“ಸುಪ್ರಭಾತ’, “ಲಾಲಿ’, “ಅಮೃತವರ್ಷಿಣಿ’, “ನಿಶ್ಯಬ್ಧ’, “ಚಿತ್ರ’, “ಅಭಿ’ ಮೊದಲಾದ ಸೂಪರ್ ಹಿಟ್ ಚಿತ್ರಗಳು ಸೇರಿದಂತೆ ಇಲ್ಲಿಯವರೆಗೆ ಸುಮಾರು ನಲವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಆ್ಯಕ್ಷನ್-ಕಟ್ ಹೇಳಿರುವ ಕನ್ನಡದ ಹಿರಿಯ ನಿರ್ದೇಶಕ ದಿನೇಶ್ ಬಾಬು ಈ ವಾರ ತಮ್ಮ ಹೊಸ ಚಿತ್ರ “ಹಗಲು ಕನಸು’ ಅನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಹೌದು, ದಿನೇಶ್ ಬಾಬು ನಿರ್ದೇಶನದ “ಹಗಲು ಕನಸು’ ಚಿತ್ರ ಇಂದು ತೆರೆಗೆ ಬರುತ್ತಿದೆ.
ಕಾಮಿಡಿ ಕಂ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿರುವ “ಹಗಲು ಕನಸು’ ಚಿತ್ರದಲ್ಲಿ ಮಾಸ್ಟರ್ ಆನಂದ್ ನಾಯಕನಾಗಿ ಸನಿಹ ಯಾದವ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ನಾರಾಯಣ ಸ್ವಾಮಿ, ನೀನಾಸಂ ಅಶ್ವಥ್, ಮನದೀಪ್ ರಾಯ್, ಅಶ್ವಿನ್ ಹಾಸನ್, ವಾಣಿಶ್ರೀ, ಚಿತ್ಕಲಾ ಬಿರಾದಾರ್, ಶ್ವೇತಾ, ವರ್ಷಿತಾ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಬಿಡುಗಡೆಗೂ ಮುನ್ನ ತಮ್ಮ ಚಿತ್ರ ತಂಡದ ಜೊತೆ ಮಾಧ್ಯಮಗಳ ಮುಂದೆ ಹಾಜರಾಗಿದ್ದ ದಿನೇಶ್ ಬಾಬು, “ಹಗಲು ಕನಸು’ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಿದರು.
ಮೊದಲಿಗೆ ಚಿತ್ರದ ಬಗ್ಗೆ ಮಾತಿಗಿಳಿದ ನಿರ್ದೇಶಕ ದಿನೇಶ್ ಬಾಬು, “ನಾನು ಯಾವಾಗಲೂ ನನ್ನ ಸುತ್ತಮುತ್ತ ನಡೆಯುವ ಘಟನೆಗಳು, ವ್ಯಕ್ತಿಗಳನ್ನೇ ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳುತ್ತೇನೆ. ಅದನ್ನು ಸಿನಿಮಾಕ್ಕೆ ತಕ್ಕಂತೆ ಒಂದಷ್ಟು ಬದಲಾವಣೆ ಮಾಡಿಕೊಂಡು ತೆರೆಗೆ ತರುತ್ತೇನೆ. ಇದು ನಾನು ಅನುಸರಿಸಿಕೊಂಡು ಬರುತ್ತಿರುವ ಸಿನಿಮಾ ಮೇಕಿಂಗ್ ಸ್ಟೈಲ್. “ಹಗಲು ಕನಸು’ ಚಿತ್ರದಲ್ಲೂ ಅಂಥದ್ದೇ ಒಂದು ಘಟನೆ ಇದೆ. ವೀಕೆಂಡ್‌ನಲ್ಲಿ ಮನೆಯೊಂದರಲ್ಲಿ, ಕೆಲವು ವ್ಯಕ್ತಿಗಳ ನಡುವೆ ನಡುವೆ ನಡೆಯುವ ಘಟನೆಗಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಇಡೀ ಸಿನಿಮಾ ಕಾಮಿಡಿ, ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿದೆ. ಸುಮಾರು ಎರಡು ವರ್ಷಗಳ ಹಿಂದೆ ಹೊಳೆದ ಸಣ್ಣ ಐಡಿಯಾ ಇಂದು ಸಿನಿಮಾವಾಗಿ ಪ್ರೇಕ್ಷಕರ ಮುಂದೆ ಬರುತ್ತಿದೆ. ಅರಸೀಕೆರೆ ಹತ್ತಿರದ ಮನೆಯೊಂದರಲ್ಲಿ ಚಿತ್ರದ ಬಹುಭಾಗ ಚಿತ್ರೀಕರಣ ಮಾಡಲಾಗಿದೆ’ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದರು.
