ಧಾರವಾಡ: ದೇಶದ ಭವಿಷ್ಯ ನಿರ್ಮಾಣ ಮಾಡುವ ವಿವಿ ಹಾಗೂ ಕಾಲೇಜು ಕ್ಯಾಂಪಸ್‌ಗಳಲ್ಲಿ ಸಂಘಟನಾತ್ಮಕ ಹಾಗೂ ಸೈದ್ಧಾಂತಿಕ ರೂಪದಲ್ಲಿ ಫ್ಯಾಸಿಸಂ ದಾಳಿ ಆಗುತ್ತಿದ್ದು, ಇದಕ್ಕೆ ಪ್ರತಿರೋಧದ ಪ್ರತಿಕ್ರಿಯೆ ಜೊತೆಗೆ ಕ್ರಿಯೆಗೂ ಮುಂದಾಗುವ ಅಗತ್ಯವಿದೆ ಎಂದು ಡಾ| ಸಿದ್ದನಗೌಡ ಪಾಟೀಲ ಹೇಳಿದರು.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ಮೇ ಸಾಹಿತ್ಯ ಮೇಳದ “ಅಸಹಿಷ್ಣುತೆ: ಕ್ಯಾಂಪಸ್ ಬ್ಲೂಸ್’ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಫ್ಯಾಸಿಸಂಗೆ ಚಹರೆ ಇಲ್ಲ. ಆದರೆ ಲಕ್ಷಣಗಳಿವೆ. ಆ ಲಕ್ಷಣಗಳನ್ನು ಅರಿತು ತಕ್ಕ ಪ್ರತಿರೋಧ ನೀಡುವ ಧ್ವನಿ ನಮ್ಮದಾಗಬೇಕು. ಸಂಘಟನಾತ್ಮಕ ದಾಳಿಗೆ ತಿರಗೇಟು ನೀಡಲು ನಾವು ಒಗ್ಗಟ್ಟಾಗಬೇಕು.
ವಿವಿಗಳು ಪಠ್ಯಕ್ರಮದ ಮೂಲಕ ಮಾಡುತ್ತಿರುವ ಸೈದ್ಧಾಂತಿಕ ದಾಳಿ ಎದುರಿಸುವ ಬಗ್ಗೆ ನಾವೆಲ್ಲ ಗಂಭೀರ ಚಿಂತನೆ ಕೈಗೊಳ್ಳಬೇಕು ಎಂದರು. ಮಲ್ಲಿಕಾರ್ಜುನ ಮೇಟಿ ಮಾತನಾಡಿ, ಈಗಿನ ಶೈಕ್ಷಣಿಕ ಚಟುವಟಿಕೆಗಳು ರಾಜಕೀಯ ಗೊಂಬೆ ಆಗಿದ್ದು, ವಿವಿಯ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಮಧ್ಯೆ ದೊಡ್ಡ ಕಂದಕ ನಿರ್ಮಿಸಿದೆ.
ಇದರಿಂದ ರಾಜ್ಯದ ಎಲ್ಲ ವಿವಿಗಳು ನಿಷ್ಕಿಯಗೊಂಡಿದ್ದು, ಇವುಗಳಿಗೆ ಮತ್ತೆ ಜೀವ ತುಂಬಿ ಉತ್ತಮ ಶೈಕ್ಷಣಿಕ ಚಟುವಟಿಕೆ ರೂಪಿಸುವ ಕೆಲಸವಾಗಬೇಕು ಎಂದರು. ಜ್ಯೋತಿ ತುಮಕೂರು ಮಾತನಾಡಿ, ಜೆಎನ್‌ಯು ವಿದ್ಯಾರ್ಥಿ ಸಂಘದ ಪರ ಕರಪತ್ರ ಹಂಚಲು ಹೋದ ನನ್ನ ಮೇಲೆ ಹಲ್ಲೆ ಮಾಡಿದ್ದಲ್ಲದೆ ದೇಶದ್ರೋಹಿ ಹಣೆಪಟ್ಟಿ ಕಟ್ಟಿ ನನ್ನ ವಿರುದ್ಧ ಕೇಸ್ ದಾಖಲಿಸಲಾಯಿತು.
ಆದರೆ, ನ್ಯಾಯಾಲಯ ನಾನು ನಿರ್ದೋಷಿ ಎಂದು ಹೇಳಿ ಕೇಸ್ ಖುಲಾಸೆಗೊಳಿಸಿದೆ. ಈ ರೀತಿ ಹಲ್ಲೆ ನಡೆಸಿ ದೇಶದ್ರೋಹಿ ಹಣೆಪಟ್ಟಿ ಕಟ್ಟುವ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಸಜ್ಜುಗೊಳ್ಳದಿದ್ದರೆ ಮುಂದೊಂದು ದಿನ ತೊಂದರೆ ತಪ್ಪಿದ್ದಲ್ಲ ಎಂದರು. ವಿದ್ಯಾರ್ಥಿ ಸಂಘಟನೆಯ ಮುತ್ತುರಾಜ್ ಮಾತನಾಡಿ, ಕ್ಯಾಂಪಸ್‌ಗಳೇ ಸಮಾಜದ ಪ್ರತಿಬಿಂಬ.
ಇಲ್ಲಿ ದೌರ್ಜನ್ಯಗಳಿಂದ 12 ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಬ್ಲೂ ಕ್ಯಾಂಪಸ್ ನಿರ್ಮಾಣ ಮಾಡಿ ಪರಸ್ಪರ ಅನೋನ್ಯ ಬಾಂಧವ್ಯ ಉಂಟು ಮಾಡುವ ಅವಶ್ಯಕತೆ ಇದೆ ಎಂದರು. ದೆಹಲಿಯ ಜೆಎನ್‌ಯು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಮಲ್ ಪಿ.ಪಿ. ಆಶಯ ಭಾಷಣ ಮಾಡಿದರು. ಕೆ.ಎಚ್. ಪಾಟೀಲ ಸಂಯೋಜಿಸಿದರು.