ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನ ಹದಿನೈದು ನ್ಯಾಯಪೀಠಗಳಲ್ಲಿ ಸೋಮವಾರ 228 ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಗಳ ವಿಚಾರಣೆ ನಡೆಯಲಿದೆ. ಈ ಪೈಕಿ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಕೋರ್ಟ್‌ನಲ್ಲಿಯೇ 205 ಪ್ರಕರಣಗಳು ಇವೆ. ಈ ಪೈಕಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ 189 ಅರ್ಜಿಗಳು ಸೇರಿವೆ.
ಇನ್ನೊಂದು ಪ್ರಮುಖ ವಿಚಾರವೆಂದರೆ ಕಳೆದ ಒಂದು ವಾರದ ಅವಧಿಯಲ್ಲಿ ಸಲ್ಲಿಕೆಯಾಗಿದ್ದ ಪಿಐಎಲ್‌ಗಳ ಪೈಕಿ 51 ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದ ಮುಂದೆಯೇ ವಿಚಾರಣೆಗೆ ಬಂದಿದ್ದವು.
ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಇಷ್ಟು ಸಂಖ್ಯೆಯ ಪಿಐಎಲ್‌ಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಹಲವು ವರ್ಷಗಳಿಂದ ಬಾಕಿ ಇರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯೂ ನಡೆಯಲಿದೆ.
ಮುಖ್ಯ ನ್ಯಾ| ಯು.ಯು. ಲಲಿತ್ ನೇತೃತ್ವದ ಪೀಠದ ಮುಂದೆ ಸಲ್ಲಿಕೆಯಾಗಿರುವ ಸಿಎಎ ವಿರುದ್ಧದ ಅರ್ಜಿಗಳನ್ನು ಒಂದಾಗಿ ಪರಿಗಣಿಸಿ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಸೋಮವಾರ ವಿಚಾರಣೆಗೆ ಬರಬಹುದಾದ ಪ್ರಕರಣಗಳ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಮಹಿಳೆಯರಿಗೆ ರಕ್ಷಣೆ ನೀಡುವ ವಿಚಾರ ಕೂಡ ಇದೆ.
ಸಿಎಎ ವಿರುದ್ಧ ಜಮೀಯತ್, ಉಲೇಮಾ-ಇ-ಹಿಂದ್, ಸಿಪಿಐ, ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ ಸೇರಿದಂತೆ ಪ್ರಮುಖ ಸಂಘಟನೆಗಳು, ಪಕ್ಷಗಳು ಮೇಲ್ಮವಿ ಸಲ್ಲಿಸಿವೆ.