ಚಿತ್ರದ ಬಗ್ಗೆ ಮಾತನಾಡಿದ ನಾಯಕ ಮಾಸ್ಟರ್ ಆನಂದ್, “ಬಾಬು ಸರ್ ಈ ಸಿನಿಮಾ ಮಾಡು ಎಂದು ಹೇಳುತ್ತಿದ್ದಂತೆ, ಮರು ಮಾತಿಲ್ಲದೆ, ಅವರ ಮೇಲಿನ ನಂಬಿಕೆಯಿಂದ, ಕಥೆಯನ್ನೂ ಕೇಳದೆ ಚಿತ್ರವನ್ನು ಒಪ್ಪಿಕೊಂಡೆ. ಚಿತ್ರದ ಕಥಾ ನಾಯಕನಿಗೆ ಆಗಾಗ್ಗೆ ಮಚ್ಚೆ ಇರುವ ಒಂದು ಹುಡುಗಿಯ ಬಗ್ಗೆ ಕನಸು ಬೀಳುತ್ತಿರುತ್ತದೆ. ಒಮ್ಮೆ ಆ ಮಚ್ಚೆ ಇರುವ ಹುಡುಗಿಯೇ ಯಾರೂ ಇಲ್ಲದ ವೇಳೆ ಮನೆಗೆ ಬಂದು ಬಿಡುತ್ತಾಳೆ. ಅಲ್ಲಿಂದ ಏನೇನು ಶುರುವಾಗುತ್ತದೆ ಅನ್ನೋದೆ ಚಿತ್ರದ ಕಥೆ. ಕಾಮಿಡಿ ಮತ್ತು ಸಸ್ಪೆನ್ಸ್ ಜೊತೆಗೆ ಸಿನಿಮಾ ಸಾಗುತ್ತದೆ’ ಎಂದು ಚಿತ್ರದ ಸಣ್ಣ ಗುಟ್ಟನ್ನು ಬಿಟ್ಟುಕೊಟ್ಟರು.
ಇನ್ನು ನಾಯಕಿ ಸನಿಹಾ ಯಾದವ್ ಈ ಚಿತ್ರದಲ್ಲಿ ಕೆಲಸ ಮಾಡಿರುವುದಕ್ಕೆ ತುಂಬ ಖುಷಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಸನಿಹಾ, “ಮೊದಲ ಬಾರಿಗೆ ದಿನೇಶ್ ಬಾಬು ಅವರಂಥ ದೊಡ್ಡ ನಿರ್ದೇಶಕರ ಬಳಿ ಕೆಲ್ಸ ಮಾಡುವ ಅವಕಾಶ ಸಿಕ್ಕಿದ್ದು, ನನ್ನ ಅದೃಷ್ಟ ಎಂದೇ ಭಾವಿಸುತ್ತೇನೆ. ಇದೊಂದೆ ಸಿನಿಮಾ ಹತ್ತು ಸಿನಿಮಾಗಳನ್ನು ಮಾಡಿದಷ್ಟು ಅನುಭವ ತಂದುಕೊಟ್ಟಿದೆ. ಇಡೀ ಟೀಮ್ ಸಹಕಾರದಿಂದ ಒಳ್ಳೆಯ ಸಿನಿಮಾ ಮಡೋದಕ್ಕೆ ಸಾಧ್ಯವಾಗಿದೆ. ಆಡಿಯನ್ಸ್‌ಗೆ ಚಿತ್ರ ಮತ್ತು ನನ್ನ ಪಾತ್ರ ಇಷ್ಟವಾಗುತ್ತದೆ’ ಎಂಬ ಭರವಸೆ ವ್ಯಕ್ತಪಡಿಸಿದರು.
“ಎ.ಪಿ.ಆರ್ ಫಿಲಂಸ್’ ಬ್ಯಾನರ್‌ನಲ್ಲಿ ವಿ.ಜಿ ಅಚ್ಯುತ ರಾಜು, ಎಂ. ಪದ್ಮನಾಭ ಮತ್ತು ರಹಮತ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. “ಒಂದೊಳ್ಳೆ ಸದಭಿರುಚಿ ಚಿತ್ರ ನಿರ್ಮಿಸಬೇಕೆಂಬ ಕಾರಣಕ್ಕೆ ದಿನೇಶ್ ಬಾಬು ಅವರ ಕೈಯಲ್ಲಿ ಈ ಚಿತ್ರ ನಿರ್ದೇಶನ ಮಾಡಿಸಲಾಗಿದೆ. ಚಿತ್ರದ ಎಲ್ಲಾ ಕೆಲಸಗಳು ಈ ವರ್ಷದ ಮಧ್ಯ ಭಾಗದಲ್ಲೇ ಪೂರ್ಣಗೊಂಡಿದ್ದು, ಕಳೆದ ಸೆಪ್ಟೆಂಬರ್‌ನಲ್ಲಿ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಥಿಯೇಟರ್ ಸಮಸ್ಯೆಯಿಂದ ಚಿತ್ರವನ್ನು ಈಗ ರಿಲೀಸ್ ಮಾಡುತ್ತಿದ್ದೇವೆ. ಈ ವಾರ ಚಿತ್ರ ಸುಮಾರು 100ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ರಿಲೀಸ್ ಆಗುತ್ತಿದೆ’ ಎಂದಿದ್ದಾರೆ ನಿರ್ಮಾಪಕರು.
ಚಿತ್ರದಲ್ಲಿ ಎರಡು ಹಾಡುಗಳಿದ್ದು, ಕಾರ್ತಿಕ್ ವೆಂಕಟೇಶ್ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. “ಹಗಲು ಕನಸು’ ಚಿತ್ರಕ್ಕೆ ಸೆನ್ಸಾರ್‌ನಿಂದ “ಯು/ಎ’ ಪ್ರಮಾಣಪತ್ರ ಸಿಕ್ಕಿದ್ದು, ಚಿತ್ರ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಅನ್ನೋದು ಇದೇ ವಾರಾಂತ್ಯದಲ್ಲಿ ಗೊತ್ತಾಗಲಿದೆ.