Advertisement

G-20: ಇದು ಶಾಂತಿ, ಭ್ರಾತೃತ್ವದ ಸಮಯ: ಪಿ20 ಸಮಾವೇಶದಲ್ಲಿ ಪ್ರಧಾನಿ ಮೋದಿ 

09:43 PM Oct 13, 2023 | Team Udayavani |

ನವದೆಹಲಿ: ಭಯೋತ್ಪಾದನೆಯು ವಿಶ್ವದಲ್ಲಿ ಎಲ್ಲಿಯಾದರೂ ಮತ್ತು ಯಾವುದೇ ರೂಪದಲ್ಲೂ ಮಾನವೀಯತೆಗೆ ವಿರುದ್ಧವಾಗಿದೆ. ಇದು ಶಾಂತಿ ಮತ್ತು ಭ್ರಾತೃತ್ವದ ಹಾಗೂ ಒಟ್ಟಿಗೆ ಮುನ್ನಡೆಯುವ ಸಮಯ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.

Advertisement

ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವೆ ಯುದ್ಧ ನಡೆಯುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ರಾಷ್ಟ್ರಗಳ ಸಂಸತ್‌ ಅಧ್ಯಕ್ಷರ(ಪಿ20) ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದ ಅವರು, “ಜಗತ್ತಿನ ಯಾವುದೇ ಮೂಲೆಯಲ್ಲಿ ಘರ್ಷಣೆಗಳು ನಡೆದರೂ ಅದು ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಜಗತ್ತು ಮಾನವ ಕೇಂದ್ರಿತವಾಗಿ ಮುನ್ನಡೆಯಬೇಕಿದೆ’ ಎಂದು ಕರೆ ನೀಡಿದರು.
“ಭಾರತವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಇದರಿಂದ ಇಲ್ಲಿಯವರೆಗೆ ಸಾವಿರಾರು ಅಮಾಯಕರ ಜೀವ ಬಲಿಯಾಗಿದೆ. ಭಯೋತ್ಪಾದನೆ ಎದುರಿಸಲು ನಾವು ಒಟ್ಟಾಗಿ ಹೇಗೆ ಕೆಲಸ ಮಾಡಬೇಕೆಂದು ಜಗತ್ತಿನಾದ್ಯಂತ ಸಂಸತ್‌ಗಳು ಯೋಚಿಸಬೇಕಿದೆ’ ಎಂದು ಹೇಳಿದರು.

ಪಾರದರ್ಶಕತೆ ಹೆಚ್ಚಿಸಿದ ಇವಿಎಂ:
“ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಸುಮಾರು 100 ಕೋಟಿ ಭಾರತೀಯರು ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ವಿದ್ಯುನ್ಮಾನ ಮತಯಂತ್ರವು(ಇವಿಎಂ) ದೇಶದ ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಿದೆ’ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

“ಮುಂದಿನ ವರ್ಷ ಭಾರತ ಪುನಃ “ಪ್ರಜಾಪ್ರಭುತ್ವದ ಹಬ್ಬ’ವನ್ನು ಆಚರಿಸಲಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಅಧಿಕ ಪ್ರಮಾಣದ ಮತದಾನವು ದೇಶದ ಸಂಸದೀಯ ಪ್ರಕಿಯೆಗಳ ಮೇಲೆ ಜನರು ಹೊಂದಿರುವ ನಂಬಿಕೆಯನ್ನು ಎತ್ತಿತೋರುತ್ತದೆ. ಕಳೆದ ಸಂಸತ್‌ ಚುನಾವಣೆಯಲ್ಲಿ 91 ಕೋಟಿ ಅರ್ಹ ಮತದಾರರ ಪೈಕಿ ಶೇ.67ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದರು’ ಎಂದು ಹೇಳಿದರು.

Advertisement

ಭಯೋತ್ಪಾದನೆ ವಿರುದ್ಧ ಸಮರಕ್ಕೆ ಬದ್ಧ
ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದವನ್ನು ಎದುರಿಸಲು ತಮ್ಮ ಪಾತ್ರವನ್ನು ವಹಿಸಲು ತಮ್ಮ ಶಾಸಕಾಂಗ, ಬಜೆಟ್‌ ಮತ್ತು ಮೇಲ್ವಿಚಾರಣಾ ಕಾರ್ಯಗಳನ್ನು ಬಳಸಿಕೊಳ್ಳಲು ಜಿ20 ರಾಷ್ಟ್ರಗಳ ಸಂಸತ್‌ ಅಧ್ಯಕ್ಷರು ಪ್ರತಿಜ್ಞೆ ಮಾಡಿದರು. ಪಿ20 ಸಮಾವೇಶದಲ್ಲಿ ಜಂಟಿ ಹೇಳಿಕೆ ಮೂಲಕ, ದ್ವೇಷ, ವರ್ಣಭೇದ, ಅಸಹಿಷ್ಣುತೆ ಸೇರಿದಂತೆ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಖಂಡಿಸಿದರು. ಅಲ್ಲದೇ ಶಾಂತಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ಪಿ20 ಸಮಾವೇಶದ ನೇಪಥ್ಯದಲ್ಲಿ ಮೆಕ್ಸಿಕೊ ಸಂಸತ್‌ನ ಸ್ಪೀಕರ್‌ ಅನಾ ಲಿಲಿಯಾ ರಿವೆರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖೀ ಕಟ್ಟಿ ಶುಭಾಶಯ ಕೋರಿದರು.

 

Advertisement

Udayavani is now on Telegram. Click here to join our channel and stay updated with the latest news.

Next