುಮಾರು 8 ಎಕರೆ ಪ್ರದೇಶ ಸಿಆರ್‌ಝಡ್ ವ್ಯಾಪ್ತಿಯಲ್ಲಿದೆ. ಸಮುದ್ರ ಕೊರೆತದಿಂದ ಸ್ವಲ್ಪ ಭಾಗ ಮಾಯವಾಗಿದೆ. 22 ಎಕರೆ ಭೂಮಿಯ ಆರ್‌ಟಿಸಿ ಸಿದ್ಧಾರ್ಥ್ ಹೆಸರಲ್ಲಿದೆ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯೊಂದಿಗೆ ಪೋಲೋ ಗ್ರೌಂಡ್ ಆರಂಭಿಸುವ ನಿಟ್ಟಿನಲ್ಲಿ ಶ್ರೀಲಂಕಾ ಮೂಲದ ಆರ್ಕಿಟೆಕ್ಟ್ ಬಂದು ಸ್ಥಳ ಪರಿಶೀಲನೆ ನಡೆಸಿದ್ದರು. ಒಂದೂವರೆ ವರ್ಷದ ಹಿಂದೆ ಸಿದ್ಧಾರ್ಥ್ ಪತ್ನಿ ಸಮೇತ ಈ ಜಾಗಕ್ಕೆ ಭೇಟಿ ನೀಡಿದ್ದು, ಸಿಆರ್‌ಝಡ್ ಕಾನೂನಿನಿಂದ ಪೋಲೋ ಗ್ರೌಂಡ್ ಮಾಡುವ ಯೋಜನೆ ವಿಳಂಬವಾಗಿತ್ತು ಎನ್ನಲಾಗಿದೆ. ಸೋಮವಾರ ತನ್ನ ಕಾರು ಚಾಲಕನೊಂದಿಗೆ ತನ್ನ ಸೈಟ್ ಕಡೆ ತೆರಳ್ಳೋಣ ಎಂದಿದ್ದು, ಮುಕ್ಕಚ್ಚೇರಿಯ ಸೀಗ್ರೌಂಡ್ ಪ್ರದೇಶಕ್ಕೆ ಭೇಟಿ ನೀಡುವವರಿದ್ದರೇ ಎನ್ನುವುದು ಇನ್ನೂ ನಿಗೂಢವಾಗಿದೆ.
ಸಮುದ್ರಕ್ಕೆ ಕೊಚ್ಚಿ ಹೋಗಿರುವ ಸಾಧ್ಯತೆ ?
ಸಾಮಾನ್ಯವಾಗಿ ರಾತ್ರಿ ಸಮಯವಾದ್ದರಿಂದ ಸಮುದ್ರ ಇಳಿತ ಸ್ಥಿತಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಯಾರಾದರೂ ನದಿಯಲ್ಲಿ ಬಿದ್ದಾಗ ಮುಳುಗೇಳದಿದ್ದರೆ ಬಿದ್ದ ಸ್ಥಳದಲ್ಲಿ ಸಿಲುಕಿಕೊಳ್ಳುವ (ಅಡಿ ಹಿಡಿಯುವ)ಸಾಧ್ಯತೆ ಹೆಚ್ಚು, ನದಿಗೆ ಹಾರಿದ ವ್ಯಕ್ತಿ ಮುಳುಗಿ ಏಳುವ ಸ್ಥಿತಿಯಲ್ಲಿದ್ದರೆ ಸಂಜೆಯ ಸಮಯದಲ್ಲಿ ನೀರು ಇಳಿತವಾಗುವುದರಿಂದ ಅಳಿವೆ ಬಾಗಿಲಿನ ಕಡೆ ರಭಸವಾಗಿ ಎಳೆದುಕೊಂಡು ಹೋಗುವ ಸಾಧ್ಯತೆ ಹೆಚ್ಚು. ಹೀಗಾಗಿ ಸೋಮವಾರ ಸಂಜೆ ನದಿಗೆ ಬಿದ್ದಿರುವ ವ್ಯಕ್ತಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ಅಳಿವೆ ಬಾಗಿಲಿನ ಮೂಲಕ ಸಮುದ್ರ ಸೇರಿರುವ ಸಾಧ್ಯತೆ ಹೆಚ್ಚು ಎಂದು ಸ್ಥಳೀಯ ಮೀನುಗಾರ ಫ್ರಾನ್ಸಿಸ್ ಅಭಿಪ್ರಾಯಪಟ್ಟಿದ್ದಾರೆ. 24 ಗಂಟೆಯ ಬಳಿಕ ಮುಳುಗಿರುವ ವ್ಯಕ್ತಿಯ ಮೃತದೇಹ ನೀರಿನ ಮೇಲೆ ಬರುತ್ತದೆ ಅಥವಾ ಸಮುದ್ರ ತಟಕ್ಕೆ ಬರುತ್ತದೆ ಎಂದೂ ಅವರು ಹೇಳಿದ್ದಾರೆ.
ಸಮುದ್ರ ತಟದಲ್ಲಿ ಕಣ್ಗಾವಲು
ಕೋಟೆಪುರ ಅಳಿವೆ ಬಾಗಿಲಿನಿಂದ ಸೋಮೇಶ್ವರ ಉಚ್ಚಿಲದ ಎಂಡ್ ಪಾಯಿಂಟ್ ಮತ್ತು ತಲಪಾಡಿ ಸಮುದ್ರ ತೀರದಲ್ಲಿ ಸ್ಥಳೀಯ ಮೀನುಗಾರರು ಕಣ್ಗಾವಲು ಇರಿಸಿದ್ದಾರೆ. ಸಮುದ್ರದ ಕಲ್ಲುಗಳೆಡೆಯಲ್ಲಿ ಸ್ಥಳೀಯ ಜೀವರಕ್ಷಕ ಈಜುಗಾರರು ಹುಡುಕಾಡಿದ್ದಾರೆ. ಮಂಜೇಶ್ವರ ಸೇರಿದಂತೆ ಕಾಸರಗೋಡುವರೆಗಿನ ಮೀನುಗಾರರಿಗೆ ಮತ್ತು ಸ್ಥಳೀಯ ಈಜುಗಾರರಿಗೆ ಸಮುದ್ರ ತಟದ ಮೇಲೆ ನಿಗಾ ಇರಿಸಿಲು ಮಾಹಿತಿ ನೀಡಲಾಗಿದೆ.
Advertisement